Monday, July 30, 2012

ಅನುಭವ ಮತ್ತು ತಲ್ಲೀನತೆ


ಕಣ್ತಪ್ಪಿನಿಂದ ಡಿಲೀಟ್ ಆಗಿದ್ದ ಈ ಬರವಣಿಗೆಯನ್ನು ಮತ್ತೆ ಇಲ್ಲಿ ಪ್ರಕಟಿಸಿದ್ದೇನೆ -ಎಚ್.ಎಸ್.ಆರ್.
ಅನುಭವ ಮತ್ತು ತಲ್ಲೀನತೆ
ಇದು ಕೂಡ, ನಮ್ಮೆಲ್ಲರನ್ನೂ ಕಾಡಿರಬಹುದಾದ ಉತ್ತರವಿಲ್ಲದ ಪ್ರಶ್ನೆ. ಯಾವುದೇ ಸಂಗತಿಯನ್ನು ತೀವ್ರವಾಗಿ ಅನುಭವಿಸುವುದಕ್ಕೂ ಅದನ್ನು ಕುರಿತು ಆಲೋಚಿಸುವುದಕ್ಕೂ ಇರುವ ಸಂಬಂಧದ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಅವು ಕಣ್ಣು, ಕಿವಿ, ಮೂಗು, ಚರ್ಮ ಮುಂತಾದ ಇಂದ್ರಿಯಗಳಿಂದ ಪಡೆಯುವ ಹಲವು ಬಗೆಯ ಅನುಭವಗಳಿರಬಹುದು ಅಥವಾ ಇವುಗಳಾಚೆಗೆ ಇದೆ ಎನ್ನಲಾದ ಮಾನಸಿಕವಾದ, ಭಾವನಾತ್ಮಕವಾದ ಕೆಲವೊಮ್ಮೆ ಅತೀಂದ್ರಿಯವೆಂದೂ ಕರೆಯಲಾಗುವ ಅನುಭವಗಳೇ ಇರಬಹುದು.  ಸಂಗೀತದ ಹಾಗೆ ಒಂದೇ ಒಂದು ಇಂದ್ರಿಯಕ್ಕೆ ಗೊತ್ತಾಗುವ ನೇರ ಅನುಭವ ಇರಬಹುದು ಅಥವಾ ಹಲವು ಇಂದ್ರಿಯಗಳ ಅನುಭವಗಳು ಸಂಕೀರ್ಣವಾಗಿ ಕಲೆತಿರುವ ಕೂಡುಅನುಭವ ಆಗಿರಬಹುದು. ಉದಾಹರಣೆಗೆ, ಗಂಡು-ಹೆಣ್ಣು ಕೂಡಿ ಪಡೆಯುವ ಅನುಭವವು ಎಲ್ಲ ಇಂದ್ರಿಯಗಳ ಕಟು-ಮಧುರ ಅನುಭವಗಳ ಸಂಕೀರ್ಣ ಹೆಣಿಗೆಯಲ್ಲವೇ? ನಾವು ನಮ್ಮ ವ್ಯಕ್ತಿತ್ವದ ಗಡಿಗೆರೆಗಳನ್ನು ದಾಟಿ, ಬೇರೊಂದರಲ್ಲಿ, ಕಳೆದುಹೋಗುವ ಆ ಪರಿ ಈ ಲೋಕದ ಎಷ್ಟು ಜನರಿಗೆ ಎಷ್ಟು ಬಾರಿ ಆದೀತು? ಬಹಳ ಬಹಳ ಅಪರೂಪ.
ನಮ್ಮ ಬಾಲ್ಯಾನುಭವಗಳ ಲೋಕದ ಮರುಕಳಿಕೆಯೂ ಹಾಗೆಯೇ. ಅವು ಮೂಡುವುದು ಇಂದ್ರಿಯಗಳ ಅನುಭವದ ಮರುಸೃಷ್ಟಿಯಾಗಿಯೋ ಅಥವಾ ಅವುಗಳನ್ನು ಮಾತುಗಳಲ್ಲಿ ಕಟ್ಟಿರುವ ನೆನಪು ಆಗಿಯೋ ನೀವೇ ಹೇಳಿ. ಆ ನೆನಪುಗಳನ್ನು ಬೇರೆಯವರಿಗೆ ಹೇಳಿದಾಗ ಅಲ್ಲ, ಸ್ವತಃ ನಾವೇ ಒಳಗಿನಿಂದ ಹೊರಗೆ ತಂದುಕೊಂಡಾಗ ನಿಜಕ್ಕೂ ಏನಾಗುತ್ತದೆ. ನಿಮಗೂ ಗೊತ್ತು. ಈಗ ಮೂಸುವ ಯಾವುದೋ ಗಂಧ, ಕೇಳುವ ಯಾವುದೋ ನಾದ, ಕಳೆದ ಅನುಭವಗಳ ಲೋಕಕ್ಕೆ ಲಗ್ಗೆಹಾಕಿ, ಮರೆತು ಮಲಗಿದ್ದ ಯಾವುದೋ ಲೋಕವನ್ನು ಮತ್ತೆ ಹುಟ್ಟಿಸುತ್ತದೆ. ಇಂಥ ಅನುಭವಗಳು ಎಲ್ಲಿ ಸ್ಟೋರ್ ಆಗಿರುತ್ತವೆ? ನಮ್ಮ ಮೆದುಳಿನಲ್ಲಿ ಬೇರೆ ಬೇರೆ ಇಂದ್ರಿಯಗಳ ಅನುಭವದ ದಾಖಲಾತಿ ಮತ್ತು ಸಂಗ್ರಹಕ್ಕೆಂದು ಮೀಸಲಾಗಿರುವ, ಜಾಗಗಳಲ್ಲಿಯೋ ಅಥವಾ ಭಾಷಿಕ ನೆನಪುಗಳ ಭಂಡಾರವೊಂದು ಇದೆಯೋ. ನಾವು ಯಾವಾಗಲೂ ಅನುಭವಗಳನ್ನು ಭಾಷೆಗೆ ಅನುವಾದ ಮಾಡಿಕೊಳ್ಳುತ್ತಿರುತ್ತೇವೆಯೇ?   
ಅದಿರಲಿ, ಈ ರೀತಿಯ ಅನುಭವಗಳನ್ನು ಪಡೆಯುವಾಗ ನಮ್ಮ  ಮೈ, ಮನಸ್ಸು ಮತ್ತು ಪ್ರಜ್ಞೆಗಳ ನಡುವಿನ ಸಂಬಂಧ ಹೇಗಿರುತ್ತದೆ ಎಂಬುದು ನಾನು ಇಲ್ಲಿ ಹುಡುಕುತ್ತಿರುವ ವಿಷಯ. ಅನುಭವದ ತೀವ್ರತೆಯನ್ನು ಹೇಳುವಾಗ, ತಲ್ಲೀನವಾಗುವುದು, ಮೈಮರೆಯುವುದು ಎಂಬ ಪದಗಳನ್ನು ನಾವು ಬಳಸುತ್ತೇವೆ. ನಿಜಕ್ಕೂ ಮರೆಯಬೇಕಾದ್ದು ಮನವನ್ನೋ ಮೈಯನ್ನೋ? ಕುವೆಂಪು ಅವರು ತಮ್ಮ ಹಸುರು ಎಂಬ ಕವಿತೆಯಲ್ಲಿ ಹೀಗೆ ಹೇಳುತ್ತಾರೆ:
ಹಸುರಿತ್ತಲ್ ಹಸುರತ್ತಲ್
ಹಸುರೆತ್ತಲ್ ಕಾಡಿನಲಿ
ಹಸುರಾದುದೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ            
ಎಂದು ಬರೆಯುತ್ತಾರೆ. ಅಂತೆಯೇ ಗಗನವನ್ನು ಮೈನೀಲಿಗಟ್ಟುವವರೆಗೆ ನೋಡಬೇಕೆಂದು ಹೇಳುತ್ತಾರೆ. ಇಂಗ್ಲಿಷ್ ಕವಿಯಾದ ಎಜ್ರಾ ಪೌಂಡ್ ಕೂಡ,
        ‘I stood still and was a tree amid the wood'
ಎನ್ನುತ್ತಾನೆ. ಹೀಗೆ ಅನುಭವದಲ್ಲಿ ಮೈಮರೆತಿರುವಾಗ ನಮ್ಮ ಮನಸ್ಸು ಏನು ಮಾಡುತ್ತಿರುತ್ತದೆ ಎನ್ನುವುದು ಮುಖ್ಯವಾದ ಪ್ರಶ್ನೆ. ಅದು ಆಲೋಚನೆಯಲ್ಲಿ ತೊಡಗಿರುವುದೇ? ತೊಡಗಿರಬೇಕೇ, ಆ ಅನುಭವನ್ನೇ ಕುರಿತು, ಆಗಲೇ ಯೋಚಿಸತೊಡಗಿದರೆ, ಅನುಭವದ ತೀವ್ರತೆಗೆ ಭಂಗ ಬರುತ್ತದೆಯೇ? ಆ ಅನುಭವವನ್ನು ಕುರಿತ ಹಾಗೆ ನಮ್ಮ ಮನಸ್ಸಿನಲ್ಲಿ ಅದುವರೆಗೆ ಮನೆಮಾಡಿದ್ದ ವಿಚಾರಗಳು, ಪೂರ್ವಾಗ್ರಹಗಳು, ಭಯಗಳು ಮತ್ತು ಆತಂಕಗಳು ಅನುಭವದ ಸ್ವರೂಪವನ್ನು ಬದಲಿಸುವುದಿಲ್ಲವೇ. ಸ್ವ-ಪ್ರಜ್ಞೆ ಎನ್ನುವುದೇ ತಲ್ಲೀನತೆಯ ಶತ್ರುವಾಗಿಬಿಡುವುದೆ? ಅಂತಹ ಪ್ರಜ್ಞೆಯಿಲ್ಲದ ಪ್ರಾಣಿಗಳ ಅನುಭವವು ಮನುಷ್ಯರದಕ್ಕಿಂತ ತೀವ್ರವೇ. ಭೂತಕಾಲ ಮತ್ತು ಭವಿಷ್ಯತ್ ಕಾಲಗಳ ಬಗ್ಗೆ ನಮಗಿರುವ ತಿಳಿವಳಿಕೆಯೇ ಅನುಭವದ ಸವಿಯನ್ನು ಹಾಳುಮಾಡುತ್ತದೆಯೇ? ಅನುಭವ ಆಗಿಹೋದ ನಂತರ, ಅದರ ಬಗ್ಗೆ ಆಲೋಚನೆ ಮಾಡುವುದು ಬೇರೆ. ಅನುಭವವನ್ನು ಪಡೆಯುತ್ತಿರುವಾಗಲೇ ಅದರ ಬಗ್ಗೆ ಆಲೋಚನೆ ಮಾಡುವುದು, ಮಾತನಾಡುವುದು ಬೇರೆ. ಕೆಲವರಂತೂ ಆಹಾ, ಎಷ್ಟು ಚೆನ್ನಾಗಿದೆ! ಎಂದು ಅನುಭವಕ್ಕೆ ಮಾತಿನ ಸರ್ಟಿಫಿಕೇಟ್ ಕೊಡುತ್ತಿರುತ್ತೇವೆ. ಬೇರೆ ಕೆಲವರು ಕಂಡುದನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯುವ ಹಪಹಪಿಯಲ್ಲಿ ಮುಳುಗಿಹೋಗಿ ಅನುಭವದ ಕ್ಷಣಗಳನ್ನೇ ಕಳೆದುಕೊಳ್ಳುತ್ತಾರೆ. ಇದೆಲ್ಲವೂ ಅನುಭವಗಳಿಂದ ಮಾಡುವ ಪಲಾಯನವೇ ಅಲ್ಲವೇ?      
ನಾವು ಮನಮರೆತು ಮೈನೆಲೆಯಲ್ಲಿ ಮಾತ್ರ ಅನುಭವ ಪಡೆಯುವುದು ಸಾಧ್ಯವಾದರೆ ಏನಾಗುತ್ತದೆ? ಈ ಸ್ಥಿತಿಯನ್ನು ಕುಮಾರವ್ಯಾಸನು ಅದ್ಭುತವಾಗಿ ಹೇಳಿದ್ದಾನೆ. ಶಾಪಗ್ರಸ್ತನಾಗಿ ಕಾಡಿನಲ್ಲಿದ್ದ ಪಾಂಡುರಾಜನು ಮಾದ್ರಿಯ ರೂಪಕ್ಕೆ ಮರುಳಾಗಿ ಶಾಪದ ಸಂಗತಿಯನ್ನೇ ಮರೆತು ಅವಳನ್ನು ಕೂಡುತ್ತಾನೆ. ಆಗಿನ ಅವನ ಸ್ಥಿತಿಯನ್ನು ಕವಿಯು ಪ್ರಜ್ಞೆ ಜಾನ್ವಂಘ್ರಿಕಟಿ ಪರಿಮಿತವಾಯ್ತು ಎಂದು ವರ್ಣಿಸುತ್ತಾನೆ. (ಪ್ರಜ್ಞೆಯು ಮೊಣಕಾಲು, ಕಾಲು ಮತ್ತು ಸೊಂಟಗಳಿಗೆ ಸೀಮಿತವಾಯಿತು.) ಶಾಪದ ಭಯವಿಲ್ಲದಾಗಲೂ ಸಂಭೋಗದ ಸುಖವು ಈ ರೀತಿಯ ತಲ್ಲೀನತೆಯನ್ನು ಅವಲಂಬಿಸುತ್ತದೆಯೇ? ಆಗ ವ್ಯಕ್ತಿಗೆ ತನ್ನ ಜೊತೆಗಾತಿ/ಜೊತೆಗಾರ ಜೀವಗಳ ಬೇಕುಬೇಡಗಳ ಬಗೆಗಿನ ಆಲೋಚನೆ ಇರುವುದೇ, ಇರಬೇಕೇ, ಇರಬಾರದೇ. ಅಥವಾ ಅದು ನಾನು-ನೀನು ಎಂಬ ಪರಸ್ಪರ ವ್ಯತ್ಯಾಸವೇ ಅಳಿದುಹೋದ ಒಂದುತನದ ಸ್ಥಿತಿಯೋ? ಆಗ ಬೇಂದ್ರೆಯವರು ಹೇಳಿದ ಹಾಗೆ ಇಬ್ಬರಿಗೂ ನಾಲ್ಕು ಕೈಗಳಿರುತ್ತವೆಯೇ? ಇಂತಹ ಸ್ಥಿತಿಯು, ನಿಜದಲ್ಲಿ ಪಡೆದುಕೊಳ್ಳಬಹುದಾದ ವಾಸ್ತವವೋ ಅಥವಾ ಮಿಂಚಿ ಮಾಯವಾಗುವ ಆದರ್ಶವೋ? ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚು.
ಇದೇ ಮಾತನ್ನು ಬೇರೆ ಅನುಭವಗಳಿಗೂ ಅನ್ವಯಿಸಬಹುದು. ಎಲ್ಲ ಕಡೆಯೂ ಅರಿಯುವಿಕೆ ಮತ್ತು ಇರುವಿಕೆಗಳ ನಡುವಿನ ದ್ವಂದ್ವವು ನಮ್ಮನ್ನು ಕಾಡುತ್ತದೆ. ಯಾವುದೇ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು, ತಿಳಿಯಬೇಕು ಎನ್ನುವ ಒತ್ತಡವೇ, ಅಪೇಕ್ಷೆಯೇ ಇರುವಿಕೆಯ ಸುಖಕ್ಕೆ ಅಡ್ಡಿಯಾಗುತ್ತದೆಯೇ? ಮತ್ತೆ ಕುವೆಂಪು ನೆನಪಾಗುತ್ತಾರೆ. ಅವರು ಪ್ರಾಣಿಗಳಿಗೂ ಮನುಷ್ಯರಿಗೂ ಹೋಲಿಕೆ ಮಾಡುತ್ತಾರೆ. ದನಕರುಗಳು ಸುಮ್ಮನೆ ಮೇಯುತ್ತಿರುತ್ತವೆ. ಅವಕ್ಕೆ ಅರಿಯುವ ಗೋಜು ಇಲ್ಲ. ಮನುಷ್ಯನಿಗೆ ಮಾತ್ರ ಈ ಗೋಜು.
        ನಾ ಮನುಜನು ಎನ್ನೆದೆಯಲ್ಲಿ ಅರಿವೆನ್ನುವ ಬಾವು
          ನೋವಾಗಿರೆ, ಕೀವಾಗಿರೆ ಬಾಳ್ಬೆಲ್ಲವೆ ಬೇವು..
          ಅರಿವಾಸೆಯ ಬಿಡು ಇರುವಾಸೆಯ ತೊಡು
          ಅರಿವಾಸೆಯೆ ಮಾಯಾಬಂಧ, ಇರುವುದೆ ಮುಕ್ತಿಯ ಆನಂದ.
ಆದರೆ, ಹೀಗೆ ಅರಿಯದೆ ಸುಮ್ಮನೆ ಇರುವ ಸ್ಥಿತಿಯು ಸ್ವತಃ ಕುವೆಂಪು ಅವರಿಗಾದರೂ ಸಾಧ್ಯವಾಯಿತೇ? ಹೇಳುವುದು ಕಷ್ಟ.
        ಹಾಗೆ ನೋಡಿದರೆ, ಪಶ್ಚಿಮದ ಕೆಲವು ವಿದ್ವಾಂಸರು ಈ ಬಗ್ಗೆ ಭಿನ್ನವಾಗಿ ಆಲೋಚಿಸಿದ್ದಾರೆ. ಉದಾಹರಣೆಗೆ ಫ್ರಾನ್ಸ್ ದೇಶದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾದ ಡೆಕಾರ್ಟೆಸ್, ಬಹಳ ಪ್ರಸಿದ್ಧವಾದ ‘I think, therefore I am’ ಎಂಬ ಮಾತನ್ನು ಹೇಳಿದ್ದಾನೆ. ನಾನು ಆಲೋಚನೆ ಮಾಡುತ್ತೇನೆ ಎನ್ನುವುದೇ ನಾನು ಬದುಕಿರುವುದಕ್ಕೆ ಸಾಕ್ಷಿ ಎಂದು ಈ ಮಾತಿನ ಅರ್ಥ. ಆಲೋಚನೆ ಮಾಡದವನು ಮನುಷ್ಯನೇ ಅಲ್ಲ ಎಂದು ಅವನ ಅಭಿಪ್ರಾಯ. ನಮಗೂ ಹಾಗೆಯೇ ಅನ್ನಿಸಬಹುದೇ? ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ವ್ಯತ್ಯಾಸವು, ಆಲೋಚನಾಶಕ್ತಿ ಹಾಗೂ ಬುದ್ಧಿಶಕ್ತಿಗಳೇ ಎಂದು ನಾವು ಹೇಳುತ್ತೇವೆ. ಆದರೆ ಬುದ್ಧಿವಂತರೆನಿಸಿಕೊಂಡವರು ತಮ್ಮ ಬದುಕುಗಳನ್ನು ನಿರ್ವಹಿಸುತ್ತಿರುವ ಬಗೆಯು ಶೋಚನೀಯವಾಗಿದೆಯಲ್ಲಾ! ಅದು ಹೋಗಲಿ ಎಂದರೆ, ಈ ಬುದ್ಧಿವಂತರು ಸಮಾಜಗಳ, ದೇಶಗಳ ಬದುಕನ್ನೇ ಅವನತಿಯ ಕಡೆಗೆ ಕರೆದೊಯ್ಯುತ್ತಿರುವರಲ್ಲಾ! ಇಂತಹ ಆಧುನಿಕ ಭಸ್ಮಾಸುರರನ್ನು ಮ್ಯಾನೇಜ್ ಮಾಡುವುದು ಹೇಗೆ? ಯಾರು?
        ಆದ್ದರಿಂದಲೇ ಮನುಷ್ಯನ ನಾಗರಿಕತೆಯ ಬೆಳವಣಿಗೆಯ ದಿಕ್ಕಿಗೂ, ಮನುಷ್ಯನ ಅಂತರಂಗದ ವಿಷಾದಕ್ಕೂ ಹತ್ತಿರದ ಸಂಬಂಧವಿದೆಯೇ ಎಂಬ ಅನಿಸಿಕೆ ಮೂಡುತ್ತದೆ. ನಾವು ಮುಂದಿನ ಹೆಜ್ಜೆಯೆಂದು ಇಟ್ಟಿದ್ದು, ಹಿಂದಿನ ಹೆಜ್ಜೆಯಾಗಿಬಿಟ್ಟಿದೆಯೇ? ನಾವು ಮತ್ತು ನಮ್ಮ ನಾಗರಿಕತೆಯು ವಾಪಸ್ ಹೋಗಲು ಸಾಧ್ಯವಿಲ್ಲದ ಸ್ಥಿತಿಯನ್ನು ತಲುಪಿ ದಶಕಗಳೇ ಕಳೆದಿವೆಯೇ?
        ಮಾತು ಎಲ್ಲಿಂದ ಎಲ್ಲಿಗೋ ಹೋಯಿತು. ಆದರೆ, ಮೂಲ ಪ್ರಶ್ನೆ ಅದೇ? ಬುದ್ಧಿ ಮತ್ತು ಭಾವನೆ ಎರಡೂ ಕೂಡ ಇಂದ್ರಿಯಗಳಿಂದ ಪಡೆಯಬಹುದಾದ ಅನುಭವಗಳ ತೀವ್ರತೆಗೆ ಅಡ್ಡಿಯಾಗುವ ಸಂಗತಿಗಳೇ? ಮನುಷ್ಯ ಮತ್ತು ವಸ್ತುಗಳ ನಡುವಿನ ಸಂಬಂಧಕ್ಕೂ ಮತ್ತು ಮನುಷ್ಯ ಹಾಗೂ ಮನುಷ್ಯರ ಸಂಬಂಧಕ್ಕೂ ಅಂತರ ಇದೆಯೇ. ಉದಾಹರಣೆಗೆ ಮಲ್ಲಿಗೆಯನ್ನು ಮೂಸುವ ಹಾಗೆ, ಜಿಲೇಬಿಯನ್ನು ತಿನ್ನುವ ಹಾಗೆ, ಮನುಷ್ಯರ ಜೊತೆಯಲ್ಲಿಯೂ ವರ್ತಿಸಲು ಸಾಧ್ಯವೇ, ಸಾಧುವೇ? ಕೆಲವರು ಹಾಗೆಯೇ ಇರುತ್ತಾರೆಯೇ. ಭಾವದ ಜೊತೆ ಮತ್ತು ಬುದ್ಧಿಯ ಹಿನ್ನೆಲೆ ಎರಡೂ ಇಲ್ಲದೆ, ಮನುಷ್ಯನಿಗೆ ಏನೂ ದಕ್ಕುವುದಿಲ್ಲ ಎನ್ನುವುದೇ ನಿಜವಾದರೆ, ತಲ್ಲೀನವಾದ, ಸಮಗ್ರವಾದ ಅನುಭವ ಎನ್ನುವುದು ಕೊನೆಗೂ ಬಿಸಿಲುಗುದುರೆಯೇ? ಮನುಷ್ಯನ ವಿಷಾದದ ಮೂಲವು ಇಲ್ಲಿದೆಯೇ? ನಮ್ಮ ಲೋಕದಲ್ಲಿ ಅಲ್ಲ, ಮನುಷ್ಯರಾಗಿ ನಾವು ಲೋಕವನ್ನು ಪಡೆಯುವ ಬಗೆಯಲ್ಲಿಯೇ ಅಸಮಾಧಾನದ, ಅಪೂರ್ಣತೆಯ, ಪ್ಯಾಶನೇಟ್ ಅಗದೆ ಬದುಕುವುದರ ಮೂಲಕಾರಣವೂ ಇದೆಯೇ.
        ಉತ್ತರ ನನಗಂತೂ ಗೊತ್ತಿಲ್ಲ. ಗೊತ್ತಿದ್ದರೆ ನಾನೂ ಮನುಷ್ಯನಾಗದೆ ದೇವರೇ ಆಗಿಬಿಡುತ್ತಿದ್ದೆ.(ಅಂದಹಾಗೆ ಆ ದೇವರುಗಳು ಹೇಗೆ ಇರುತ್ತಾರೆ?) ನಿರ್ಲಿಪ್ತರಾಗಿಯೋ ಅಥವಾ ಭಾವುಕರಾಗಿಯೋ? ಪು.ತಿ.ನ. ಅವರ ಅಹಲ್ಯೆ ನಾಟಕದಲ್ಲಿ ಬರುವ ದೇವತೆಗಳಂತೂ ಯಾವ ಲಜ್ಜೆಯೂ ಇಲ್ಲದೆ,
        ನಿರ್ಜರರಾವೆಮಗೇತರ ಭೀತಿ, ಸತತ ಬಿನದವೇ ನಮ್ಮಯ ರೀತಿ ಎನ್ನುತ್ತಾರೆ. ಮೊದಲಿಳೆಯ ಮಡದಿಯರು ಸಲುವರಮರರಿಗೆ ಎಂದು ಡಿಮ್ಯಾಂಡ್ ಮಾಡುತ್ತಾರೆ. ಮುಪ್ಪಿಲ್ಲದ ರೋಗವಿಲ್ಲದ ಆ ಸ್ಥಿತಿಗೆ ಅಹಂಕಾರ ಮತ್ತು ಆತ್ಮವಿಶ್ವಾಸಗಳೇ ಮೂಲವಾದವು. ಬೇಂದ್ರೆಯವರು ಇದನ್ನು ಅಮೃತದ ತೇಗಿನ ಮದ ಎಂದು ಕರೆದರು. ಮುಪ್ಪು, ರೋಗ, ದೈಹಿಕ ಅಸಮಾನತೆ ಮಾನಸಿಕ ಕುಗ್ಗುವಿಕೆಗಳಿಂದ ತುಂಬಿದ ನಮಗೆ ಸತತ ಬಿನದ (ಕೊನೆಮೊದಲಿಲ್ಲದ ಸಂತೋಷ) ಎನ್ನುವುದು ಸಾಧ್ಯವಿಲ್ಲದ ನಿರೀಕ್ಷೆ. ಹಾಗೆ ನೋಡಿದರೆ, ದೇವತೆ ಎನ್ನುವ ಕಲ್ಪನೆಯೇ ಮನುಷ್ಯರ ಕನಸು ಇರಬೇಕು.
        ನಮಗೆ ಮನುಷ್ಯರಿಗೆ, ಅನುಭವದ ತಣಿಯುವಿಕೆಯು, ಬಾಯಾರಿಕೆಯನ್ನು ಹಿಂಗಿಸುವುದಿಲ್ಲ. ಅದು ಮರಳಿನಲ್ಲಿ ಸುರಿದ ನೀರಿನಂತೆ ಇಂಗಿಹೋಗುತ್ತದೆ. ನಾವು ಮತ್ತೆ ಹೊಸ ಬಾಯಾರಿಕೆಯೊಂದಿಗೆ ಹೊಸ ನೀರಿಗಾಗಿ ಹಾತೊರೆಯುತ್ತೇವೆ. ಸಂಸ್ಕೃತದಲ್ಲಿ ಹೀಗೆ ಹೇಳುತ್ತಾರೆ: ಭೋಗದ ಬಯಕೆಯು ಉಪಭೋಗದಿಂದ ತಣಿಯುವುದಿಲ್ಲ. ನಮ್ಮ ಈ ಕಾಲದಲ್ಲಿ, ಕೊಂಡುಕೊಳ್ಳುವ ದಾಹದೊಂದಿಗೆ, ಒಂದು ಸೂಪರ್ ಬಜಾರಿನಿಂದ ಇನ್ನೊಂದಕ್ಕೆ ತಿರುಗುತ್ತಿರುವ ನಮಗೆ ಈ ಮಾತು ಒಂದು ಪಾಠ.                                     --------------------------

Wednesday, July 25, 2012

ತೋಮಾಸ್ ಟ್ರಾನ್ಸ್ ಟ್ರೋಮರ್ ಅವರ ಕವಿತೆಗಳು



 
ಅಕ್ಟೋಬರ್ ಚಿತ್ರ

ಇಗೊ, ತುಕ್ಕುಕಲೆ ಹರಡಿರುವ ದಿಕ್ಕೆಟ್ಟ ಹಡಗು
ಕಡಲೀಚೆಯ ಒಳನೆಲದಲಿ, ಇದರದೇನು ಕಾರ್ಯ?
ಭೂತಾಕಾರದ ಆರಿದ ದೀಪ, ಶೀತಲನೆಲದಲಿ ನಿಶ್ಚಲರೂಪ.
ಆದರೆ, ಮರಗಳ ತುಂಬ ಬಗೆಬಗೆ ಬಣ್ಣ:
ಆಚೆ ದಂಡೆಯ ನೆರವುಬೇಡುವ, ಅಳಿದುಳಿದ ಪಯಣಿಗರ
ಬಣ್ಣದಬಟ್ಟೆಯ ಬಾವುಟದ ಹಾಗೆ.

ಮನೆಯ ಹಾದಿಯಲ್ಲಿ ನಾನು.
ಹುಲ್ಲುಹಾಸಿಗೆ ನಡುವೆ ಬಿಳಿಬಿಳಿ ಅಣಬೆಗಳು.
ಯಾರದೋ ನೆರವಿಗೆ, ಹಂಬಲಿಸುವ ಬೆರಳುಗಳು.
ಆ ಅವನು, ನೆಲದಡಿಯ ಕಪ್ಪುಏಕಾಂತದಲ್ಲಿ,
ಬಿಕ್ಕಳಿಸಿ ಮಲಗಿ ಯುಗಗಳೇ ಕಳೆದಿವೆ.
ಓಡಾಡುವ ಈ ನಾವು,
ಭೂಮಿಯ ಬೆರಳುಗಳು. 
  
                                         ಒಂದು ಸಾವಿನ ಬಳಿಕ
ಹಿಂದೊಮ್ಮೆ ಒಂದು ಆಘಾತವಾಯ್ತು.
ಹೊಳೆಹೊಳೆಯುವ, ನಿಡುಬಾಲದ ಧೂಮಕೇತು ಉಳಿಯಿತು.
ಅದರಿಂದ ನಾವು, ಮನೆಯೊಳಗೆಯೆ ಬಂಧಿತರು.
ಅದರಿಂದ ನಮ್ಮ, ಟೆಲಿವಿಷನ್ ಬಿಂಬಗಳು ಮಂಜುಮಂಜು.
ಅದು, ಟೆಲಿಫೋನ್ ತಂತಿಗಳ ಮೇಲೆ ತಣ್ಣನೆಯ ಹನಿಗಳಾಗಿ ನೆಲೆಸುತ್ತಿದೆ.

ಈಗಲೂ ಮಾಗಿಯ ಸೂರ್ಯನ ಕೆಳಗೆ ನಿಧಾ..ನವಾಗಿ ಚಲಿಸಬಹುದು.
ಹಾದಿಬದಿ ಪೊದೆಯಲ್ಲಿ,  ಕೊನೆಕೊನೆ ಎಲೆ, ಉಸಿರೆಳೆಯುತ್ತಿವೆ ಹೀ..ಗೆ
ಹಳೆಯ ಟೆಲಿಫೋನ್ ಡೈರೆಕ್ಟರಿಯಿಂದ ಹರಿದ ಪುಟಗಳ ಹಾ..ಗೆ.
ಹೆಸರುಗಳನ್ನು ನುಂಗಿದೆ ಮಂಜುಬಿಳಿಥಂಡಿ.

ಈಗಲೂ ಹೃದಯದ ಬಡಿತಗಳಿಗೆ ಸ್ಪಂದಿಸುವುದು ಎಷ್ಟೊಂದು ಸುಂದರ.
ಆದರೆ, ದೇಹಕ್ಕಿಂತ ನೆರಳುಗಳೇ ನಿಜವೆನಿಸುತ್ತದೆ ಮತ್ತೆಮತ್ತೆ.
ಕವಚ, ಕುಂಡಲ, ಶಿರಸ್ತ್ರಾಣಗಳ ಅಬ್ಬರದಲ್ಲಿ,
ಸಮುರಾಯ್ ಯೋಧ ಕಾಣುತ್ತಾನೆ ಕ್ಷುಲ್ಲಕನಂತೆ, ಪೆದ್ದನಂತೆ.


 



ಹರಿದು ಹಂಚಿಹೋದ ಭಕ್ತವೃಂದ
1
ನಾವು ಸಜ್ಜಾದೆವು, ನಮ್ಮ ಮನೆ ತೋರಿಸಿದೆವು.
ಅತಿಥಿ ಯೋಚಿಸಿದ: ನೀವೇನೋ ಸುಖವಾಗಿ ಬದುಕಿದ್ದೀರಿ.
ಕೊಳೆಗೇರಿ ಇರಬೇಕು, ನಿಮ್ಮೊಳಗಿನೊಳಗೆ
2
ಚರ್ಚಿನೊಳಗೆ ಕಂಬಗಳು, ಗೋಪುರಗಳು, ಸೀಲಿಂಗುಗಳು
ಕಡು ಬಿಳಿ ಬಣ್ಣ. ನಂಬಿಕೆಯೆಂಬ ಮುರಿದ ತೋಳನ್ನು
ಕಟ್ಟಿಹಿಡಿದಿರುವ ಪ್ಲಾಸ್ಟರ್ ಕ್ಯಾಸ್ಟಿನ ಹಾಗೆ.

3
ಚರ್ಚಿನೊಳಗೊಂದು ಭಿಕ್ಷಾಪಾತ್ರೆಯಿದೆ.
ನಿಧಾನವಾಗಿ ನೆಲಮಟ್ಟದಿಂದ ಮೇಲೇರುತ್ತದೆ,
ಭಕ್ತರ ಸಾಲುಗಳ ನಡುವೆ ತೇಲುತ್ತ ಚಲಿಸುತ್ತದೆ.
4
ಆದರೆ, ಚರ್ಚಿನ ಗಂಟೆಗಳು ನೆಲದ ಕೆಳಗೆ ಮರೆಯಾಗಿವೆ.
ಅವು ಒಳಚರಂಡಿಯ ಪೈಪುಗಳಲ್ಲಿ ನೇತಾಡುತ್ತಿವೆ,
ನಾವು ಹೆಜ್ಜೆಯಿಟ್ಟಾಗೆಲ್ಲ, ಗಣಗಣಗಣ ಗಂಟೆ ಬಾರಿಸುತ್ತವೆ.
5
ನಿದ್ದೆಯಲ್ಲಿ ನಡೆವ ನಿಕೋಡೆಮಸ್, ಆ ವಿಳಾಸಕ್ಕೆ
ಪಯಣ ಹೊರಟಿದ್ದಾನೆ. ಆ ವಿಳಾಸ ಯಾರ ಬಳಿ ಇದೆ?
ಗೊತ್ತಿಲ್ಲ. ಆದರೆ, ನಾವೆಲ್ಲ ಹೋಗುತ್ತಿರುವುದು ಅಲ್ಲಿಗೆ.


ಮಂಜುಗಡ್ಡೆಗಿಂತ ಕೆಳಗೆ
ನಮ್ಮನ್ನು ಪ್ರೀತಿಸದ ಪಾರ್ಟಿಯಲ್ಲಿ, ನಾವು ಅತಿಥಿಗಳು. ಕೊನೆಗೊಮ್ಮೆ , ಪಾರ್ಟಿ ತನ್ನ ಮುಖವಾಡವನ್ನು ಬದಿಗೆಸೆಯುತ್ತದೆ, ನಿಜರೂಪ ತೋರಿಸುತ್ತದೆ: ಅದು ಗೂಡ್ಸ್ ಗಾಡಿಗಳು ಹಳಿಬದಲಿಸುವ ಷಂಟಿಂಗ್ ನಿಲ್ದಾಣ. ಕವಿದ ಮಂಜಿನಲ್ಲಿ, ಕೊರೆವ ಹಳಿಗಳ ಮೇಲೆ ಶೀತಲ ರಾಕ್ಷಸರು ನಿಂತಿದ್ದಾರೆ. ಗಾಡಿಗಳ ಬಾಗಿಲುಗಳ ಮೇಲೆ ಬಿಳಿಸುಣ್ಣದ ಅಕ್ಷರಗಳು.
ಈ ಮಾತನ್ನು ಗಟ್ಟಿಯಾಗಿ ಹೇಳಲಾಗದು. ಇಲ್ಲಿ ಅಪರಿಮಿತವಾದ, ಅದುಮಿಟ್ಟ ಹಿಂಸೆಯಿದೆ. ಅದಕ್ಕೇ ಇರಬೇಕು, ಈ ಫರ್ನೀಚರ್ ಮತ್ತು ಈ ಪರದೆಗಳು ಅಷ್ಟೊಂದು ಭಾರ. ಇಲ್ಲಿಯೇ ಇರುವ ಇನ್ನೊಂದು ಸಂಗತಿಯನ್ನು ನೋಡುವುದು ಏಕಿಷ್ಟು ಕಷ್ಟ: ಮನೆಯ ಗೋಡೆಗಳ ಮೇಲೆ ಚಲಿಸುವ, ಮಿಂಚುವಮಂಕುವ ಮುಖಗಳ  ಅಬೋಧ ಅರಣ್ಯದ ಮೇಲೆ, ನುಸುಳುವ ಒಂದು ಹಿಡಿ ಸೂರ್ಯ ಮತ್ತು ಎಲ್ಲೂ ಯಾರೂ ದಾಖಲೆಮಾಡದ ಬೈಬಲ್ಲಿನಲ್ಲಿದೇ ಒಂದು ಮಾತು: ಎಲ್ಲರೂ ನನ್ನೆಡೆಗೆ ಬನ್ನಿ. ಏಕೆಂದರೆ, ನಾನೂ ನಿಮ್ಮಂತೆಯೇ. ಗೊಂದಲಗಳಿಂದ, ಪರಸ್ಪರ ವಿರೋಧಗಳಿಂದ ತುಂಬಿತುಳುಕುವವನು.
ಮರುದಿನ ಮುಂಜಾನೆ, ನಾನು ಬೇರೊಂದು ಊರಿನಲ್ಲಿ ಕೆಲಸ ಮಾಡಬೇಕು. ಸೂರ್ಯನು ಮೂಡುತ್ತಿರುವ ನೀಲಿನಭದ ನಡುವೆ, ನನ್ನ ಶರವೇಗದ ಪಯಣ. ಆಕಾಶ, ಕಡುನೀಲಿಯ ಸಿಲಿಂಡರಿನಂತೆ,  ನನ್ನನ್ನು ಸುತ್ತುವರಿದಿದೆ. ದೂರದಲ್ಲಿ, ಮಂಜಿನಪರದೆಯ ಮೇಲೆ ಓರಿಯನ್ ನಕ್ಷತ್ರಪುಂಜ ನೇತಾಡುತ್ತಿದೆ. ಸ್ಕೂಲ್ ಬಸ್ಸಿಗಾಗಿ ಕಾಯುತ್ತ, ಮಕ್ಕಳ ಗುಂಪು ನಿಂತಿದೆ, ಸದ್ದಿಲ್ಲದೆ, ಗದ್ದಲವಿಲ್ಲದೆ. ಈ ಮಕ್ಕಳ ಒಳಿತಿಗಾಗಿ ಯಾರೂ ಪ್ರಾರ್ಥನೆ ಮಾಡುತ್ತಿಲ್ಲ. ಕೂದಲು ಬೆಳೆಯುವಷ್ಟೇ ನಿಧಾನವಾಗಿ, ಬೆಳೆಯುತ್ತಿದೆ ಬೆಳಕು.

                                                                              ತೋಮಾಸ್ ಟ್ರಾನ್ಸ್ ಟ್ರೋಮರ್
                                                                ಅನುವಾದ: 
                                                                ಎಚ್.ಎಸ್. ರಾಘವೇಂದ್ರ ರಾವ್
------------------------------------------------------------------------------------

ನನ್ನ ಕವಿತೆಗಳು ಕೂಡುತಾಣಗಳು. ಸಾಂಪ್ರಾದಾಯಿಕವಾದ ಭಾಷೆ ಮತ್ತು ದೃಷ್ಟಿಕೋನಗಳು ಸಾಮಾನ್ಯವಾಗಿ ದೂರದೂರವೇ ಇಡುವ ವಾಸ್ತವದ ಹಲವು ನೆಲೆಗಳ ನಡುವೆ ಹಠಾತ್ತಾದ ಸಂಬಂಧವನ್ನು ಕಟ್ಟಿಕೊಡುವುದು ನನ್ನ ಉದ್ದೇಶ. ಮೊದಲ ನೋಟಕ್ಕೆ ವಿರೋಧಿಗಳೆಂದು ತೋರುವ ಸಂಗತಿಗಳೂ ದಿಟದಲ್ಲಿ ನೋಡಿದಾಗ, ಸಂಬಂಧಗಳೇ ಆಗಿರುತ್ತವೆ.
        ತೋಮಾಸ್ ಟ್ರಾನ್ಸ್ ಟ್ರೋಮರ್ ಅವರು ಈ ಬಾರಿ ನೊಬೆಲ್ ಬಹುಮಾನ ಪಡೆದಿರುವ ಸ್ವೀಡಿಶ್ ಕವಿ.
    

Saturday, June 30, 2012

ವಿಸ್ಲಾವಾ ಸಿಂಬೋರ್ಸ್ಕಾ ಅವರ ಕವಿತೆಗಳು


 ವಿಸ್ಲಾವಾ ಶಿಂಬೋರ್ಸ್ಕಾ (1923-2012) ಪೋಲ್ಯಾಂಡ್ ದೇಶದ ಪ್ರಸಿದ್ಧ ಕವಿ, ಪ್ರಬಂಧಕಾರ್ತಿ, ಚಿತ್ರಗಾರ್ತಿ ಮತ್ತು ಅನುವಾದಕಿ. ಇವರು, ತಮ್ಮ ಬದುಕಿನ ಬಹುಭಾಗವನ್ನು ಕ್ರಾಕೋ ನಗರದಲ್ಲಿ ಕಳೆದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ, ರೈಲುರಸ್ತೆಗಳನ್ನು ಕಟ್ಟುವ ಸಂಸ್ಥೆಯಲ್ಲಿ ಕೆಲಸಮಾಡಿ, ಹಿಟ್ಲರನ ಕಾನ್ಸೆಂಟ್ರೇಷನ್ ಶಿಬಿರಕ್ಕೆ ಹೋಗುವ ಅಪಾಯದಿಂದ ಪಾರಾದರು. ವೃತ್ತಪತ್ರಿಕೆಗಳು ಮತ್ತು ಸಾಹಿತ್ಯಕ ಪತ್ರಿಕೆಗಳಲ್ಲಿ ಕೆಲಸಮಾಡಿದರು. ಮೊದಮೊದಲು ಕಮ್ಯೂನಿಸ್ಟ್ ವಿಚಾರಧಾರೆಯಿಂದ ಕ್ರಮೇಣ ಅದರಿಂದ ದೂರವಾಗಿ, ಸರ್ಕಾರದ ಕೋಪವನ್ನು ಎದುರಿಸಿದರು. ಅವರ ಮೊದಲ ಪುಸ್ತಕವನ್ನು ಪ್ರಕಟಿಸಲು ಸರ್ಕಾರವು, ಮೂರು ವರ್ಷಗಳು ಅನುಮತಿ ಕೊಡಲಿಲ್ಲ.
‘That’s why we are alive’, ‘Questioning yourself’, ‘Salt’, ‘People on a Bridge’, “View with a grain of sand’ ಮುಂತಾದವು ಅವರ ಪ್ರಸಿದ್ಧ ಕವನಸಂಕಲನಗಳು. ಅವರ ಇಪ್ಪತ್ತು ಪುಸ್ತಕಗಳಲ್ಲಿ ಕೆಲವು ಅನೇಕ ಭಾಷೆಗಳಿಗೆ ಅನುವಾದವಾಗಿವೆ. ಶಿಂಬೋರ್ಸ್ಕಾ ಅವರಿಗೆ ,1996 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪಾರಿತೋಷಕ ಬಂದಿದೆ.
ಸುಮಾರು 350 ಕವಿತಗೆಳನ್ನು ಮಾತ್ರ ಬರೆದಿರುವ ಶಿಂಬೋರ್ಸ್ಕಾ ಅವರನ್ನು, ಈ ಬಗ್ಗೆ ಪ್ರಶ್ನಿಸಿದಾಗ, ನಮ್ಮ ಮನೆಯಲ್ಲಿ ಕಸದ ಬುಟ್ಟಿಯಿದೆ ಎಂದು ಉತ್ತರಿಸಿದ್ದರಂತೆ. ಅವರ ಕಾವ್ಯದಲ್ಲಿ ಖಚಿತತೆ ಮತ್ತು ವ್ಯಂಗ್ಯಗಳಿವೆ, ಜೀವನದ ವಾಸ್ತವ ಸಂಗತಿಗಳ ಚೌಕಟ್ಟಿನಲ್ಲಿ, ಚಾರಿತ್ರಿ ಹಾಗೂ ಜೈವಿಕ ಸಂದರ್ಭಗಳನ್ನೂ ಅಳವಡಿಸಿಕೊಳ್ಳಲು ಈ ಗುಣಗಳು ಅವರಿಗೆ ನೆರವಾಗಿವೆಯೆಂದು ಹೇಳಲಾಗಿದೆ. ಅವರ ನಾಲ್ಕು ಕವಿತೆಗಳ ಕನ್ನಡ ಅನುವಾದ ಇಲ್ಲಿದೆ. 



ನಮ್ಮ ಕಾಲದ ಮಕ್ಕಳು

ನಮ್ಮ ಕಾಲದ ಮಕ್ಕಳು ನಾವು.
ನಮ್ಮದು, ರಾಜಕೀಯದ ಕಾಲ.

ಹಗಲು ಇರುಳು,
ನಾವು, ನೀವು, ಅವರು
ಎಲ್ಲರು ಮಾಡುವ ಎಲ್ಲ ಕೆಲಸಗಳು,
ರಾಜಕೀಯ ವಿದ್ಯಮಾನ!

ನೀವು ಇಷ್ಟಪಟ್ಟರೂ ಅಷ್ಟೆ, ಪಡದಿದ್ದರೂ ಅಷ್ಟೆ.
ನಿಮ್ಮ ವಂಶವಾಹಿಗಳಲ್ಲಿ ಇತಿಹಾಸದ ರಾಜಕೀಯವಿದೆ
ಚರ್ಮದ ಬಣ್ಣಕ್ಕೆ ರಾಜಕೀಯದ ಅಂಟಿದೆ
ಕಣ್ಣಿನ ನೋಟದಲ್ಲಿ ರಾಜಕೀಯದ ನಂಟಿದೆ.

ನೀವಾಡುವ ಮಾತುಗಳಿಗೆ ರಾಜಕೀಯದ ಗಂಧವಿದೆ,
ನಿಮ್ಮ ಮೌನದ ಒಳಗೆ ಮಾತಿನ ಮಸಲತ್ತಿದೆ.
ಬಡಬಡಿಸಿದರು ಸರಿಯೆ, ಸುಮ್ಮನಿದ್ದರು ಸರಿಯೆ
ಅದು ಕೂಡ ಇದು ಕೂಡ ರಾಜಕೀಯ.

ಊರೆಲ್ಲ ಬಿಟ್ಟು, ಬೆಟ್ಟಗಳ ಕಡೆಗೆ ಹೊರಟಿರಾ?
ಸರಿ ಮತ್ತೆ, ಹಾಗಾದರೆ ನೀವು
ರಾಜಕೀಯದ ನೆಲದ ಮೇಲೆ ರಾಜಕಾರಣಿಯಂತೆ
ನಡೆಯುತ್ತಿದ್ದೀರಿ.

ರಾಜಕೀಯದ ಸುಳಿವಿಲ್ಲದ ಕವಿತೆಗಳೂ ರಾಜಕೀಯವೆ.
ಮೇಲೆ ಹೊಳೆಯುತ್ತಿದೆ ಚಂದ್ರಬಿಂಬ
ಅವನು ಕೂಡ ಈಗ ಚಂದ್ರನಲ್ಲ.
‘To be or not to be. That is the question’
ಪ್ರಶ್ನೆಯೇ? ಅದು ಎಂಥ ಪ್ರಶ್ನೆ!
ಮುದ್ದು ಗೆಳೆಯನೆ ಕೇಳು, ಇಲ್ಲೊಂದು ಸಲಹೆಯಿದೆ,
ಅದು ರಾಜಕೀಯದ ಭಾರಹೊತ್ತ ಪ್ರಶ್ನೆ.


ರಾಜಕೀಯ ಮಹತ್ವ ಪಡೆಯುವುದಕ್ಕೆ
ಮನುಷ್ಯನಾಗಿರುವುದು ಕೂಡ ಅನಿವಾರ್ಯವಲ್ಲ.
ಕಚ್ಚಾ ಪೆಟ್ರೋಲ್ ಅದರೂ ಸಾಕು ಅಥವಾ ರಸಗೊಬ್ಬರ
ಅಥವಾ ಮಾರುವ ಕೊಳ್ಳುವ ಯಾವುದೇ ಸರಕು.

ಅಥವಾ ಶೃಂಗಸಭೆಯಲ್ಲಿ ಬಳಸುವ ಮೇಜು ಹೇಗಿರಬೇಕು?
ಇದನು ಕುರಿತೂ ಚರ್ಚೆ ಹಲವು ಕಾಲ.
ಸಾವುಬದುಕಿನ ಚರ್ಚೆ ಮಾಡಬೇಕಿದೆ ನಾವು,
ಮೇಜು ಗುಂಡಗೆ ಇರಲೊ ಚಚ್ಚೌಕವೋ!

ಇದೆಲ್ಲದರ ನಡುವೆ, ಜನ ಸಾಯುತ್ತಿದ್ದರು,
ಪಶುಪಕ್ಷಿ ನಶಿಸುತ್ತಿದ್ದವು,
ಮನೆಗಳು ಉರಿಯುತ್ತಿದ್ದವು,
ಹೊಲಗಳು ಒಣಗುತ್ತಿದ್ದವು,
ಇಷ್ಟೆಲ್ಲ ರಾಜಕೀಯ ಇಲ್ಲದಿದ್ದ,
ಈಗ ಮರವೆಗೆ ಸಂದ
ಆ ಕಾಲದಂತೆಯೇ....

ಹೀಗೆ ಬಂದು ಹಾಗೆ ಹೋಗುವ ಈ ದಿನವನ್ನು
ನಾವೇಕೆ ಇಷ್ಟೊಂದು ಭಯದಿಂದ, ವಿಷಾದದಿಂದ ಎದುರಿಸುತ್ತೇವೆ?
ಉಳಿಯದಿರುವುದೆ ಅದರ ಸಹಜಗುಣವಲ್ಲವೇ?

ನಿಜ, ನಾವು ಬೇರೆ ಬೇರೆ,
ಎರಡು ಹನಿ ನೀರಿನಂತೆ.
ಆದರೂ, ಉಳಿವ ತಾರೆಯ ಕೆಳಗೆ ಬಿಡದೆ ಹುಡುಕುತ್ತೇವೆ
ಪ್ರೀತಿ ಒಗ್ಗಟ್ಟುಗಳ ರೀತಿಯನ್ನು
ಮುಗುಳುನಗೆ ಹರಿಸುತ್ತ, ಮುದ್ದಿಸುತ್ತ.

ವಿಸ್ಲಾವಾ ಸಿಂಬೋರ್ಕಾ



ಒಂದೇ ಒಂದು ಬಾರಿ
ಇಲ್ಲಿ ಯಾವುದೂ ಎಂದಿಗೂ ಮರಳಿ ನಡೆಯುವುದಿಲ್ಲ,
ಆದ್ದರಿಂದಲೆ ನಮಗೆ, ತಿದ್ದಿಕೊಳ್ಳುವ ಅವಕಾಶ ಇಲ್ಲವೇ ಇಲ್ಲ.
ಮಾಡಿದ್ದಕ್ಕೆ ಮರುಗಿ ಕೊರಗಿ ಬದಲಾಗುತ್ತೇವೆ
ಕಳೆದ ಕಾಲ ಮರಳಿ ಬರದೆ, ಕಾಣೆಯಾಗುತ್ತೇವೆ.

ನೀನು ಈ ಜಗತ್ತಿನ ಕಡುದಡ್ಡನಿರಬಹುದು
ಹಗಲು ಇರುಳು ಕುಡುಮಿ ಕುಡುಮಿ ಓದಿರಬಹುದು
ಆದರೆ, ಇಲ್ಲಿ ಸೆಪ್ಟೆಂಬರ್ ಪರೀಕ್ಷೆ ಇಲ್ಲ.
ಉಳಿದರೂ ಉರುಳಿದರು ಒಂದೆ ಅವಕಾಶ.

ಯಾವ ದಿನವೂ ನೆನ್ನೆಯ ನಕಲುಪ್ರತಿಯಲ್ಲ.
ಹೀಗೆಯೇ ಮುತ್ತುಕೊಟ್ಟು, ಹೀಗೆಯೇ ಅಪ್ಪಿಕೊಂಡು
ಹೀಗೆಯೇ ಹಿಗ್ಗಬೇಕೆಂದು, ಯಾವ ಇರುಳೂ
ಕೂಡ ಪಾಠ ಕಲಿಸುವುದಿಲ್ಲ.

ಒಂದು ದಿನ, ಯಾವುದೋ ಸೋಮಾರಿ ನಾಲಿಗೆ
ನಿನ್ನ ಹೆಸರ ಹೇಳಿತು, ಹಾಗೇ ಸುಮ್ಮನೆ
ಕೋಣೆಯೊಳಗೆ ಎಸೆದಂತೆ ಗುಲಾಬಿ, ಮಲ್ಲಿಗೆ
ಏನೆಂಥ ಬಣ್ಣ ಎಷ್ಟೊಂದು ಗಮ್ಮನೆ.

ಮರುದಿನ ಮುಂಜಾನೆ. ಬಳಿಯಲ್ಲೇ ನೀನಿರುವೆ,
ನನ್ನ ಕಣ್ಣು ತಿರುಗುತ್ತಿದೆ ಗಡಿಯಾರದ ಕಡೆಗೆ.
ಗುಲಾಬಿ? ಗುಲಾಬಿ? ಹಾಗೆಂದರೆ ಏನು?
ಅದು ಹೂವೇ, ಅದು ಹೂವೇ ಅಥವಾ ಬರಿ ಬಂಡೆ?  



ವಿಸ್ಲಾವಾ ಸಿಂಬೋರ್ಕಾ




ಪವಾಡಗಳ ಜಾತ್ರೆ


ಅತಿ ಸಾಮಾನ್ಯ ಪವಾಡ:
ಇಷ್ಟೊಂದು ಅತಿ ಸಾಮಾನ್ಯ ಪವಾಡಗಳು ನಡೆಯುತ್ತವೆ ಎನ್ನುವುದು.

ಸಾಮಾನ್ಯ ಪವಾಡಗಳು:
ನಟ್ಟನಡು ರಾತ್ರಿಯಲ್ಲಿ
ಕಾಣದ ನಾಯಿಗಳು ಬೊಗಳುವ ದನಿ

ಎಷ್ಟೋ ಪವಾಡಗಳಲ್ಲಿ ಇದೂ ಒಂದು:
ಗಾಳಿತುಂಬಿದ ಪುಟ್ಟ ಮೋಡ.
ಆದರೂ ಅದು ವಿಶಾಲವಾದ, ಭಾರವಾದ ಚಂದ್ರನನ್ನು ಮರೆಮಾಡಬಲ್ಲುದು.

ಒಂದು ಸಂಗತಿಯಲ್ಲಿ ಹಲವು ಪವಾಡಗಳು :
ನೀರಿನಲ್ಲಿ ಒಡಮೂಡಿರುವ ಆಲ್ಡರ್ ಮರ,
ಎಡ ಬಲವಾಗಿದೆ, ಬಲ ಎಡವಾಗಿದೆ
ಬುಡ ಮೇಲಾಗಿದೆ, ಎಲೆ ಚಿಗುರು ಕೆಳಗಿದೆ
ಎಂಥ ಕಿರಿಯಾಳದ ನೀರಿನಲ್ಲೂ
ಅದು ತಳವನ್ನು ತಲುಪುವುದಿಲ್ಲ.

ಪ್ರತಿದಿನದ ಪವಾಡ:
ದುರ್ಬಲವಾದ, ಸಡಿಲಗಾಳಿ.
ತಲ್ಲಣದ ಸಮಯದಲ್ಲಿ ಬುಡಮೇಲು ಬಿರುಗಾಳಿ.

ಸರಿಸಮನಾದ ಪವಾಡಗಳಲ್ಲಿ ಮೊದಲನೆಯದು:
ಹಸು, ಹಸು ಆಗಿರುವುದು.

ಯಾವುದಕ್ಕೂ ಎರಡನೆಯದಲ್ಲದ ಪವಾಡ:
ಇಂಥ ಹಣ್ಣಿನ ತೋಟ,
ಅಂಥ ಬೀಜದಿಂದ.

ಕೊಂಬು ಕಿರೀಟಗಳಿಲ್ಲದ ಪವಾಡ:
ಹತ್ತು ಕಡೆಗೆ ಹಾರುವ ಬಿಳಿ ಪಾರಿವಾಳಗಳು.

ಪವಾಡ. ಇದನ್ನು ಬೇರೆ ಯಾವ ಹೆಸರಿನಿಂದ ಕರೆಯೋಣ:
ಈ ದಿನ ಸೂರ್ಯ ಹುಟ್ಟಿದ್ದು ಮೂರು ಗಂಟೆ ಹದಿನಾಲ್ಕು ನಿಮಿಷಕ್ಕೆ
ಮತ್ತು ಮುಳುಗುತ್ತಾನೆ ಎಂಟು ಗಂಟೆ ಒಂದು ನಿಮಿಷಕ್ಕೆ.

ಮತ್ತೊಂದು ಪವಾಡ. ಇದು ಇನ್ನಷ್ಟು ಬೆರಗು ಮೂಡಿಸಬೇಕಿತ್ತು:
ನಮ್ಮ ಕೈಯಲ್ಲಿ ಆರಕ್ಕಿಂತ ಕಡಿಮೆ ಬೆರಳುಗಳಿವೆ,
ನಿಜ, ಆದರೆ ಅದು ಕೊನೆಗೂ ನಾಲ್ಕಕ್ಕಿಂತ ಜಾಸ್ತಿ.

ಪವಾಡ. ಸುಮ್ಮನೆ ಸುತ್ತಲೂ ನೋಡಿ.
ಲೋಕ ಎಲ್ಲೆಲ್ಲಿಯೂ ಇದೆ.

ಒಂದು ವಿಶೇಷ ಪವಾಡ. ಹಾಗೆ ನೋಡಿದರೆ ಪ್ರತಿಯೊಂದು ಸಂಗತಿಯೂ ಕೊಡುಗೆಯೇ:
ಆಲೋಚನೆಯನ್ನು ಮೀರಿದುದರ ಬಗ್ಗೆ
ಆಲೋಚಿಸಬಹುದು.

ವಿಸ್ಲಾವಾ ಸಿಂಬೋರ್ಸ್ಕಾ




ಕೆಲವು ಜನರು

ಯಾವಾಗಲೂ ಅಷ್ಟೆ.
ಯಾವುದೋ ದೇಶದಲ್ಲಿ,
ಸುಡುವ ಸೂರ್ಯನ ಕೆಳಗೆ, ಮೋಡಗಳ ಕೆಳಗೆ
ಕೆಲವು ಜನ ಓಡಿಹೋಗುತ್ತಿರುತ್ತಾರೆ,
ಕೆಲವರಿಗೆ ಹೆದರಿ.

ಬಿಟ್ಟುಹೋಗುತ್ತಾರೆ, ಒಂದಿಷ್ಟು ಬದುಕು,
ಬೀಜಬಿತ್ತಿದ ಹೊಲಗಳು, ಕೋಳಿಗಳು, ನಾಯಿಗಳು, ಕನ್ನಡಿಗಳು,
ಕನ್ನಡಿಯಲ್ಲಿ ನೋಡಿಕೊಳ್ಳುತ್ತಿರುವ ಬೆಂಕಿನಾಲಿಗೆಗಳು.

ಕುಸಿವ ಹೆಗಲಿನ ಮೇಲೆ ಪಾತ್ರೆಪಗಡಗಳು, ಗಂಟುಮೂಟೆಗಳು,
ದಿನದಿಂದ ದಿನಕ್ಕೆ, ಖಾಲಿಯಾದಂತೆಲ್ಲ ಭಾರವಾಗುವ
ಬಡಹೊಟ್ಟೆಪಾಡುಗಳು.

ಕಳ್ಳನಂತೆ ಪಯಣವನ್ನು ನಿಲ್ಲಿಸಿ, ಎಲ್ಲಿಯೋ ನೆಲಸುವವನೊಬ್ಬ
ಸದ್ದುಗದ್ದಲದಲ್ಲಿ, ಯಾರದೋ ರೊಟ್ಟಿಯನ್ನು ಯಾವನೋ ಕದ್ದ.
ಮತ್ತೊಬ್ಬ, ಸತ್ತ ಮಗುವಿನ ನಾಡಿಬಡಿತ ನೋಡುತ್ತಿದ್ದ.

ಮುಂದೆ ಚಾಚಿವೆ ಹಲವು ಹಾದಿಗಳು. ಬಿಡುಗಡೆಗೋ ಕೊನೆಕಡೆಗೋ?
ಅದೇಕೋ ಗುಲಾಬಿಬಣ್ಣ ತಳೆದ ನದಿಯಮೇಲೆ, ಇರಬಾರದ ಸೇತುವೆ.
ಅವರ ಸುತ್ತ, ಒಂದಿಷ್ಟು ಮದ್ದುಗಂಡು, ಒಮ್ಮೆ ಹತ್ತಿರದಲ್ಲಿ, ಒಮ್ಮೆ ದೂರದಲ್ಲಿ
ಅಗೊ, ಮೇಲೆ ಸುತ್ತುತ್ತಿದೆ ಹದ್ದುವಿಮಾನ.

ಅದೃಶ್ಯವಾಗಲು ಸಾಧ್ಯವಿದ್ದರೆ, ಎಷ್ಟೊಂದು ಚೆನ್ನ
ಅಥವಾ ಕಣ್ಣಿಗೆ ಕಾಣದ ಬಂಡೆಯ ಬಣ್ಣ?
ಕಾಣೆಯಾಗುವುದಂತು ಇನ್ನಷ್ಟು ಚೆನ್ನ.
ಸ್ವಲ್ಪ ಕಾಲ ಅಥವಾ ಅನಂತಕಾಲ.

ಇನ್ನೂ ಏನೋ ಆಗಬೇಕಿದೆ. ಏನು? ಯಾವಾಗ?
ಅವರ ಕಡೆಗೆ ಯಾರೋ ಬರುತ್ತಾರೆ. ಯಾರು? ಯಾವಾಗ?
ಯಾವ ಯಾವ ಆಕಾರದಲ್ಲಿ? ಯಾವ ಯಾವ ಯಾವ ಉದ್ದೇಶದಿಂದ?
ಆಯ್ಕೆಯ ಅವಕಾಶ ಕೊಟ್ಟರೆ,
ಅವರು ಕೂಡ, ಶತ್ರುವಾಗುವ ಹಿಂಸೆ ಒಲ್ಲೆನೆನಬಹುದು,
ಇವರಿಗೂ ಬಾಳಿತ್ತು ತೆರಳಬಹುದು.


ವಿಸ್ಲಾವಾ ಸಿಂಬೋರ್ಕಾ
ಪೋಲೆಂಡ್


Thursday, May 31, 2012

ನೇಪಾಳದಲ್ಲಿ ನೋವು-ನಲಿವು


ಸಂಜೆದನಿ-2
ಕಳೆದ ವಾರ, ನಾನು ಮತ್ತು ಹಲವು ಆತ್ಮೀಯ ಗೆಳೆಯರು ನೇಪಾಳಕ್ಕೆ ಹೋಗಿ ಬಂದೆವು. ಹಿಮಾಲಯದ ಬಗ್ಗೆ, ಮಾತುಗಳಲ್ಲಿ ಏನು ಬರೆದರೂ ಅದು ಅನ್ಯಾಯ, ಅಹಂಕಾರ. ಆದರೆ, ಆ ಪರ್ವತದ ಶೀತಲ ಶಿಖರಗಳಿಗಿಂತ ತಣ್ಣಗೆ ಕೊರೆಯುವ ಒಂದು ಘಟನೆ ಮತ್ತು ಮನಸ್ಸಿಗೆ ಮುದನೀಡಿದ ಇನ್ನೊಂದು ಪ್ರಸಂಗಗಳನ್ನು ಹಂಚಿಕೊಂಡು, ಆ ಮೂಲಕ ನಿಮ್ಮೊಂದಿಗೆ ಮಾತನಾಡುವ ಹಂಬಲ ನನಗೆ.
ಶಾಶ್ವತಕುಮಾರಿಯ ಹಾಡು-ಪಾಡು
ನೇಪಾಳದ ರಾಜಧಾನಿಯಾದ ಕಠ್ಮಂಡು ನಗರದಲ್ಲಿ. ಕಠ್ಮಂಡು, ಕಾಷ್ಠಮಂಟಪ ಎಂಬ ಸಂಸ್ಕೃತಪದದ ನೇಪಾಳೀ ರೂಪವಂತೆ. ಅಲ್ಲಿನ ದೇವಾಲಯಗಳಲ್ಲಿ ಮರದ ಬಳಕೆ ಬಹಳ ಜಾಸ್ತಿ. ದರ್ಬಾರಾ ಸ್ಕ್ವೈರ್ ಆ ಊರಿನ ಆಕರ್ಷಕ ಟೂರಿಸ್ಟ್ ಸ್ಪಾಟ್. ಅಲ್ಲಿನ ಜಂಗುಳಿಯಲ್ಲಿ ಸುಮ್ಮನೆ ಹೆಜ್ಜೆ ಹಾಕುವಾಗ, ಒಂದು ಕಡೆ ಜನರ ಗುಂಪು ಕಾಣಿಸಿತು. ಏನೆಂದು ಕೇಳಿದರೆ, ಅದು ಕುಮಾರೀ ಮಾತಾ ಅವರ ಮಂದಿರ’, ಎಂದರು. ಸರಿ, ನಾವೆಲ್ಲರೂ ಅಲ್ಲಿ ಜಮಾಯಿಸಿದೆವು.
ಕುಮಾರಿ ಆ ಮನೆಯಲ್ಲಿ ವಾಸಿಸುವ ಪುಟ್ಟ ಹುಡುಗಿ. ಅವಳನ್ನು ದುರ್ಗಾ ದೇವತೆಯ ಅವತಾರವೆಂದು ತಿಳಿಯಲಾಗುತ್ತದೆ. ಈ ಸಂಪ್ರದಾಯವು ಬೌದ್ಧರು ಮತ್ತು ಹಿಂದೂಗಳು ಇಬ್ಬರಲ್ಲಿಯೂ ಬೇರುಬಿಟ್ಟಿದೆ. ಕುಮಾರಿಯನ್ನು, ಮೂರರಿಂದ ಐದು ವರ್ಷಗಳ ವಯೋಮಿತಿಯಲ್ಲಿರುವ  ನೂರಾರು ಹೆಣ್ಣುಮಕ್ಕಳ ಪೈಕಿ ಆರಿಸುತ್ತಾರೆ. ಅವಳು ಬೌದ್ಧ ಶಾಕ್ಯ ಸಮುದಾಯಕ್ಕೆ ಸೇರಿದವಳಾಗಿರಬೇಕು. ಅವಳಿಗೆ ಮೂವತ್ತೈದು ಶುಭಲಕ್ಷಣಗಳಿರಬೆಕು. ಆ ಲಕ್ಷಣಗಳು ಬಹುಮಟ್ಟಿಗೆ ಪರಿಪೂರ್ಣ ಸೌಂದರ್ಯಕ್ಕೆ ಸಂಬಂಧಿಸಿದವು. ಅದೂ ಅಲ್ಲದೆ ಅವು ದೇವಿಯ ಯಾವುದೋ ಒಂದು ಗುಣದ ಸಂಕೇತವೂ ಆಗಿರುತ್ತವೆ.
ಹೀಗೆ ಮೊದಲ ಹಂತದಲ್ಲಿ ಆಯ್ಕೆಯಾದ ಹುಡುಗಿಯರ ಜಾತಕಕ್ಕೂ ಮತ್ತು  ಆಗ ನೇಪಾಳವನ್ನು  ಆಳುತ್ತಿರುವ ರಾಜನ ಜಾತಕಕ್ಕೂ ಹೊಂದಾಣಿಕೆಯಾಗಬೇಕು. ಅದಾದ ಮೇಲೆ, ಆಯ್ಕೆಯಾದ ಹುಡುಗಿಯರ ಧೈರ್ಯಪರೀಕ್ಷೆ ! ಅವರನ್ನು ಕತ್ತಲುತುಂಬಿದ ಕೋಣೆಯಲ್ಲಿ ಕೂಡಿಹಾಕುತ್ತಾರೆ. ಅವರ ಸಂಗಡ, ಆಗತಾನೇ ಕತ್ತರಿಸಿ, ರಕ್ತ ಸುರಿಸುತ್ತಿರುವ ಕೋಣಗಳ ರುಂಡಗಳು. ಅವುಗಳ ಜೊತೆಗೆ, ಭಯಂಕರವಾದ ಭೂತಗಳ ಮುಖವಾಡಗಳನ್ನು ಹಾಕಿಕೊಂಡು ಕುಣಿಯುತ್ತಿರುವ ನರ್ತಕರು. ಸಾಮಾನ್ಯ ಹುಡುಗಿಯರು ಇಂಥದನ್ನು ನೋಡಿ ಹೆದರಿ ನಡುಗುತ್ತಾರೆ. ಆದರೆ ದೇವಿಯ ಅವತಾರವೇ ಆದ ಮಗು, ಇದಕ್ಕೆಲ್ಲ ಬೆದರದೆ, ಬೆಚ್ಚದೆ ಉಳಿಯತ್ತಾಳೆ. ಅವಳು ಮುಂದಿನ ಕುಮಾರಿ ಮಾತೆಯಾಗಿ ಆಯ್ಕೆಯಾಗುತ್ತಾಳೆ.
        ಅನಂತರ, ಈ ಮನೆಯಲ್ಲಿ-ಮಂದಿರದಲ್ಲಿ ಅವಳ ದಿವ್ಯಜೀವನ ಮೊದಲಾಗುತ್ತದೆ. ಅವಳು ಆ ಮಂದಿರದ ಶಾಶ್ವತನಿವಾಸಿ..ಹೆಚ್ಚೆಂದರೆ ವರ್ಷದಲ್ಲಿ ಎರಡು ಮೂರು ಬಾರಿ, ಹಬ್ಬ ಹರಿದಿನಗಳಂದು, ಅವಳು ರಥದಲ್ಲಿ ಮೆರವಣಿಗೆ ಹೋಗಬಹುದು. ಮಂದಿರದ ಆವರಣದಲ್ಲಿ ಮಾತ್ರ. ಆಗಲೂ ಅವಳ ಕಾಲುಗಳು ನೆಲಕ್ಕೆ ಸೋಕುವಂತಿಲ್ಲ. ಅಧ್ಯಯನ-ಆರಾಧನೆ-ಪೂಜೆ ಮಾಡುವುದು-ಪೂಜಿತಳಾಗುವುದು ಇಷ್ಟೇ ಅವಳ ಕೆಲಸ. ಇಲ್ಲ, ಇನ್ನೂ ಒಂದು ಕೆಲಸ ಇದೆ. ಆ ಮಂದಿರದ ಮೊದಲ ಮಹಡಿಯಲ್ಲಿ ಒಂದು ದೊಡ್ಡ ಕಿಟಕಿಯಿದೆ. ಕುಮಾರಿಯು, ದಿನದಲ್ಲಿ ಎರಡು ಬಾರಿ, ಸರ್ವಾಲಂಕಾರಭೂಷಿತೆಯಾಗಿ ಆ ಕಿಟಕಿಯಲ್ಲಿ ಕಾಣಿಸಿಕೊಳ್ಳಬೇಕು; ಭಕ್ತಾದಿಗಳಿಗೆ ಆಶೀರ್ವಾದ ಮಾಡಬೇಕು. ಆ ದಿನ ಅಲ್ಲಿ ಸೇರಿದ್ದ ಭಕ್ತರ ಜಂಗುಳಿಯಲ್ಲಿ ಬೆಂಗಳೂರಿನಿಂದ ಬಂದ ನಾವು ಹದಿನೈದು ಜನರೂ ಇದ್ದೆವು. ಆ ಮಗು ಒಂದೆರಡು ನಿಮಿಷ ಅಲ್ಲಿ ನಿಂತುಕೊಂಡು, ಕೈ ಎತ್ತಿ ಭಕ್ತರಿಗೆ ಆಶೀರ್ವಾದಮಾಡಿ ಮತ್ತೆ ಒಳಗೆ ಹೋಯಿತು.
        ಆ ಮಂದಿರವಾಸದ ಅವಧಿಯಲ್ಲಿ, ಅವಳ ಮತ್ತು ಅವಳ ಮೇಲ್ವಿಚಾರಕರ ಖರ್ಚು-ವೆಚ್ಚಗಳನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಈ ಮಂದಿರವಾಸವು, ಕುಮಾರಿಯು ಮೈನೆರೆದ ದಿನ ಮುಗಿಯುತ್ತದೆ. ಅಷ್ಟೇ ಅಲ್ಲ, ಬೇರೆ ಯಾವುದೇ ಕಾರಣದಿಂದ ಗಾಯವಾಗಿ, ಒಂದೆರಡು ಹನಿ ರಕ್ತ ಚೆಲ್ಲಿದರೂ ಅವಳ ಕುಮಾರಿಪಟ್ಟ ಮುಗಿದಂತೆಯೇ. ಆಮೇಲೆ, ಅವಳು ತನ್ನ ಮನೆಗೆ ಹಿಂದಿರುಗಬೇಕು. ಆ ಮಗುವಿಗೆ ಪುಟ್ಟ ಮೊತ್ತದ ಪಿಂಚಣಿ ಕೂಡ ಸಿಗುತ್ತದೆ. ಆದರೆ, ಅವಳು ಜೀವಮಾನಪರ್ಯಂತ ಮದುವೆಯಾಗುವಂತಿಲ್ಲ. ಆ ಅರ್ಥದಲ್ಲಿ ಅವಳು ಕೊನೆಯ ಉಸಿರು ಇರುವವರೆಗೆ ಕುಮಾರಿಯೇ. ಅವಳ ಮನಸ್ಸಿನಲ್ಲಿ ಯಾವ ಭಾವನೆ, ಯಾವ ವಿಚಾರಗಳು ಮಿಂಚಿ ಮಾಯವಾಗುತ್ತಿರಬಹುದು ಎನ್ನುವುದರ ಬಗ್ಗೆ, ಸಮುದಾಯಗಳು ತೋರಿಸುವ ದಿವ್ಯನಿರ್ಲಕ್ಷ್ಯ, ಅಚ್ಚರಿ ಹುಟ್ಟಿಸುವಂತಹುದು
        ನಾವು ಕೂಡ ಆ ಹುಡುಗಿಯನ್ನು ನೋಡಿದೆವು. ಆ ಮುಗ್ಧಮುಖದ ಹಾವಭಾವಗಳಿಗೆ ಸಾಕ್ಷಿಯಾದೆವು. ಒಂದಷ್ಟು ಹೊತ್ತು, ಮೂರು ಕಾಸು ಬೆಲೆಯಿಲ್ಲದ ನಿಟ್ಟುಸಿರು ಬಿಟ್ಟೆವು. ಸುತ್ತಮುತ್ತಲ ಶಿಲ್ಪ, ಚಿತ್ರಗಳ ಫೋಟೋ ಹಿಡಿದುಕೊಂಡು ಮನೆಗೆ ಬಂದೆವು. ಕರ್ನಾಟಕ ಕೂಡ ನೇಪಾಳಕ್ಕಿಂತ ಕಡಿಮೆಯಲ್ಲ ಎನ್ನುವುದು ನಮಗೂ ಗೊತ್ತು. ಧರ್ಮ, ಭಕ್ತಿ, ನಂಬಿಕೆ ಮುಂತಾದವುಗಳ ಹೆಸರಿನಲ್ಲಿ ನಮ್ಮ ನಡುವೆಯೇ ತುಂಬಿರುವ ಕಡುಕ್ರೌರ್ಯದ ಸಾಕ್ಷಿಯಾಗಿ ಆ ಮಗು ನನ್ನ ಮನಸ್ಸಿನಲ್ಲಿ ಈಗಲೂ ಮನೆಮಾಡಿದೆ.  


  

***************************
ಮಡಿವಾಳ ಮಾಚಮ್ಮನ ಕಥಾಪ್ರಸಂಗ
ನಾನು ಹೇಳುತ್ತಿರುವ ಎರಡನೆಯ ಘಟನೆ, ಕಠ್ಮಂಡುವಿನಿಂದ ಇನ್ನೂರು ಕಿಲೋಮೀಟರ್ ದೂರವಿರುವ ಪೊಖಾರದಲ್ಲಿ ನಡೆದಿದ್ದು. ಮಂಜುಮುಸುಕಿದ ಸಂಜೆ. ಸಾಕಷ್ಟು ಜೋರಾಗಿ ಸುರಿಯುತ್ತಿರುವ ಮಳೆ. ಕಣ್ಣೆದುರಿಗೆ ಹರಿಯುತ್ತಿರುವ ನದಿಯಲ್ಲಿ ಬೋಟಿಂಗ್ ಹೋಗಬೇಕೆಂಬ ನಮ್ಮ ಆಸೆ ಕ್ಷಣಕ್ಷಣಕ್ಕೂ ಕರಗುತ್ತಿದೆ. ಆಗ, ನದಿಯ ಬದಿಯ ಷೆಲ್ಟರಿನಲ್ಲಿ ನಡುಗುತ್ತ ನಿಂತಿದ್ದ ನಮ್ಮಲ್ಲಿ ಕೆಲವರಿಗೆ ಕಾಣಿಸಿದ್ದು ಈ ನೋಟ. ನದಿಯ ದಂಡೆಯಲ್ಲಿಯೇ ಇನ್ನಷ್ಟು ಕೆಳಗೆ, ಮೊದಲು ಕಂಡಿದ್ದು ಎರಡು ಕೈಗಳು. ಆ ಕೈಗಳಲ್ಲಿ ಕಡುನೀಲಿ ಬಣ್ಣದ ಜೀನ್ಸ್ ಪ್ಯಾಂಟು. ಒಂದೆರಡು ಕ್ಷಣಗಳಲ್ಲಿ, ಆ ನೀರಿನಲ್ಲಿ ಆ ಪ್ಯಾಂಟನ್ನು ಒಗೆಯುತ್ತಿರುವ ಹದಿಹರೆಯದ ನೇಪಾಳೀ ಸುಂದರಿ. ಆ ಮಳೆಯಲ್ಲಿ ಹಾಗೆ ಬಟ್ಟೆಒಗೆಯುತ್ತಿರುವ ಕರ್ಮಯೋಗಿನಿಯನ್ನು ಕಂಡು ಅಚ್ಚರಿಯೆನಿಸಿತು. ನೇಪಾಳದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯೂನಿಸ್ಟ್ ಪಕ್ಷಕ್ಕೆ ಹೊಂದಿಕೊಳ್ಳುವಂತೆ, ಅವಳು ಕೆಂಪುಬಣ್ಣದ ಮೇಲುಡುಪು ಧರಿಸಿದ್ದಳು. ಉಳಿದಂತೆ ಯಥಾಪ್ರಕಾರ ಜೀನ್ಸು. ಅವಳ ಕಥೆ ಅಲ್ಲಿಗೆ ಮುಗಿಯಲಿಲ್ಲ. ಕೆಲವು ನಿಮಿಷಗಳ ನಂತರ ಆ ನೀರಿನ ನಡುವೆ ಒಬ್ಬ ತರುಣ ಅವತರಿಸಿದ. ಸಾಕಷ್ಟು ಎತ್ತರದ ಕಡುಬಿಳಿಯ ಚೆಲುವ. ಅವನಿಗಂತೂ ಬನಿಯನ್ ಕೂಡ ಇಲ್ಲ. ಅವನು ಜೀನ್ಸ್ ಧರಿಸಿರುವ ಅರೆ ಬಾಹುಬಲಿ. ಆ ಮೇಲೆ ಶುರುವಾಯಿತು ಅವರ ಸ್ನಾನವೈಭವ. ಆ ಮಳೆಯಲ್ಲಿಯೇ ಒಂದು ಪ್ಲಾಸ್ಟಿಕ್ ಬಕೆಟ್ ತಂದಳು, ಅದರಲ್ಲಿ ನದಿಯ ನೀರನ್ನು ಮೊಗೆಮೊಗೆದು ಸುರಿದು ಅವನನ್ನು ಮೀಯಿಸಿದಳು. ಅವನ ಮೈಕೈಗಳನ್ನು ತಿಕ್ಕಿತಿಕ್ಕಿ ತೊಳೆದಳು. ನಾನು ಏನು ಕಡಿಮೆ ಎನ್ನುವಂತೆ ಅವನು ಕೂಡ ಆಗಾಗ ಅವಳಿಗೆ ಅಭಿಷೇಕ ಮಾಡುತ್ತಿದ್ದ. ಇದರ ನಡುವೆ ಪರಸ್ಪರ ನೀರೆರಚಿಕೊಳ್ಳುವ ಆಟ ಬೇರೆ. ಅಲ್ಲಿ ಸರಸ ಸಂಭಾಷಣೆ, ನಗು, ಹರ್ಷ, ಉಲ್ಲಾಸಗಳು ಕೋಡಿಒಡೆದು ಹರಿಯುತ್ತಿದ್ದವು. ಆದರೆ, ಪ್ರಮಾಣಮಾಡಿ ಹೇಳುತ್ತೇನೆ. ಇದೆಲ್ಲದರಲ್ಲಿ ಅಶ್ಲೀಲದ, ಲಂಪಟತೆಯ ಲವಲೇಶವೂ ಇರಲಿಲ್ಲ. ಇದ್ದದ್ದು ಕೇವಲ, ಕೇವಲ ಆನಂದ; ಅತ್ಯಂತ ಸಹಜವಾದ ಲೀಲೆ. ಗೆಳೆತನದ ಸಲಿಗೆಯಲ್ಲಿ ತೊಡಗಿದ್ದ ಆ ಎಳೆಯರಲ್ಲಿಯೂ ಅಷ್ಟೆ, ಪ್ರೀತಿಯಿಂದ ನೋಡುತ್ತಿದ್ದ ನಮ್ಮ ಕಣ್ಣುಗಳಲ್ಲಿಯೂ ಅಷ್ಟೆ. ನಾವು, ನಮ್ಮಂತಹವರು ನೋಡುತ್ತಿದ್ದೇವೆ ಎನ್ನುವುದು ಅವರ ಸಹಜತೆಗೆ ಒಂದಿನಿತೂ ಭಂಗ ತರಲಿಲ್ಲ. ಅದು ನಿರ್ಲಜ್ಜೆ ಅಲ್ಲ, ಮುಗ್ಧಪ್ರೀತಿ. ದೇಶ-ಕಾಲಗಳ ಎಲ್ಲೆ ಮೀರಿ ನಮ್ಮೆದುರಿಗೆ ಅವತರಿಸಿದ ದೇವದಂಪತಿಗಳಂತೆ ಅವರು ನಮ್ಮೆದುರು ಮೆರೆದರು. ಕತೆ-ಕಾದಂಬರಿ ಓದಿರುವ ನನಗೆ, ಕುವೆಂಪು ಅವರು ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಐತ-ಪೀಂಚಲು ಜೋಡಿಯನ್ನು ಶಿವ-ಪಾರ್ವತಿಯರಿಗೆ ಹೋಲಿಸಿದ ನೆನಪು.
ಸ್ವಲ್ಪ ಹೊತ್ತಿನ ನಂತರ ಇನ್ನೊಬ್ಬ ಗೆಳೆಯ ಅವರನ್ನು ಸೇರಿಕೊಂಡ. ಅವನು ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ ಎನ್ನುವಂತೆ ಅವರು ನಡೆದುಕೊಂಡರು. ಯಾರಲ್ಲಿಯೂ ಕೆಟ್ಟ ಗಿಲ್ಟ್ ಇಲ್ಲ, ಕುತೂಹಲವಿಲ್ಲ. ಕಾಡುವ ಕಣ್ಣುಗಳ ಇಣುಕುತೂಹಲ ಇಲ್ಲ.
ಮಳೆ ನಿಂತಿತು. ನಾವು ಹೋಟೆಲ್ ಕಡೆ ಹೊರಟೆವು. ನಮ್ಮ ಪಕ್ಕದಲ್ಲೇ, ಆ ಮೂವರು, ಒಗೆದ ಬಟ್ಟೆಗಳೊಂದಿಗೆ, ಸೈಕಲ್ ತಳ್ಳಿಕೊಂಡು ಮುಂದೆಹೋದರು. ಅವರ ಮುಖಗಳ ಸೌಂದರ್ಯ, ಆಹ್ಲಾದ ಮತ್ತು ಮುಗ್ಧತೆಗಳು ನಮ್ಮೊಳಗಿನ ಕೊಳೆ ತೊಳೆದವು, ಒಳಗೆ ನೆಲೆಸಿದವು.
ಆದರೆ, ಇದೆಲ್ಲದರ ನಡುವೆ, ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ, ಕಲ್ಕತ್ತಾದ ಸೂಳೆಗೇರಿಗಳಲ್ಲಿ ಬಾಳುಸವೆಸುವ ಸಾವಿರ ಸಾವಿರ ನೇಪಾಳಿ ಹುಡುಗಿಯರ ನೆನಪೂ ಕಾಡುತ್ತಿತ್ತು. ನಮ್ಮ ನಾಗರಿಕತೆಯ ಬಗ್ಗೆ ನಾಚಿಕೆ ಎನ್ನಿಸುತ್ತಿತ್ತು.     
                         ************************
ಕುಮಾರಿ ಮಾತಾ ಮತ್ತು ಮಡಿವಾಳ ಮಾಚಮ್ಮರನ್ನು ಅಕ್ಕಪಕ್ಕ ಇಟ್ಟು ನೋಡಿದಾಗ ನನ್ನಲ್ಲಿ ಮೂಡಿದ ಆಲೋಚನೆಗಳು ನಿಮ್ಮಲ್ಲಿಯೂ ಮೂಡಿರಬಹುದು. ಧರ್ಮ, ನೀತಿ ಮತ್ತು ನಡತೆಯನ್ನು ಕುರಿತ ನಮ್ಮ ಕಲ್ಪನೆಗಳು ಎಲ್ಲಿ ಹುಟ್ಟುತ್ತವೆ? ಪ್ರೀತಿ, ಸಮಾನತೆ ಮತ್ತು ಅನುಕಂಪಗಳ ನೆಲೆಯಲ್ಲಿಯೋ ಅಥವಾ ಭಯ, ನಿಯಂತ್ರಣ ಹಾಗೂ ಶೋಷಣೆಗಳ ಆಳದಿಂದಲೋ? ನಮ್ಮ ಧರ್ಮಗ್ರಂಥಗಳಲ್ಲಿ ಇಡಿಕಿರಿದಿರುವ ದೊಡ್ಡ ದೊಡ್ಡ ಮಾತುಗಳ ಬಗ್ಗೆ ನಾನು ಹೇಳುತ್ತಿಲ್ಲ. ನಮ್ಮಿಂದಲೇ ಹುಟ್ಟಿ, ನಮ್ಮನ್ನೇ ಆಳುತ್ತಿರುವ ನಂಬಿಕೆಗಳು, ಆಚರಣೆಗಳು ಮತ್ತು ವರ್ತನೆಗಳ ಬಗ್ಗೆ ಮಾತಾಡುತ್ತಿದ್ದೇನೆ. ಇವುಗಳಲ್ಲಿ ಅಡಗಿರುವ ಕ್ರೌರ್ಯ ಮತ್ತು ಅಮಾನವೀಯತೆಗಳ ಬಗ್ಗೆ ನಾವು ಕುರುಡಾಗಿದ್ದೇವೆ. ಕಳೆದ ಎರಡು ದಶಕಗಳಲ್ಲಿ ಇನ್ನಷ್ಟು ಮತ್ತಷ್ಟು ಕುರುಡಾಗಿದ್ದೇವೆ. ನಾವು ಉಳಿದವರ ಮೇಲೆ ಹೇರುವ ನೈತಿಕತೆಯ ಮಾನದಂಡಗಳು ವಿಶ್ವವ್ಯಾಪಿಯಾದ ಸತ್ಯವೇನೋ, ಉಳಿದುದೆಲ್ಲವೂ ಹೊಲಸೇನೋ ಎನ್ನುವಂತೆ ವರ್ತಿಸುತ್ತೇವೆ. ಮಗ್ದಲದ ಮರಿಯೆಯರ (Mary of Magdalene) ಮೇಲೆ ಕಲ್ಲೆಸೆಯಲು ಸದಾ ಸಿದ್ಧರಾಗಿರುತ್ತೇವೆ. ಈಚಿನ ವರ್ಷಗಳಲ್ಲಿ ನಮ್ಮ ದೃಶ್ಯಮಾಧ್ಯಮಗಳು ಇಂತಹ ಸಂಗತಿಗಳನ್ನು ವೈಭವೀಕರಿಸುತ್ತಿರುವ ಬಗೆಯು ಅಸಹ್ಯ-ಅಚ್ಚರಿಗಳನ್ನು ಮೂಡಿಸುತ್ತದೆ. ನಿಜವಾದ ಸಂತೋಷವನ್ನು ಅನುಭವಿಸಲು ಬೇಕಾದ ಮುಗ್ಧತೆ, ಮುಕ್ತತೆಗಳನ್ನು ಕಳೆದುಕೊಂಡಿರುವ, ನಾವು ಮತ್ತು ನಮ್ಮ ಸಮಾಜ ಎಲ್ಲರನ್ನೂ ಉಸಿರುಕಟ್ಟಿಸುತ್ತಿವೆಯೇ? ಸ್ವಾತಂತ್ರ್ಯ ಮತ್ತು ಸಮಾನತೆಗಳ ಮಾತುಗಳನ್ನು ಆಡುತ್ತಲೇ, ನಮ್ಮ ಸುತ್ತಲೂ ಇರುವ ಪ್ರತಿಯೊಬ್ಬರ ಬಗ್ಗೆಯೂ ನಮ್ಮ ನಿಲುವುಗಳನ್ನು ಘೋಷಿಸುತ್ತಾ, ಟೀಕೆ-ಟಿಪ್ಪಣಿಗಳನ್ನು ಹೇರುತ್ತಾ ಹೋಗುವುದು ಎಷ್ಟರ ಮಟ್ಟಿಗೆ ಸರಿ?

                                                                ಎಚ್.ಎಸ್. ರಾಘವೇಂದ್ರ ರಾವ್
                                                                14-04-2012
ಕುಮಾರಿ ಮಾತಾ ಅವರ ಮೆರವಣಿಗೆ ಮತ್ತು ಬದುಕನ್ನು ತೋರಿಸುವ ಎರಡು ವೀಡಿಯೋ ಲಿಂಕುಗಳನ್ನು ಇಲ್ಲಿ ಕೊಟ್ಟಿದ್ದೇನೆ:




Thursday, March 29, 2012

ಸೌಜನ್ಯ ಮತ್ತು ಸಹಜತೆ


(ಈ ಅಂಕಣದಲ್ಲಿ ನಾನು ಹಂಚಿಕೊಳ್ಳಲು ಬಯಸುವ ಸಂಗತಿಗಳು ನನ್ನನ್ನು ಎಂದಿನಿಂದಲೂ ಕಾಡಿವೆ, ಈಗಲೂ ಕಾಡುತ್ತಿವೆ. ಈ ಇಳಿವಯಸ್ಸಿನಲ್ಲಿ, ಇವುಗಳನ್ನು ನಿಮ್ಮೊಂದಿಗೆ ಹೇಳಿಕೊಳ್ಳುವ ಹಂಬಲ ನನ್ನದು. ಆಲೋಚನೆ ಎನ್ನುವುದು ಬದಲಾವಣೆಯ ಮೊದಲ ಹೆಜ್ಜೆ. ಇಲ್ಲಿ ಸವೆದುಹೋದ ಗಾಡಿಜಾಡುಗಳು ಅಪಾಯಕರ. ಈ ಬರಹಗಳಲ್ಲಿ ಉತ್ತರಗಳಿಗಿಂತ ಹೆಚ್ಚಾಗಿ ಪ್ರಶ್ನೆಗಳು ಇರುತ್ತವೆ. ಅವು ನನ್ನ ಪ್ರಶ್ನೆಗಳು ಮಾತ್ರವಲ್ಲ, ನಿಮ್ಮವೂ ಹೌದು. ನಾನು ಉತ್ತರಗಳನ್ನು ಕೊಡಬಲ್ಲೆ, ಅವೇ ಸರಿಯಾದ ಉತ್ತರಗಳುಎಂಬ ಅಹಂಕಾರ ನನಗಿಲ್ಲ. ಹಾಗೆ ನೋಡಿದರೆ, ಯಾರೂ ಯಾರಿಗೂ ದಾರಿ ತೋರಿಸುವುದು ಸಾಧ್ಯವಿಲ್ಲ, ಸರಿಯಲ್ಲ. ಆದರೆ, ಪ್ರಶ್ನೆಗಳನ್ನು ಕೇಳುವುದೆಂದರೆ, ಮನಸ್ಸು ಎಂಬ ತಿಳಿಗೊಳದಲ್ಲಿ ಕಲ್ಲುಗಳನ್ನು ಎಸೆದ ಹಾಗೆ. ನಿಮ್ಮ ಮನಸ್ಸಿನಲ್ಲಿ ಏಳುವ ಅಲೆಗಳು ನಿಮ್ಮವೇ ಆಗಿರುತ್ತವೆ. ಜೀವನದಲ್ಲಿ, ನಮಗೇ ತಿಳಿಯದಂತೆ ನಮ್ಮ ನಡವಳಿಕೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ಕೆಲವು ಸಂಗತಿಗಳನ್ನು ಎದುರಿಸದೆ ಬೇರೆ ದಾರಿಯಿಲ್ಲ. ನಾನು ಸಾಹಿತ್ಯದ ವಿದ್ಯಾರ್ಥಿಯಾದರೂ ಈ ಬರಹಗಳ ಹಿಂದೆ ಇರುವ ಪ್ರೇರಣೆ ಬೇರೆ ಬಗೆಯದು.)  


ಸಹಜತೆ ಮತ್ತು ಸೌಜನ್ಯ
 
ನಾನು, ನೀವು ಮತ್ತು ನಮ್ಮ ನೆರೆಹೊರೆಯವರು ಇವರೆಲ್ಲರೂ ಸೇರಿದ ಹಾಗೆ, ಯಾರು ಸಹಜವಾದವರು, ಯಾರು ಸಜ್ಜನರು? ಇವೆರಡೂ ಒಂದೆಯೋ ಬೇರೆ ಬೇರೆಯೋ? ಸಜ್ಜನ ಮತ್ತು ದುರ್ಜನ ಎಂಬ ಗುಂಪುಗಳ ಆಚೆಗೆ, ಸಹಜವಾಗಿ ವರ್ತಿಸುವವರು ಎಂಬ ಮೂರನೆಯ ಕೆಟಗರಿ ಇದೆಯೇ. ಕೊನೆಗೂ, ನಾವು ಒಳ್ಳೆಯವರೋ ಕೆಟ್ಟವರೋ ಎಂಬ ಪ್ರಶ್ನೆಗೆ ನಾವೇ ಕೊಟ್ಟುಕೊಳ್ಳುವ ಉತ್ತರ ಯಾವುದು? ಯಾರಾದರೂ ಸರಿಯೇ, ಅವರು ಯಾವಾಗಲೂ ಕೆಟ್ಟವರಾಗಿ ಇರುತ್ತಾರೆಯೇ ಅಥವಾ ಯಾವಾಗಲೂ ಒಳ್ಳೆಯವರಾಗಿಯೇ ಇರುತ್ತಾರೆಯೇ? ಕೊನೆಗೂ ಒಳ್ಳೆಯದು, ಕೆಟ್ಟದ್ದು ಎಂದರೆ ಏನು? ಅಂತಹ ಪರಿಕಲ್ಪನೆಗಳನ್ನು ಯಾರು ಯಾಕೆ ರೂಪಿಸಿದ್ದಾರೆ?
 ಇವು ಹಲವು ದಶಕಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು. ಏಕೆಂದರೆ ನಾವು ಬದುಕುವ ಬಗೆ, ಸುಖ-ದುಃಖಗಳನ್ನು ಅನುಭವಿಸುವ ರೀತಿ, ನಮ್ಮ ಬಂಧುಗಳ-ಗೆಳೆಯರ ಬೆಲೆಕಟ್ಟುವ ವಿಧಾನ ಎಲ್ಲದರ ಮೇಲೆಯೂ ಇವುಗಳಿಗೆ ನಾವು ಕೊಟ್ಟುಕೊಂಡಿರುವ ಉತ್ತರಗಳು ಪರಿಣಾಮ ಬೀರುತ್ತವೆ.
 ನಾವೆಲ್ಲರೂ ಮನುಷ್ಯರು. ಒಂದು ನೆಲೆಯಲ್ಲಿ ನಾವೆಲ್ಲರೂ ಪ್ರಾಣಿಗಳು. ಪ್ರಾಣಿಗಳಿಗಿಂತ ಉತ್ತಮರು ಎಂದು ನಾವೇ ಹೇಳಿಕೊಂಡರೂ ನಮ್ಮನ್ನು ತುಂಬಿಕೊಂಡಿರುವ ಕ್ರೌರ್ಯ, ಕೋಪ, ದ್ವೇಷ ಹೊಟ್ಟೆಕಿಚ್ಚುಗಳನ್ನು ಗಮನಿಸಿದಾಗ ಇದು ನಿಜವೆಂದು ತೋರುವುದಿಲ್ಲ. ಮೇಲುಮೇಲಿನ, ನಯನಾಜೂಕಿನ ಆವರಣದ ಆಳದಲ್ಲಿ ಮನೆಮಾಡಿರುವ ಸಣ್ಣತನಗಳನ್ನು ನಾವೇ ನೋಡಿಕೊಂಡಾಗ, ನಾವು ಎಂಥವರು ಎಂಬ ಪ್ರಶ್ನೆ ನಮ್ಮನ್ನು ಕಾಡತೊಡಗುತ್ತದೆ.
 ನಮಗೆಲ್ಲರಿಗೂ ಬಾಲ್ಯದಿಂದಲೂ ಸೌಜನ್ಯದ, ಸಭ್ಯ ನಡವಳಿಕೆಯ ಪಾಠಗಳನ್ನು ಕಲಿಸುತ್ತಾರೆ. ಕುಟುಂಬ, ಶಾಲೆ, ಕಾನೂನು, ಧರ್ಮ, ಗುರು-ಹಿರಿಯರು ಹೀಗೆ ಸಾಮಾಜಿಕ ಎನ್ನಲಾದ ಎಲ್ಲ ಸಂಸ್ಥೆಗಳೂ ಇದನ್ನೇ ಜಪಿಸುತ್ತವೆ, ಹೇರುತ್ತವೆ. ಆದರೆ, ಇದರ ಸಂಗಡವೇ ಹೇಳದೆ ಕಲಿಸಿಸುವ ಪಾಠಗಳೂ ಇರುತ್ತವೆ. ಅದು ಸ್ಪರ್ಧೆಯ, ಸ್ವಾರ್ಥದ, ಆತ್ಮರಕ್ಷಣೆಯ, ಹೇಗಾದರೂ ಮುಂದೆ ಬರಬೇಕು ಎನ್ನುವ ಪಾಠ. ನಮ್ಮೆಲ್ಲರಲ್ಲಿಯೂ ಈ ಎರಡು ಬಗೆಯ ಪಾಠಗಳ ನಡುವೆ ಒಂದು ಬಗೆಯ ತಾಕಲಾಟ ನಡೆದಿರುತ್ತದೆ. ಯಾರು ಯಾವುದನ್ನು ಎಷ್ಟು ಕಲಿಯುತ್ತೇವೆಯೋ ಹೇಳುವುದು ಕಷ್ಟ. ಹಾಗೆ ಕಲಿತಿದ್ದು ಅಳವಡಿಸಿಕೊಂಡಿದ್ದು ನಮ್ಮ ಭಾವನೆಗಳ ಬದುಕು ಮತ್ತು ವಿಚಾರಗಳ ಬದುಕು ಎರಡರ ಮೇಲೆಯೂ ಪ್ರಭಾವ ಬೀರುತ್ತವೆ. ಅದರ ಪರಿಣಾಮ ಕೆಲವೊಮ್ಮೆ ಒಂಟಿತನದ ಕಣ್ಣೀರಿನ ಬದುಕು, ಕೆಲವೊಮ್ಮೆ ಆಕ್ರಮಣಶೀಲವಾದ ವಿಜೃಂಭಣೆಯ ಬದುಕು. ಮತ್ತೆ ಅನೇಕ ಬಾರಿ, ಹೊರನೋಟಕ್ಕೆ ಆರೋಗ್ಯಕರವಾಗಿ ಕಂಡರೂ ಒಳಗೇ ಕಳೆದುಕೊಂಡಿರುವ ಕೊರಗುತ್ತಿರುವ ಬದುಕು.
 ಇದೆಲ್ಲದರ ಹಿಂದೆಯೂ ಸಭ್ಯತೆ ಮತ್ತು ಸಹಜತೆಗಳ ನಡುವಿನ ದ್ವಂದ್ವ ಇದೆಯೆಂದು ನನಗೆ ತೋರುತ್ತದೆ. ಸಹಜವಾದುದೆಲ್ಲವೂ ಕೆಟ್ಟದೂ ಅಲ್ಲ, ಒಳ್ಳೆಯದೂ ಅಲ್ಲ. ಅದು ಎಲ್ಲ ಮನುಷ್ಯರಿಗೆ ಕಲಿಯದೆ, ಕಲಿಸದೆ ಬಂದಿರುವ ಲಕ್ಷಣಗಳ ಮೊತ್ತ. ಹಾಗೆ ಬದುಕಲು ಒಳಗಿನ ಹೊರಗಿನ ಒತ್ತಡಗಳ ಅಗತ್ಯವಿಲ್ಲ. ಅಂತಹ ಸಹಜತೆಯಲ್ಲಿ ಪ್ರೀತಿ, ಸ್ನೇಹ, ಅನುಕಂಪಗಳೂ ಇವೆ, ಸಿಟ್ಟು, ಸೆಡವು, ಸ್ವಾರ್ಥಗಳೂ ಇವೆ. ಒಂದು ಇನ್ನೊಂದಕ್ಕೆ ವಿರುದ್ಧವಲ್ಲ. ಅವು ಸಂದರ್ಭಕ್ಕೆ ಅನುಗುಣವಾಗಿ ಮೂಡಿಮುಳುಗುವ ಸಂಗತಿಗಳು. ಸಹಜವಾಗಿ ಬದುಕುವ ಮನುಷ್ಯನಿಗೆ ಯಾವುದರ ಬಗ್ಗೆಯೂ ಗಿಲ್ಟ್ ಇರುವುದಿಲ್ಲ. ಅಂತಹ ಮನುಷ್ಯ ತನ್ನನ್ನು ತಾನು ಪ್ರೀತಿಸಬಲ್ಲ. ಆದ್ದರಿಂದಲೆ ಇತರರನ್ನೂ ಪ್ರೀತಿಸಬಲ್ಲ. ಅಗತ್ಯ ಬಿದ್ದಾಗ ಜಗಳವಾಡಿದರೂ ಮತ್ತೆ ಒಂದುತನದಲ್ಲಿ ಬೆರೆಯಬಲ್ಲ. ಅನ್ಯರ ಸರಿತಪ್ಪುಗಳನ್ನು ಅರ್ಥ ಮಾಡಿಕೊಳ್ಳಬಲ್ಲ. ಸಹಜವಾಗಿ ತನಗೇ ಅನ್ನಿಸದೆ ಇರುವುದನ್ನು ಅವನು ಯಾರ, ಯಾವುದರ ಒತ್ತಾಯಕ್ಕೂ ಮಾಡಲಾರ, ಮಾಡುವುದಿಲ್ಲ. ಹೀಗೆ ಬದುಕಿದಾಗ ಆತ್ಮಸಂತೋಷಕ್ಕೆ ಅಡ್ಡಿಯಾಗದಂತೆ, ಅನ್ಯರಿಗೂ ಸಾಧ್ಯವಾದಷ್ಟು ಸಂತೋಷ ಕೊಡುವುದು ಸಾಧ್ಯವಾಗುತ್ತದೆ.
 ಆದರೆ, ಸಜ್ಜನಿಕೆಯ ಮಾತು ಬೇರೆ. ಇದು ಹೊರಗಿನಿಂದ ನೀಡಲಾದ ನಡೆನುಡಿಗಳ, ಮಾದರಿಗಳ ಕುರುಡು ಅನುಕರಣೆ. ಅವುಗಳ ಹಿಂದೆ ಇರುವ ತಾತ್ವಿಕತೆಗಳು ಸರಿಯೋ ಅಥವಾ ತಪ್ಪೋ ಎಂದು ಯೋಚಿಸುವ ವ್ಯವಧಾನವಾಗಲೀ ಸ್ವಾತಂತ್ರ್ಯವಾಗಲೀ ಬಹಳ ಜನರಿಗೆ ಇರುವುದಿಲ್ಲ. ಕ್ರಮೇಣ ಈ ಸೌಜನ್ಯವೇ ತಮ್ಮ ಮೇಲೆ ತಾವೇ ಹೇರಿಕೊಂಡ, ಅನ್ಯರಿಂದಲೂ ನಿರೀಕ್ಷಿಸುವ ನೀತಿಸಂಹಿತೆಯಾಗಿ ಬಿಡುತ್ತದೆ. ಸಭ್ಯರ ನಡಾವಳಿ ಎನ್ನುವುದು ಕೇವಲ ಕೃತಕವಾದ ಹುಸಿ ಆಚಾರ-ವಿಚಾರಗಳ ಮೊತ್ತವಾಗುತ್ತದೆ. ಯಾರೂ ಯಾವುದನ್ನೂ ವಿರೋಧಿಸುವುದೂ ಇಲ್ಲ, ಅನುಸರಿಸುವುದೂ ಇಲ್ಲ. ಇಂಥ ಸಮಾಜವು ಹುಸಿಗಳ ಮೇಲೆಯೇ ನಿಂತಿರುತ್ತದೆ. ಎಕ್ಸ್ಕ್ಯೂಸ್ ಮಿ’, ‘ಸಾರಿ’, ‘ಥ್ಯಾಂಕ್ ಯೂ’, ಮುಂತಾದ ಮಾತುಗಳ ಮೆರವಣಿಗೆಯಾಗಿಬಿಡುತ್ತದೆ. ಆಡುವ ಮಾತುಗಳ ಹಿಂದೆ ಪ್ರಾಮಾಣಿಕವಾದ ಭಾವನೆಗಳಾಗಲೀ ವಿಚಾರಗಳಾಗಲೀ ಇಲ್ಲದ ಈ ಸನ್ನಿವೇಶವು ಬಹಳ ಅಪಾಯಕಾರಿ. ಬಸವಣ್ಣನವರ ಸದುವಿನಯವೇ ಸಕಲ ಜಪಂಗಳಯ್ಯಾಎಂಬ ಮಾತಿಗೂ ಈ ನಾಗರಿಕನಡತೆಗೂ ಸಂಬಂಧವಿಲ್ಲ.
 ಹೋಗಲಿ. ಒಬ್ಬ ಮನುಷ್ಯ ನಿಜವಾಗಿಯೂ ಸೌಜನ್ಯದ ಎಲ್ಲ ನೆಲೆಗಳನ್ನೂ ಪ್ರಾಮಾಣಿಕವಾಗಿಯೇ ಕಲಿತಿದ್ದಾನೆ, ಅಳವಡಿಸಿಕೊಂಡಿದ್ದಾನೆ ಎಂದೇ ಇಟ್ಟುಕೊಳ್ಳೋಣ. ಆಗ ಏನಾಗುತ್ತದೆ? ಅವನನ್ನು ಮೆಚ್ಚುವವರೆಷ್ಟು ಜನ, ಪ್ರೀತಿಸುವವರೆಷ್ಟು ಜನ ಅಥವಾ ಬಳಸಿಕೊಂಡು ದೂರವಿಡುವವರೆಷ್ಟು ಜನ? ಈ ಮಾತಿಗೆ ಉತ್ತರ ನಮಗೆ ತಿಳಿದಿರುವ ಅಂತಹ ಮನುಷ್ಯರ ಬಗ್ಗೆ ಆಲೋಚಿಸಿದಾಗ ತಿಳಿಯುತ್ತದೆ. ಅವರಿಗೆ ನಿಜ ಹೇಳುವುದಕ್ಕೂ ಆತಂಕವೇ. ತಮಗೆ ಅನ್ಯಾಯವಾದಾಗ ಪ್ರತಿಭಟಿಸುವುದಕ್ಕೂ ಭಯವೇ. ಸಹಜವಾದ ನಡವಳಿಕೆಯನ್ನು ಸೌಜನ್ಯದ ಫಿಲ್ಟರ್ ಮೂಲಕ ಶೋಧಿಸಿ ಬಳಸುವ ಇವರಿಗೆ ಒಂಟಿತನವೇ ಗತಿ.
  ನಮ್ಮ ನಾಡು ರಾಮನನ್ನು ಗೌರವಿಸುತ್ತದೆ. ಕೃಷ್ಣನನ್ನು ಪ್ರೀತಿಸುತ್ತದೆ. ಇವರಿಬ್ಬರಲ್ಲಿ ಯಾರದು ಸಹಜತೆ, ಯಾರದು ಸೌಜನ್ಯ? ರಾಮನದು, ಸೀತೆಯನ್ನು ಕೂಡ ಕಾಡಿಗೆ ಕಳಿಸುವ ನಿಯಮಬದ್ಧತೆಯಾದರೆ, ಕೃಷ್ಣನದು ಸಂದರ್ಭಕ್ಕೆ ಹೊಂದಿಕೊಳ್ಳುವ ಮಾನವೀಯ ಆಯ್ಕೆಗಳನ್ನು ಮಾಡಿಕೊಳ್ಳುವ ವಿವೇಕ. ಗಾಂಧೀಜಿಯವರು ರಾಮನನ್ನು ನಂಬಿದವರು. ದಕ್ಷಿಣ ಆಫ್ರಿಕಾದಲ್ಲಿ ನಟ್ಟನಡುರಾತ್ರಿಯಲ್ಲಿ, ಪಾಯಖಾನೆಯನ್ನು ತೊಳೆಯಲಿಲ್ಲವೆಂದು, ಕಸ್ತೂರಿ ಬಾ ಅವರನ್ನು ಮನೆಯಿಂದ ಹೊರತಳ್ಳಲು ಅವರಿಗೆ ಸಂಕೋಚವೆನ್ನಿಸಲಿಲ್ಲ. ಇಂಥ ಸನ್ನಿವೇಶದಲ್ಲಿ ನಿಯಮ ನಿಷ್ಠುರತೆಯು ತನ್ನಂತೆ ಅನ್ಯರನ್ನು ಬಗೆಯುವುದಿಲ್ಲ. ಅದು ಸರ್ವಾಧಿಕಾರಕ್ಕೆ ಹಾಕಿದ ಮುಖವಾಡ ಮಾತ್ರ. ಅದು ಕೂಡ ಕಾನೂನಿನ ಹಾಗೆಯೇ, ಸನ್ನಿವೇಶದ ಸಂಕೀರ್ಣತೆಯನ್ನು ಗ್ರಹಿಸದೆ, ಅಕ್ಷರನ್ಯಾಯಕ್ಕೆ ಅಂಟಿಕೊಳ್ಳುತ್ತದೆ. ಇಂಥ ಕಡೆ ಸಜ್ಜನರು ಮೂಕರಾಗುತ್ತಾರೆ ಅಥವಾ ಜಾಣಕುರುಡು ನಟಿಸುತ್ತಾರೆ. ಸಹಜವಾಗಿರುವವರು, ಕೋಪ ತಾಪಗಳಲ್ಲಿ ಕುದಿಯುತ್ತಾರೆ. ದ್ರೌಪದಿಯ ವಸ್ತ್ರಾಪಹರಣವಾಗುವಾಗ, ಬೆಂಕಿಯನ್ನು ತರಿಸಿ ಧರ್ಮರಾಯನ ಕೈಗಳನ್ನು ಸುಟ್ಟುಬಿಡಬೇಕೆನ್ನುವ ಭೀಮನು ಸಹಜವೆನಿಸಿದರೆ, ಉಳಿದ ಪಾಂಡವರು ಸಜ್ಜನರೆನಿಸುತ್ತಾರೆ. "ಈ ನಪುಂಸಕರ ನಡುವೆ ಹುಟ್ಟಿದ ನಾನು ಮೂಗುಳ್ಳವನೇ?", ಎಂದು ಕೊರಗುವ ಭೀಮ ನಮಗೆ ಆತ್ಮೀಯನಾಗುತ್ತಾನೆ.  ಆದ್ದರಿಂದಲೇ ದ್ರೌಪದಿಯು, "ಕಲಿ ಭೀಮನೊಬ್ಬನೆ ಮಿಡುಕುಳ್ಳ ಗಂಡನು.", ಎಂದು ಸತ್ಯಕ್ಕೆ ಕನ್ನಡಿ ಹಿಡಿಯುತ್ತಾಳೆ. 
   ಈ ಸಹಜತೆ ಮತ್ತು ಸೌಜನ್ಯಗಳ ಮಾತು ಕೇವಲ ಮನುಷ್ಯ ಸಂಬಂಧಗಳಿಗೆ ಮಾತ್ರವಲ್ಲ, ಸಾಮಾಜಿಕ ಸಂಬಂಧಗಳಿಗೂ ಅನ್ವಯಿಸುತ್ತದೆ. ಅನೇಕ ಸಲ, ನಾವು ಸೌಜನ್ಯದ ಹೆಸರಿನಲ್ಲಿ ಸಾಮಾಜಿಕ ಅನ್ಯಾಯಗಳನ್ನು ಸಹಿಸುತ್ತೇವೆ. ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಶೋಷಣೆಯೂ ನ್ಯಾಯವೆನಿಸುತ್ತದೆ. ಉದಾಹರಣೆಗೆ ವ್ಯಾಪಾರ ಎಂಬ ಪ್ರಕ್ರಿಯೆಯ ಸಂಗಡವೇ ಸೇರಿಕೊಂಡಿರುವ ಅನ್ಯಾಯವು ನಮಗೆ ಹಾಗೆ ತೋರುವುದೇ ಇಲ್ಲ. ಆನೆ ಕದ್ದವನ ಅಂಗಡಿಯಲ್ಲಿ, ಅಡಕೆ ಕದ್ದವನು ನಮಗೆ ಕಳ್ಳನಾಗುತ್ತಾನೆ. ಆನೆಕಳ್ಳನು ನ್ಯಾಯಾಲಯದಲ್ಲಿ ಫಿರ್ಯಾದಿಯಾಗಿ ಬಿಡುತ್ತಾನೆ. ಇದು ಸರಿಯಲ್ಲವೆಂದು ಯಾವ ಸಜ್ಜನರಿಗೂ ತೋರುವುದಿಲ್ಲ. ತೋರಿದರೂ ಅವರು ಹೇಳುವುದಿಲ್ಲ. ಇಂದಿನ ಇಂಡಿಯಾದಲ್ಲಿ, ನಕ್ಸಲೀಯರನ್ನುಪಬ್ಲಿಕ್ ಎನಿಮಿ ನಂಬರ್ ೧ಎಂದು ಗುರುತಿಸುವುದರ ಹಿಂದೆಯೂ ಇದೇ ಬಗೆಯ ತರ್ಕ ಕೆಲಸ ಮಾಡುತ್ತದೆ.
  ಇಲ್ಲಿ ನಾನು ಯಾವುದೇ ತೀರ್ಮಾನಗಳನ್ನು ಕೊಡುತ್ತಿಲ್ಲ. ಸಹಜವಾದುದು ಯಾವುದು ಎನ್ನುವುದನ್ನು ನಾವೆಲ್ಲರೂ ಸ್ವತಃ ಕಂಡುಕೊಳ್ಳಬೇಕು. ಒಬ್ಬನಿಗೆ ಸಹಜವಾದುದು ಇನ್ನೊಬ್ಬನಿಗೆ ಅಸಜಹವಾಗಿರಬಹುದು. ಇದೂ ಮಹತ್ವದ ಪ್ರಶ್ನೆಯೇ. ಕೊನೆಗೂ ಪ್ರತಿಯೊಬ್ಬರೂ ಅವರವರ ಸ್ವಭಾವಗಳ, ಅನಾಟಮಿಗಳ ಸೆರೆಮನೆಯಲ್ಲಿ ಬಂಧಿತರಾದವರೇ? ಹೆರಿಡಿಟಿ, ಸಂಸ್ಕಾರ ಮತ್ತು ಶಿಕ್ಷಣಗಳು ಈ ನಾಟಕದಲ್ಲಿ ಯಾವ ಪಾತ್ರ ವಹಿಸುತ್ತವೆ. ನನಗಂತೂ ತಿಳಿಯದು.
  ದಯವಿಟ್ಟು ಕೇಳಿ. ಇದನ್ನು ಓದಿ ಮರೆಯಬಹುದಾದ ಬರೆಹವೆಂದು ನೀವು ತಿಳಿದರೆ, ನನಗೂ ಪ್ರಯೋಜನವಿಲ್ಲ, ನಿಮಗೂ ಇಲ್ಲ. ಬದಲಾಗಿ, ನಮ್ಮನ್ನು ನಾವು ಬದಲಿಸಿಕೊಳ್ಳುವುದು ನಮ್ಮ ಹಕ್ಕು ಮತ್ತು ಹೊಣೆಗಾರಿಕೆ ಎಂಬ ತಿಳಿವಳಿಕೆಯು ಈ ಪ್ರಶ್ನೆಗಳನ್ನು ಅಥವಾ ಇಂತಹುದೇ ಪ್ರಶ್ನೆಗಳನ್ನು ತಾನೂ ಕೇಳಿಕೊಳ್ಳುತ್ತದೆ, ತನ್ನದೇ ಉತ್ತರಗಳನ್ನು ಕಂಡುಕೊಳ್ಳುತ್ತದೆ ಮತ್ತು ಅವಕ್ಕೆ ಅನುಗುಣವಾಗಿ ಬದಲಾಗುತ್ತದೆ. ಅದೇ ಸಹಜ.