Wednesday, July 25, 2012

ತೋಮಾಸ್ ಟ್ರಾನ್ಸ್ ಟ್ರೋಮರ್ ಅವರ ಕವಿತೆಗಳು



 
ಅಕ್ಟೋಬರ್ ಚಿತ್ರ

ಇಗೊ, ತುಕ್ಕುಕಲೆ ಹರಡಿರುವ ದಿಕ್ಕೆಟ್ಟ ಹಡಗು
ಕಡಲೀಚೆಯ ಒಳನೆಲದಲಿ, ಇದರದೇನು ಕಾರ್ಯ?
ಭೂತಾಕಾರದ ಆರಿದ ದೀಪ, ಶೀತಲನೆಲದಲಿ ನಿಶ್ಚಲರೂಪ.
ಆದರೆ, ಮರಗಳ ತುಂಬ ಬಗೆಬಗೆ ಬಣ್ಣ:
ಆಚೆ ದಂಡೆಯ ನೆರವುಬೇಡುವ, ಅಳಿದುಳಿದ ಪಯಣಿಗರ
ಬಣ್ಣದಬಟ್ಟೆಯ ಬಾವುಟದ ಹಾಗೆ.

ಮನೆಯ ಹಾದಿಯಲ್ಲಿ ನಾನು.
ಹುಲ್ಲುಹಾಸಿಗೆ ನಡುವೆ ಬಿಳಿಬಿಳಿ ಅಣಬೆಗಳು.
ಯಾರದೋ ನೆರವಿಗೆ, ಹಂಬಲಿಸುವ ಬೆರಳುಗಳು.
ಆ ಅವನು, ನೆಲದಡಿಯ ಕಪ್ಪುಏಕಾಂತದಲ್ಲಿ,
ಬಿಕ್ಕಳಿಸಿ ಮಲಗಿ ಯುಗಗಳೇ ಕಳೆದಿವೆ.
ಓಡಾಡುವ ಈ ನಾವು,
ಭೂಮಿಯ ಬೆರಳುಗಳು. 
  
                                         ಒಂದು ಸಾವಿನ ಬಳಿಕ
ಹಿಂದೊಮ್ಮೆ ಒಂದು ಆಘಾತವಾಯ್ತು.
ಹೊಳೆಹೊಳೆಯುವ, ನಿಡುಬಾಲದ ಧೂಮಕೇತು ಉಳಿಯಿತು.
ಅದರಿಂದ ನಾವು, ಮನೆಯೊಳಗೆಯೆ ಬಂಧಿತರು.
ಅದರಿಂದ ನಮ್ಮ, ಟೆಲಿವಿಷನ್ ಬಿಂಬಗಳು ಮಂಜುಮಂಜು.
ಅದು, ಟೆಲಿಫೋನ್ ತಂತಿಗಳ ಮೇಲೆ ತಣ್ಣನೆಯ ಹನಿಗಳಾಗಿ ನೆಲೆಸುತ್ತಿದೆ.

ಈಗಲೂ ಮಾಗಿಯ ಸೂರ್ಯನ ಕೆಳಗೆ ನಿಧಾ..ನವಾಗಿ ಚಲಿಸಬಹುದು.
ಹಾದಿಬದಿ ಪೊದೆಯಲ್ಲಿ,  ಕೊನೆಕೊನೆ ಎಲೆ, ಉಸಿರೆಳೆಯುತ್ತಿವೆ ಹೀ..ಗೆ
ಹಳೆಯ ಟೆಲಿಫೋನ್ ಡೈರೆಕ್ಟರಿಯಿಂದ ಹರಿದ ಪುಟಗಳ ಹಾ..ಗೆ.
ಹೆಸರುಗಳನ್ನು ನುಂಗಿದೆ ಮಂಜುಬಿಳಿಥಂಡಿ.

ಈಗಲೂ ಹೃದಯದ ಬಡಿತಗಳಿಗೆ ಸ್ಪಂದಿಸುವುದು ಎಷ್ಟೊಂದು ಸುಂದರ.
ಆದರೆ, ದೇಹಕ್ಕಿಂತ ನೆರಳುಗಳೇ ನಿಜವೆನಿಸುತ್ತದೆ ಮತ್ತೆಮತ್ತೆ.
ಕವಚ, ಕುಂಡಲ, ಶಿರಸ್ತ್ರಾಣಗಳ ಅಬ್ಬರದಲ್ಲಿ,
ಸಮುರಾಯ್ ಯೋಧ ಕಾಣುತ್ತಾನೆ ಕ್ಷುಲ್ಲಕನಂತೆ, ಪೆದ್ದನಂತೆ.


 



ಹರಿದು ಹಂಚಿಹೋದ ಭಕ್ತವೃಂದ
1
ನಾವು ಸಜ್ಜಾದೆವು, ನಮ್ಮ ಮನೆ ತೋರಿಸಿದೆವು.
ಅತಿಥಿ ಯೋಚಿಸಿದ: ನೀವೇನೋ ಸುಖವಾಗಿ ಬದುಕಿದ್ದೀರಿ.
ಕೊಳೆಗೇರಿ ಇರಬೇಕು, ನಿಮ್ಮೊಳಗಿನೊಳಗೆ
2
ಚರ್ಚಿನೊಳಗೆ ಕಂಬಗಳು, ಗೋಪುರಗಳು, ಸೀಲಿಂಗುಗಳು
ಕಡು ಬಿಳಿ ಬಣ್ಣ. ನಂಬಿಕೆಯೆಂಬ ಮುರಿದ ತೋಳನ್ನು
ಕಟ್ಟಿಹಿಡಿದಿರುವ ಪ್ಲಾಸ್ಟರ್ ಕ್ಯಾಸ್ಟಿನ ಹಾಗೆ.

3
ಚರ್ಚಿನೊಳಗೊಂದು ಭಿಕ್ಷಾಪಾತ್ರೆಯಿದೆ.
ನಿಧಾನವಾಗಿ ನೆಲಮಟ್ಟದಿಂದ ಮೇಲೇರುತ್ತದೆ,
ಭಕ್ತರ ಸಾಲುಗಳ ನಡುವೆ ತೇಲುತ್ತ ಚಲಿಸುತ್ತದೆ.
4
ಆದರೆ, ಚರ್ಚಿನ ಗಂಟೆಗಳು ನೆಲದ ಕೆಳಗೆ ಮರೆಯಾಗಿವೆ.
ಅವು ಒಳಚರಂಡಿಯ ಪೈಪುಗಳಲ್ಲಿ ನೇತಾಡುತ್ತಿವೆ,
ನಾವು ಹೆಜ್ಜೆಯಿಟ್ಟಾಗೆಲ್ಲ, ಗಣಗಣಗಣ ಗಂಟೆ ಬಾರಿಸುತ್ತವೆ.
5
ನಿದ್ದೆಯಲ್ಲಿ ನಡೆವ ನಿಕೋಡೆಮಸ್, ಆ ವಿಳಾಸಕ್ಕೆ
ಪಯಣ ಹೊರಟಿದ್ದಾನೆ. ಆ ವಿಳಾಸ ಯಾರ ಬಳಿ ಇದೆ?
ಗೊತ್ತಿಲ್ಲ. ಆದರೆ, ನಾವೆಲ್ಲ ಹೋಗುತ್ತಿರುವುದು ಅಲ್ಲಿಗೆ.


ಮಂಜುಗಡ್ಡೆಗಿಂತ ಕೆಳಗೆ
ನಮ್ಮನ್ನು ಪ್ರೀತಿಸದ ಪಾರ್ಟಿಯಲ್ಲಿ, ನಾವು ಅತಿಥಿಗಳು. ಕೊನೆಗೊಮ್ಮೆ , ಪಾರ್ಟಿ ತನ್ನ ಮುಖವಾಡವನ್ನು ಬದಿಗೆಸೆಯುತ್ತದೆ, ನಿಜರೂಪ ತೋರಿಸುತ್ತದೆ: ಅದು ಗೂಡ್ಸ್ ಗಾಡಿಗಳು ಹಳಿಬದಲಿಸುವ ಷಂಟಿಂಗ್ ನಿಲ್ದಾಣ. ಕವಿದ ಮಂಜಿನಲ್ಲಿ, ಕೊರೆವ ಹಳಿಗಳ ಮೇಲೆ ಶೀತಲ ರಾಕ್ಷಸರು ನಿಂತಿದ್ದಾರೆ. ಗಾಡಿಗಳ ಬಾಗಿಲುಗಳ ಮೇಲೆ ಬಿಳಿಸುಣ್ಣದ ಅಕ್ಷರಗಳು.
ಈ ಮಾತನ್ನು ಗಟ್ಟಿಯಾಗಿ ಹೇಳಲಾಗದು. ಇಲ್ಲಿ ಅಪರಿಮಿತವಾದ, ಅದುಮಿಟ್ಟ ಹಿಂಸೆಯಿದೆ. ಅದಕ್ಕೇ ಇರಬೇಕು, ಈ ಫರ್ನೀಚರ್ ಮತ್ತು ಈ ಪರದೆಗಳು ಅಷ್ಟೊಂದು ಭಾರ. ಇಲ್ಲಿಯೇ ಇರುವ ಇನ್ನೊಂದು ಸಂಗತಿಯನ್ನು ನೋಡುವುದು ಏಕಿಷ್ಟು ಕಷ್ಟ: ಮನೆಯ ಗೋಡೆಗಳ ಮೇಲೆ ಚಲಿಸುವ, ಮಿಂಚುವಮಂಕುವ ಮುಖಗಳ  ಅಬೋಧ ಅರಣ್ಯದ ಮೇಲೆ, ನುಸುಳುವ ಒಂದು ಹಿಡಿ ಸೂರ್ಯ ಮತ್ತು ಎಲ್ಲೂ ಯಾರೂ ದಾಖಲೆಮಾಡದ ಬೈಬಲ್ಲಿನಲ್ಲಿದೇ ಒಂದು ಮಾತು: ಎಲ್ಲರೂ ನನ್ನೆಡೆಗೆ ಬನ್ನಿ. ಏಕೆಂದರೆ, ನಾನೂ ನಿಮ್ಮಂತೆಯೇ. ಗೊಂದಲಗಳಿಂದ, ಪರಸ್ಪರ ವಿರೋಧಗಳಿಂದ ತುಂಬಿತುಳುಕುವವನು.
ಮರುದಿನ ಮುಂಜಾನೆ, ನಾನು ಬೇರೊಂದು ಊರಿನಲ್ಲಿ ಕೆಲಸ ಮಾಡಬೇಕು. ಸೂರ್ಯನು ಮೂಡುತ್ತಿರುವ ನೀಲಿನಭದ ನಡುವೆ, ನನ್ನ ಶರವೇಗದ ಪಯಣ. ಆಕಾಶ, ಕಡುನೀಲಿಯ ಸಿಲಿಂಡರಿನಂತೆ,  ನನ್ನನ್ನು ಸುತ್ತುವರಿದಿದೆ. ದೂರದಲ್ಲಿ, ಮಂಜಿನಪರದೆಯ ಮೇಲೆ ಓರಿಯನ್ ನಕ್ಷತ್ರಪುಂಜ ನೇತಾಡುತ್ತಿದೆ. ಸ್ಕೂಲ್ ಬಸ್ಸಿಗಾಗಿ ಕಾಯುತ್ತ, ಮಕ್ಕಳ ಗುಂಪು ನಿಂತಿದೆ, ಸದ್ದಿಲ್ಲದೆ, ಗದ್ದಲವಿಲ್ಲದೆ. ಈ ಮಕ್ಕಳ ಒಳಿತಿಗಾಗಿ ಯಾರೂ ಪ್ರಾರ್ಥನೆ ಮಾಡುತ್ತಿಲ್ಲ. ಕೂದಲು ಬೆಳೆಯುವಷ್ಟೇ ನಿಧಾನವಾಗಿ, ಬೆಳೆಯುತ್ತಿದೆ ಬೆಳಕು.

                                                                              ತೋಮಾಸ್ ಟ್ರಾನ್ಸ್ ಟ್ರೋಮರ್
                                                                ಅನುವಾದ: 
                                                                ಎಚ್.ಎಸ್. ರಾಘವೇಂದ್ರ ರಾವ್
------------------------------------------------------------------------------------

ನನ್ನ ಕವಿತೆಗಳು ಕೂಡುತಾಣಗಳು. ಸಾಂಪ್ರಾದಾಯಿಕವಾದ ಭಾಷೆ ಮತ್ತು ದೃಷ್ಟಿಕೋನಗಳು ಸಾಮಾನ್ಯವಾಗಿ ದೂರದೂರವೇ ಇಡುವ ವಾಸ್ತವದ ಹಲವು ನೆಲೆಗಳ ನಡುವೆ ಹಠಾತ್ತಾದ ಸಂಬಂಧವನ್ನು ಕಟ್ಟಿಕೊಡುವುದು ನನ್ನ ಉದ್ದೇಶ. ಮೊದಲ ನೋಟಕ್ಕೆ ವಿರೋಧಿಗಳೆಂದು ತೋರುವ ಸಂಗತಿಗಳೂ ದಿಟದಲ್ಲಿ ನೋಡಿದಾಗ, ಸಂಬಂಧಗಳೇ ಆಗಿರುತ್ತವೆ.
        ತೋಮಾಸ್ ಟ್ರಾನ್ಸ್ ಟ್ರೋಮರ್ ಅವರು ಈ ಬಾರಿ ನೊಬೆಲ್ ಬಹುಮಾನ ಪಡೆದಿರುವ ಸ್ವೀಡಿಶ್ ಕವಿ.
    

5 comments:

  1. nimma tomas avara kavitegal anuvada odi kusi ayitu. nimma blog noodi innoo kusi agide. idkkagi nimage dannavadagalu. thanks sir.

    ReplyDelete
  2. sir,nimma anuvaadada niDida anubhavakke dhanyavaadagaLu sir

    ReplyDelete
  3. ಟ್ರಾನ್ಸ್ ಟ್ರೋಮರ್ನ ಕವಿತೆಗಳು ಚೆನ್ನಾಗಿವೆ ಸರ್, ಗೊತ್ತಿಲ್ಲದ ವಿಳಾಸಕ್ಕೆ ಪಯಣ ಹೊರಟ ಸಾಲುಗಳು ಚೆನ್ನಾಗಿವೆ. ನಾವೂ ಕೂಡ ಎಲ್ಲರೂ ಒಂದು ದಿನ ಗೊತ್ತಿಲ್ಲದ ವಿಳಾಸಕ್ಕೆ ಪಯಣಿಸುತ್ತೇವೆ. ಆ ವಿಳಾಸ ಯಾರ ಬಳಿಯೂ ಇಲ್ಲ. ಆದರೂ ಈ ಸತ್ಯ ತಿಳಿಯದೆ ಬದುಕಿಗಾಗಿ ಅನೇಕ ಆಸೆಯಿಂದ ಅನಾಚಾರಗಳನ್ನು ಮಾಡುತ್ತಿರುತ್ತೇವೆ. ಆಸೆಯನ್ನು ಬಿಡಿ ಎಂದು ಬುದ್ಧ ಹೇಳಿ 2500 ವರ್ಷ ಕಳೆದರೂ ನಮ್ಮ ಮನಸಿಗೆ ನಾಟಿಲ್ಲ.ಮೇಲಿನ 2 ಸಾಲುಗಳು ಏನೇನೋ ಧ್ವನಿಸುತ್ತಿವೆ ಸರ್. ಕನ್ನಡಕ್ಕೆ ಈ ಸಾಲುಗಳನ್ನು ತಂದದ್ದಕ್ಕೆ ಧನ್ಯವಾದಗಳು ಸರ್.

    ReplyDelete