Friday, August 31, 2012

ಹಳೆಯ ಹಸ್ತಪ್ರತಿ - ಕಾಫ್ಕಾ ಬರೆದ ಅಪೂರ್ಣ ಕಥೆ



ಹಳೆಯ ಹಸ್ತಪ್ರತಿ
ಹೌದು. ದೇಶವನ್ನು ಕಾಪಾಡಿಕೊಳ್ಳೋದು ಹೇಗೆ ಅಂತ ನಮಗೆ ಗೊತ್ತಿಲ್ಲ. ಉಡಾಫೆಯಲ್ಲೇ ಕಾಲ ಕಳೆದುಹೋಯ್ತು. ಇಲ್ಲಿಯ ತನಕ ಅದರ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ. ದಿನದಿನದ ಕೆಲಸಗಳಲ್ಲಿ ಮುಳುಗಿಬಿಟ್ಟಿದ್ವಿ. ಆದರೆ, ಈಚೆಗೆ ಆಗ್ತಾ ಇರೋ ಘಟನೆಗಳು ಮನಸ್ಸು ಕೆಡಿಸೋದಕ್ಕೆ ಶುರುಮಾಡಿವೆ.
ನಾನು ಚಮ್ಮಾರ. ನನ್ನ ಅಂಗಡಿ, ಅರಮನೆ ಎದುರುಗಡೆ ಇರೋ ಚೌಕದಲ್ಲಿದೆ. ದಿನಾ ಬೆಳಿಗ್ಗೆ ಸೂರ್‍ಯ ಹುಟ್ಟೋ ಹೊತ್ತಿಗೆ, ಅಂಗಡಿ ಬಾಗಿಲು ತೆಗೀತೀನಿ. ಅಷ್ಟು ಹೊತ್ತಿಗಾಗಲೇ, ಸರ್‍ಕಲ್ಲಿಗೆ  ಬರೋ ಎಲ್ಲಾ ದಾರಿಗಳೂ ಬಂದ್. ಎಲ್ಲಿ ನೋಡಿದ್ರೂ ಸೈನಿಕರೇ ಕಾಣಿಸ್ತಾರೆ, ಅವರು ನಮ್ಮ ಸೈನಿಕರಲ,. ಉತ್ತರದೇಶದಿಂದ ಬಂದಿರೋರು ಅಂತ, ನೋಡಿದಕೂಡಲೇ ಗೊತ್ತಾಗತ್ತೆ. ರಾಜಧಾನಿ, ಗಡಿ ಪ್ರದೇಶದಿಂದ ಅಷ್ಟು ದೂರ ಇದೆ. ಆದರೂ ಇವರೆಲ್ಲಾ ನಮ್ಮ ನಡುವೆ ಬಂದುಬಿಟ್ಟಿದಾರೆ. ಅಷ್ಟೇ ಅಲ್ಲ, ದಿನೇ ದಿನೇ, ಅವರ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಹೇಗೆ ಅಂತ ನನಗಂತೂ ಅರ್‍ಥವಾಗ್ತಿಲ್ಲ.  
ಅದು ಅವರ ಸ್ವಭಾವ. ಅವರಿಗೆ, ಜನ ವಾಸ ಮಾಡೋ ಮನೆಗಳು ಅಂದರೆ ದ್ವೇಷ. ನೀಲಿ ಆಕಾಶದ ಕೆಳಗೆ ಟೆಂಟ್ ಹಾಕಿಕೊಂಡು, ಜೀವನ ನಡೆಸ್ತಾರೆ. ಮೂರು ಹೊತ್ತೂ ಅದೇ ಕೆಲಸ. ಕತ್ತಿ ಸಾಣೆಹಿಡಿಯೋದು, ಬಾಣಾ ಚೂಪುಮಾಡೋದು, ಕುದುರೆಸವಾರಿ ಪ್ರಾಕ್ಟೀಸ್ ಮಾಡೋದು. ಈ ಸರ್ಕಲ್, ಯಾವಾಗಲೂ ಶಾಂತವಾಗಿ ಇರ್‍ತಿತ್ತು. ಒಂಚೂರು ಕೊಳೆ ಕಸಾ ಇರ್‍ತಿರಲಿಲ್ಲ. ಇವರು, ಅದನ್ನು ಕುದುರೆಲಾಯ ಮಾಡಿಬಿಟ್ಟಿದಾರೆ. ನಾವು, ಆಗೀಗ ಅಂಗಡಿ ಇಂದ ಹೊರಗೆಬಂದು, ಅಲ್ಪಸ್ವಲ್ಪ ಕ್ಲೀನ್ ಮಾಡೋಕೆ ಪ್ರಯತ್ನ ಪಡ್ತೀವಿ. ಬರ್‍ತಾ ಬರ್‍ತಾ, ಅದೂ ಕಡಿಮೆ ಆಗ್ತಾ ಇದೆ. ಅದರಿಂದ ಏನೂ ಪ್ರಯೋಜನ ಇಲ್ಲ. ನಮಗೂ ಅಪಾಯ ಜಾಸ್ತಿ. ಅವರ ಕುದುರೆಕಾಲಿಗೆ ಸಿಕ್ಕು ಕೆಳಗೆ ಬೀಳಬೇಕು ಅಥವಾ ಅವರ ಚಾಟೀಏಟು ತಿಂದು ಕೈಯೋ ಕಾಲೋ ಮುರ್‍ಕೋಬೇಕು.
ಈ ಅಲೆಮಾರಿಗಳ ಜತೆ ಮಾತಾಡೋದು ಸಾಧ್ಯವೇ ಇಲ್ಲ. ಅವರಿಗೆ ನಮ್ಮ ಭಾಷೆ ಗೊತ್ತಾಗಲ್ಲ. ಹಾಗೆ ನೋಡಿದೆ, ಅವರಿಗೆ ತಮ್ಮದೇ ಆದ ಭಾಷೆಯೂ ಇಲ್ಲ. ಅವರ ನಡುವಿನ ಸಂಭಾಷಣೆ ಅಂದ್ರೆ, ಕಳ್ಳ ಕಾಗೆಗಳು ಕವಕವ ಅನ್ನೋ ಹಾಗೆ. ಆ ಶಬ್ದ, ಯಾವಾಗಲೂ ಕಿವಿ ಒಳಗೆ ಚೀರ್‍ತಾಇರತ್ತೆ. ನಮ್ಮ ಬದುಕಿನ ರೀತಿ, ಸಂಘ-ಸಂಸ್ಥೆಗಳು, ಇವೆಲ್ಲ ಅವರಿಗೆ ಅರ್‍ಥವಾಗೋದಿಲ್ಲ. ಅವರಿಗೆ ಅರ್‍ಥಮಾಡಿಕೊಳ್ಳೋ ಉದ್ದೇಶವೂ ಇಲ್ಲ. ನೀವು, ಕೈಮುರಿಯೋ ತನಕ ಸನ್ನೆ ಮಾಡಿ, ಗಂಟಲು ಹರಿಯೋ ತನಕ ಶಬ್ದ ಮಾಡಿ. ಏನೂ ಮಾಡಿದರೂ ಅಷ್ಟೆ. ಹೊಳೇಲಿ ಹುಣಿಸೇಹಣ್ಣು ತೊಳೆದ ಹಾಗೆ. ಕೆಲವು ಸಲ, ವಿಕಾರವಾಗಿ ಮುಖ ಮಾಡ್ತಾರೆ. ಕಣ್ಣುಗುಡ್ಡೆ ಹೊರಗಡೆ ಬರತ್ತೆ, ತುಟೀ ಸುತ್ತಲೂ ನೊರೆ ಬರತ್ತೆ. ಆದರೆ, ಅದಕ್ಕೆ ಯಾವ ಅರ್‍ಥವೂ ಇಲ್ಲ. ಅವರು ನಿಮ್ಮನ್ನು ಹೆದರಿಸೋದಕ್ಕೂ ಟ್ರೈ ಮಾಡ್ತಿರಲ್ಲ. ಹಾಗೆ ಮಾಡೋದು ಯಾಕೆ ಅಂದೆ, ಅದು ಅವರ ಸ್ವಭಾವ. ಅಷ್ಟೆ. ಅವರಿಗೆ ಏನು ಬೇಕೋ ಅದನ್ನು ತಗೋತಾರೆ. ಬಲವಂತ ಮಾಡಿದರು, ಅಂತ ಹೇಳೋಕೂ ಅಗಲ್ಲ. ಅವರಿಗೆ ಇಷ್ಟವಾದ್ದಕ್ಕೆ ಕೈ ಹಾಕ್ತಾರೆ. ನೀವು ಸುಮ್ನೆ ನಿಂತ್ಕೊಂಡು ನೋಡ್ತೀರಿ. ಅಲ್ಲೀಗೆ ಮುಗೀತು.
ಅವರು, ನನ್ನ ಅಂಗಡಿಯಿಂದಲೂ ಎಷ್ಟೋ ಐನಾತಿ ಸಾಮಾನು ತಗೊಂಡಿದಾರೆ. ಪಕ್ಕದ ಅಂಗಡೀ ಕಸಾಯಿಯವನ ಪಡಿಪಾಟಲು ನೋಡಿದರೆ, ನಾನೇನೂ ಕಂಪ್ಲೇಂಟ್ ಮಾಡೋಹಾಗಿಲ್ಲ. ಅಂಗಡೀಗೆ ಹೊಸ ಮಾಂಸ ತರೋದೇ ತಡ, ಅವರು ಬಂದು ಅಷ್ಟನ್ನೂ ನುಂಗಿ ನೀರು ಕುಡೀತಾರೆ. ಅವರ ಕುದುರೆಗಳು ಕೂಡ ಮಾಂಸ ಕಂಡರೆ ಬಿಡೋದಿಲ್ಲ. ಎಷ್ಟೋ ಸಲ, ಕುದುರೆ ಮತ್ತು ಮನುಷ್ಯ ಅಕ್ಕಪಕ್ಕ ಬಿದ್ಕೊಂಡು ಒಂದೇ ಚೂರು ಮಾಂಸ ಜಗೀತಾ ಇರ್‍ತಾರೆ. ಆ ತುದಿಯಿಂದ ಮನುಷ್ಯ. ಈ ತುದಿಯಿಂದ ಕುದುರೆ. ಅಂಗಡಿಯೋನು ಪ್ರತಿ ದಿನ ಹೊಸ ಮಾಂಸ ತರಲೇಬೇಕು. ಬೇರೆ ದಾರಿ ಇಲ್ಲ. ಅವನು ಮಾಂಸ ಕೊಳ್ಳೊಕೆ, ನಾವೆಲ್ಲ ಚಂದಾ ಹಾಕಿ ದುಡ್ಡು ಕೊಡ್ತೀವಿ. ಮಾಂಸ ಸಿಗದೇ ಇದ್ರೆ, ಈ ಅಲೆಮಾರಿಗಳು ಏನುಮಾಡ್ತಾರೋ ಯಾರಿಗೆ ಗೊತ್ತು? ಅದಿರಲಿ, ಪ್ರತಿ ದಿನ ಮಾಂಸ ಸಿಕ್ರೂ ಅವರ ತಲೇಲಿ ಏನು ಯೋಚನೆ ಬರತ್ತೋ? ಹೇಗೆ ಹೇಳೋದು??
ಕೆಲವು ದಿನಗಳ ಹಿಂದೆ, ಕಸಾಯಿಯವನು ಒಂದು ಪ್ಲಾನ್ ಮಾಡಿದ. ಮಾಂಸ ಕತ್ತರಿಸೋ ಕೆಲಸ ಆದರೂ ತಪ್ಪಲಿ ಅಂತ, ಒಂದು ದಿನ ಬದುಕಿರೋ ಎತ್ತು ತಂದ. ಸರಿಯಾಗಿ ಬುದ್ಧಿಬಂತು. ಅವನ ಜೀವಮಾನವಿಡೀ ಅಂಥ ಕೆಲಸ ಮಾಡೋದಿಲ್ಲ. ನಾನು ಅಂಗಡಿ ಬಾಗಿಲು ಹಾಕಿ, ಹಿಂದುಗಡೆ ಹೋಗಿ, ಮೂಲೇಲಿ ಬಿದ್ಕೊಂಡೆ. ಕಿವಿ ಸುತ್ತಲೂ ಇರೋಬರೋ ಬಟ್ಟೆ, ಕಂಬಳೀ, ದಿಂಬು. ಎತ್ತಿನ ಕೂಗು ಕೇಳಿಸಿಕೊಳ್ಳದೆ ಇರೋಕೆ ಇಷ್ಟೆಲ್ಲ ಕಸರತ್ತು ಮಾಡಿದ್ರೂ, ಈಗಲೂ ಕೇಳ್ತಾನೇ ಇದೆ. ಅಲೆಮಾರಿಗಳು, ಜೀವಂತವಾದ ಎತ್ತಿನ ಮೇಲೆ ಎಗರ್‍ತಾ ಇದ್ದರು. ಒಂಚೂರು ಮಾಂಸ, ಹಲ್ಲಲ್ಲಿ ಕಿತ್ತುಕೊಳ್ಳೋದು, ಜಗಿಯೋದು ಮತ್ತೆ ಎಗರೋದು. ನಾನು, ಎಷ್ಟೋ ಹೊತ್ತು ಆ ಕಡೆ ತಲೆಹಾಕಲೇ ಇಲ್ಲ. ಆಮೇಲೆ ನೋಡಿದ್ರೆ, ತಿಂದುಮಿಕ್ಕಿದ್ದ ಎತ್ತಿನ ಸುತ್ತ ಎಲ್ಲರೂ ಬಿದ್ಕೊಂಡಿದ್ರು. ಹೆಂಡದ ಖಾಲೀ ಪೀಪಾಯಿ ಸುತ್ತಲೂ ಮಲಗಿರೋ ಕುಡುಕರ ಹಾಗೆ.
ಆಗಲೇ ಇರಬೇಕು. ನಾನು, ಚಕ್ರವರ್‍ತಿಗಳನ್ನು ನೋಡಿದೆ. ನಿಜವಾಗಲೂ. ಅರಮನೆಯ ಕಿಡಕಿ ಹಿಂದೆ ನಿಂತಿದ್ರು. ಹೀಗೆ ಹೊರಗಡೆ ಬರೋದು, ಬಹಳ ಬಹಳ ಅಪರೂಪ. ಸದಾ ಅರಮನೆಯೊಳಗಿನ ಉದ್ಯಾನವನದಲ್ಲೇ ಕಾಲ ಕಳೀತಾರೆ. ಇವತ್ತು ಯಾಕೋ ಬಂದಿದ್ರು ಅಥವಾ ನನಗೆ ಹಾಗೆ ಅನ್ನಿಸಿರಬೇಕು. ಕಿಡಕಿಯಲ್ಲಿ ನಿಂತುಕೊಂಡು, ಮುಂದೆ ಬಾಗಿ, ತನ್ನ ಅರಮನೆಯ ಸುತ್ತಲಿನ ಈ ವಿದ್ಯಮಾನಗಳನ್ನು ಗಮನಿಸ್ತಾ ಇದ್ರು.
"ಇನ್ನು ಮುಂದೆ ಏನಾಗತ್ತೆ?" ಅಂತ, ನಾವೆಲ್ಲರೂ ಕೇಳಿಕೊಳ್ತೀವಿ. "ಈ ಹೊರೆಯನ್ನು, ಈ ಹಿಂಸೆಯನ್ನು ಎಷ್ಟು ದಿನ ತಡ್ಕೊಳ್ಳೊಕೆ ಸಾಧ್ಯ? ಈ ಅಲೆಮಾರಿಗಳು ಇಲ್ಲಿಗೆ ಬರೋದಕ್ಕೆ, ಚಕ್ರವರ್‍ತಿಗಳ ಅರಮನೆಯೇ ಕಾರಣ. ಆದರೆ, ಅವರನ್ನು ಹಿಂದಕ್ಕೆ ಅಟ್ಟೋದು ಹೇಗೆ ಅಂತ ಅವರಿಗೆ ಗೊತ್ತಿಲ್ಲ. ಅರಮನೆಯ ಬಾಗಿಲು ಯಾವಾಗಲೂ ಮುಚ್ಚಿರತ್ತೆ. ರಾಜವೈಭವದಿಂದ, ಹೊರಗೆ ಒಳಗೆ ತಿರುಗಾಡ್ತಿದ್ದ ಕಾವಲುಗಾರರು, ಈಗ ಮುಚ್ಚಿದ ಮುಚ್ಚಿದ ಕಿಡಕಿಗಳ ಹಿಂದೆ ಮರೆಯಾಗಿದಾರೆ. ದೇಶವನ್ನು ಕಾಪಾಡಿಕೊಳ್ಳುವ ಹೊಣೆ, ನಮ್ಮಂತಹ ಚಿಕ್ಕಪುಟ್ಟ ವ್ಯಾಪಾರಿಗಳ ಮೇಲೆ, ಕೆಲಸಗಾರರ ಮೇಲೆ ಬಿದ್ದಿದೆ. ನಮಗೆ ಅಂಥ ಕೆಲಸ ಮಾಡೋ ಶಕ್ತಿ ಇಲ್ಲ. ನಮಗೆ ಅದು ಸಾಧ್ಯ ಅಂತ ನಾವು ಹೇಳಿಯೂ ಇಲ್ಲ. ಇಲ್ಲಿ ಏನೋ ತಪ್ಪು ತಿಳಿವಳಿಕೆ ಇದೆ. ಇದರಿಂದ ನಾವೆಲ್ರೂ ನಾಶವಾಗ್ತೀವಿ."    
ಫ್ರಾಂಜ್ ಕಾಫ್ಕಾ, ೧೯೧೭






3 comments:

  1. never really got that kafka guy. to me, his writings appear like the scribbling of a schizophrenic. they say he was trying to subtly describe the then political scenario through his stories. but well, who will get it if the writing happens to be this complex (or meaningless to be specific)??? he comes off like another over-hyped writer - just like hemingway...

    well, the first thing that comes to my mind whenever i hear the word 'kafka' is the image of this girl sitting in front of me in the cafeteria, and reading a book titled "franz kafka" - at 8am in the morning, while eating her breakfast (!?) i'm still unable to figure out whether she was genuinely into kafka, or the book was really that interesting, or it was just a plain showoff?? (i mean, kafka at 8??? oh come on....)

    asking just out of curiosity -- is there any particular way to read kafka?? i'd be grateful if you could kindly let me know...

    regs,
    -R

    ReplyDelete
  2. ನಮಸ್ಕಾರ ಗುರುಗಳೇ. ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ತುಂಬಾ ತುಂಬಾ ಸಂತೋಷವಾಯಿತು. ನಿಮಗೆ ಅಭಿನಂದನೆಗಳು.
    ನಿಮ್ಮ ಹಳೆ ವಿದ್ಯಾರ್ಥಿನಿ :)

    ReplyDelete
  3. ಸರ್, ತಡವಾಗಿಯಾದರೂ ದೊರೆತ ರಾಜ್ಯೋತ್ಸವ ಪ್ರಶಸ್ತಿಗಾಗಿ ಅಭಿನಂದನೆಗಳು!
    -ಬಸವರಾಜು ಡಿ. ಎಸ್.

    ReplyDelete