Thursday, September 12, 2013

SPANISH DANCER by Rainer Mariah Rilke, Kannada Version H.S.R.

ಸ್ಪಾನಿಷ್ ನರ್ತಕಿ
ಗೀರಿಹಚ್ಚಿದ ಬೆಂಕಿಕಡ್ಡಿ, ಹರಡುವಂತೆ ಹತ್ತುದಿಕ್ಕಿಗೆ ಬಿಳಿಬೆಳಕಿನ
ನಾಲಿಗೆ, ಜ್ವಾಲೆಯಾಗಿ ಸಿಡಿಯುವುದಕ್ಕಿಂತ ಮೊದಲು:
ಸುತ್ತ ಪ್ರೇಕ್ಷಕವೃಂದ, ಪ್ರತಿ ಎದೆಯಲೂ ಸ್ಪಂದ, ಉದ್ರೇಕದ ಸಿಂಚನ
ಕಡುಕತ್ತಲ ಕೋಣೆಯಲ್ಲಿ ಮಿಂಚತೊಡಗಿದ ಹಗಲು, ಅವಳ ಕುಣಿತ.

ಥಟ್ಟನೆ, ಧಗ್ಗನೆ ಎಲ್ಲ ಎಲ್ಲ ಬೆಂಕಿ.

ಮೇಲೆ ಚಿಮ್ಮಿತು ನೋಟ, ಕೇಶಪ್ರಪಂಚಕ್ಕೆ ಹಚ್ಚಿದಳು ಬೆಂಕಿ
ಗಿರಗಿರಗಿರ ತಿರುತಿರುಗುತ ಗಾಳಿಬೀಸಿ ಉಡುಪಿಗೆ,
ಬೆಂಕಿಭಾವ ತುಂಬುತಾಳೆ, ಅದೇ ಕುಲುಮೆ ಅವಳು ಒಳಗೆ.
ದಿಗಿಲು ಬಿದ್ದ ಸರ್ಪದಂತೆ ಸುರುಳಿಬಿಚ್ಚಿ ತೋಳು
ಬರಿಬತ್ತಲೆ, ಅಂಗೈ ಹೆಡೆ, ಬೆರಳಬಡಿತ ಟಕಟಕಟಕ ನೋಡುವರೆದೆ ಗಡಿಗೆ

ಮುಂದಿನ ಕ್ಷಣ: ಮೈಯ ಸುತ್ತ ಬೆಂಕಿಕವಚ, ಬಿಗಿಯಾಗಿದೆ ಎನುವಂತೆ,
ಅದನು ಕಳಚಿ ತೆಗೆಯುತಾಳೆ, ಹಮ್ಮಿನಿಂದ ಎಸೆಯುತಾಳೆ
ಅದರ ಕಡೆಗೆ ನೋಡುತಾಳೆ ಮಹರಾಣಿಯ ಹಾಗೆ
ಅದು ಇನ್ನೂ ಉರಿಯುತ್ತಿದೆ, ಅಲ್ಲಿ ಇಲ್ಲಿ ಕೆರಳುತ್ತಿದೆ
ಜೀವಬಿಡಲು ಮನಸೆ ಇಲ್ಲ ಬೆಂಕಿ ಬಟ್ಟೆಗೆ.....
ಎಷ್ಟು ಹೊತ್ತು? ಸಂಪೂರ್ಣ ಧೈರ್ಯದಿಂದ, ಗೆಲುವು ಮಂದಹಾಸದಿಂದ
ಒಮ್ಮೆ ಮೇಲೆ ನೋಡುತಾಳೆ, ಕಾಲಿನಿಂದ ತುಳಿಯುತಾಳೆ
ಇಷ್ಟೆ ಪಾದ, ಎಷ್ಟು ಶಕ್ತಿ? ಬೂದಿಯಾಯ್ತು ಬೆಂಕಿ, ಆರಿತು ಉಕ್ಕಂದ.

SPANISH DANACER 43



3 comments: