Thursday, September 12, 2013

SPANISH DANCER by Rainer Mariah Rilke, Kannada Version H.S.R.

ಸ್ಪಾನಿಷ್ ನರ್ತಕಿ
ಗೀರಿಹಚ್ಚಿದ ಬೆಂಕಿಕಡ್ಡಿ, ಹರಡುವಂತೆ ಹತ್ತುದಿಕ್ಕಿಗೆ ಬಿಳಿಬೆಳಕಿನ
ನಾಲಿಗೆ, ಜ್ವಾಲೆಯಾಗಿ ಸಿಡಿಯುವುದಕ್ಕಿಂತ ಮೊದಲು:
ಸುತ್ತ ಪ್ರೇಕ್ಷಕವೃಂದ, ಪ್ರತಿ ಎದೆಯಲೂ ಸ್ಪಂದ, ಉದ್ರೇಕದ ಸಿಂಚನ
ಕಡುಕತ್ತಲ ಕೋಣೆಯಲ್ಲಿ ಮಿಂಚತೊಡಗಿದ ಹಗಲು, ಅವಳ ಕುಣಿತ.

ಥಟ್ಟನೆ, ಧಗ್ಗನೆ ಎಲ್ಲ ಎಲ್ಲ ಬೆಂಕಿ.

ಮೇಲೆ ಚಿಮ್ಮಿತು ನೋಟ, ಕೇಶಪ್ರಪಂಚಕ್ಕೆ ಹಚ್ಚಿದಳು ಬೆಂಕಿ
ಗಿರಗಿರಗಿರ ತಿರುತಿರುಗುತ ಗಾಳಿಬೀಸಿ ಉಡುಪಿಗೆ,
ಬೆಂಕಿಭಾವ ತುಂಬುತಾಳೆ, ಅದೇ ಕುಲುಮೆ ಅವಳು ಒಳಗೆ.
ದಿಗಿಲು ಬಿದ್ದ ಸರ್ಪದಂತೆ ಸುರುಳಿಬಿಚ್ಚಿ ತೋಳು
ಬರಿಬತ್ತಲೆ, ಅಂಗೈ ಹೆಡೆ, ಬೆರಳಬಡಿತ ಟಕಟಕಟಕ ನೋಡುವರೆದೆ ಗಡಿಗೆ

ಮುಂದಿನ ಕ್ಷಣ: ಮೈಯ ಸುತ್ತ ಬೆಂಕಿಕವಚ, ಬಿಗಿಯಾಗಿದೆ ಎನುವಂತೆ,
ಅದನು ಕಳಚಿ ತೆಗೆಯುತಾಳೆ, ಹಮ್ಮಿನಿಂದ ಎಸೆಯುತಾಳೆ
ಅದರ ಕಡೆಗೆ ನೋಡುತಾಳೆ ಮಹರಾಣಿಯ ಹಾಗೆ
ಅದು ಇನ್ನೂ ಉರಿಯುತ್ತಿದೆ, ಅಲ್ಲಿ ಇಲ್ಲಿ ಕೆರಳುತ್ತಿದೆ
ಜೀವಬಿಡಲು ಮನಸೆ ಇಲ್ಲ ಬೆಂಕಿ ಬಟ್ಟೆಗೆ.....
ಎಷ್ಟು ಹೊತ್ತು? ಸಂಪೂರ್ಣ ಧೈರ್ಯದಿಂದ, ಗೆಲುವು ಮಂದಹಾಸದಿಂದ
ಒಮ್ಮೆ ಮೇಲೆ ನೋಡುತಾಳೆ, ಕಾಲಿನಿಂದ ತುಳಿಯುತಾಳೆ
ಇಷ್ಟೆ ಪಾದ, ಎಷ್ಟು ಶಕ್ತಿ? ಬೂದಿಯಾಯ್ತು ಬೆಂಕಿ, ಆರಿತು ಉಕ್ಕಂದ.

SPANISH DANACER 43



Wednesday, July 31, 2013

ಕನ್ನಡ ಕಾದಂಬರಿಇಂದಿನ ಸವಾಲುಗಳು
ಕಥೆ ಮತ್ತು ಕಾದಂಬರಿಗಳ ನಡುವಿನ ವ್ಯತ್ಯಾಸವನ್ನು, ಬರೆಯುವವರ ಅಥವಾ ಓದುವವರ ನೆಲೆಯಿಂದ ಹುಡುಕುವ ಕೆಲಸವು ಕನ್ನಡದಲ್ಲಿ ಅಷ್ಟಾಗಿ ಆಗಿಲ್ಲ. ಕಾರಂತ, ಕುವೆಂಪು ಅಥವಾ ಭೈರಪ್ಪನವರಂತಹ ಲೇಖಕರು ಕಾದಂಬರಿಯೆಂಬ ಬಗೆಯನ್ನು ಮಾತ್ರ ಆರಿಸಿಕೊಂಡರು. ಸಣ್ಣ ಕತೆ ಅವರಿಗೆ ಒಗ್ಗಲಿಲ್ಲ. ಯಾಕೆ? ಮಾಸ್ತಿಯವರು ಕೆಲವು ಕಾದಂಬರಿಗಳನ್ನು ಬರೆದರಾದರೂ ಅವರಿಗೆ ಒಲಿದಿದ್ದು ಸಣ್ಣ ಕತೆ ಮಾತ್ರವೆ. ನಂತರದ ಬರಹಗಾರರಲ್ಲಿ ಕೆಲವರಾದರೂ ಎರಡೂ ಪ್ರಕಾರಗಳನ್ನು ಆರಿಸಿಕೊಂಡು ಎರಡರಲ್ಲಿಯೂ ಗೆದ್ದರು. ದೇವನೂರ ಮಹಾದೇವ ಅವರು ಅವೆರಡರ ನಡುವಿನ ಗಡಿಗೆರೆಗಳನ್ನು ಉಳಿಸುವ ಅಳಿಸುವ ಕೆಲಸವನ್ನು ಒಟ್ಟೊಟ್ಟಿಗೆ ಮಾಡಿದರು. ಆದರೆ, ಈಗ ಬರೆಯುತ್ತಿರುವ ಐವತ್ತರಿಂದ ಇಪ್ಪತ್ತರವರೆಗಿನ ತರುಣಿ-ತರುಣರು, ಕಾದಂಬರಿಯನ್ನು ಬರೆಯಬಯಸಿದ್ದು ಕಡಿಮೆ. ಬರೆದಾಗಲೂ ಗೆದ್ದಿದ್ದು ಕಡಿಮೆ. ಹೀಗೆ ಆಗುವುದರ ಕಾರಣಗಳು ಎಲ್ಲಿವೆ? ಸಮಾಜದಲ್ಲೋ, ಸೃಜನಶೀಲತೆಯಲ್ಲೋ, ಮಾಧ್ಯಮಗಳು ಹೇರುತ್ತಿರುವ ಒತ್ತಡಗಳಲ್ಲೋ ತಂತ್ರಜ್ಞಾನದ ಫಲವಾದ ಕಡಿಮೆ ಗಮನ(Low attention span) ಸನ್ನಿವೇಶದಲ್ಲೋ ಹೇಳುವುದು ಕಷ್ಟ. ಪ್ರಾಯಶಃ ಇವೆಲ್ಲದರ ಜೊತೆಗೆ ಇನ್ನೂ ಕೆಲವು ಕಾರಣಗಳಿರಬಹುದು. ಅವುಗಳನ್ನು ಕುರಿತು ಯೋಚಿಸುವುದು ಈ ಬರವಣಿಗೆಯ ಉದ್ದೇಶ. ಇದನ್ನು ಓದುತ್ತಿರುವ ನಿಮಗೂ ನಿಮ್ಮದೇ ಆದ ಉತ್ತರಗಳಿರುತ್ತವೆ. ಯಾವ ಭಾಷೆಯದ್ದೇ ಆಗಲಿ, ಯಾವ ಕಾಲದ್ದೇ ಆಗಲಿ, ಐನೂರು ಪುಟಗಳ ಪುಸ್ತಕವನ್ನು ಓದುವ ಆಸಕ್ತಿ-ವ್ಯವಧಾನಗಳು ನಮ್ಮಲ್ಲಿ ಇಲ್ಲವಾಗುತ್ತಿವೆಯೇ? ಟೆಸ್ಟ್ ಕ್ರಿಕೆಟ್ ಬದಲು  ‘ಟ್ವೆಂಟಿ-ಟ್ವೆಂಟಿಬಂದಿರುವ ಹಾಗೆ, ಕಾದಂಬರಿಗಳೂ ಬೇಡವೆನಿಸಿದೆಯೇ? ನನಗೆ ತೋರಿದ ಕೆಲವು ಸಂಗತಿಗಳು ಈ ರೀತಿ ಇವೆ:

1.     ವಿಭಜಿತವಾದ ಸಮಾಜ ಮತ್ತು ಸ್ವಕೇಂದ್ರಿತವಾದ ದೃಷ್ಟಿಕೋನ: ಮೊದಲಿನಿಂದಲೂ ನಮ್ಮದು ವರ್ಣ, ವರ್ಗ, ಲಿಂಗ ಮತ್ತು ಜಾತಿಗಳಲ್ಲಿ ಹರಿದುಹಂಚಿರುವ ಸಮಾಜ. ಅಲ್ಲದೆ ಅವುಗಳ ನಡುವೆ ಮೇಲುಕೀಳುಗಳ ಸಂಬಂಧವಿತ್ತು, ಇದೆ. ಇದರ ಫಲವಾಗಿ ಪರಸ್ಪರ ಅನುಮಾನ-ತಿರಸ್ಕಾರ-ಭಯ-ಈರ್ಷೆ.ಮುಂತಾದ ಭಾವಸಂಬಂಧಗಳು ಸಹಜವಾಗಿಯೇ ಬೆಳೆದಿರುತ್ತವೆ. ಮೇಲುನೋಟದ ಸಾಮೀಪ್ಯದ ಸಂಗಡವು ಅಂತರ ಇರುತ್ತದೆ. ಕಳೆದ ಕೆಲವು ದಶಕಗಳಲ್ಲಿ ಮೂಡಿದ ಹೊಸ ಎಚ್ಚರಗಳು ಸಮುದಾಯಗಳಲ್ಲಿ ಮತ್ತು ಅವುಗಳಲ್ಲಿ ಮೂಡಿಬಂದ ಕಲಾವಿದರಲ್ಲಿ ಆತ್ಮನಿವೇದನೆ ಮತ್ತು ಆತ್ಮಸಮರ್ಥನೆಗಳ ಗುಣವನ್ನು ಮೂಡಿಸಿವೆ. ‘ಮೇಲುಎನ್ನಲಾದ ಜಾತಿಗಳು ಈ ಲಕ್ಷಣದಿಂದ ಬಿಡುಗಡೆ ಪಡೆದಿಲ್ಲ. ಮಹಿಳೆಯರ ಅತ್ಯುತ್ತಮವಾದ ಬರವಣಿಗೆಯೂ ಸೇರಿದಂತೆ, ಇದು ಇಂದಿನ ಅಪೇಕ್ಷೆ ಮತ್ತು ನಿರೀಕ್ಷೆ. ಆದರೆ, ಕಾದಂಬರಿಯು ನಿಜವಾದ ಅರ್ಥದಲ್ಲಿ ಹಲವು ಸಮುದಾಯಗಳನ್ನು ಒಳಗೊಳ್ಳುವ, ಎಲ್ಲವನ್ನೂ ಪ್ರೀತಿಯಿಂದ, ತಿಳಿವಳಿಕೆಯಿಂದ ನೋಡುವ ಪ್ರಕಾರ. ಅಂತೆಯೇ ಅದರಲ್ಲಿ ತನ್ನದೇ ಸಮುದಾಯದ ಆತ್ಮವಿಮರ್ಶೆಯ ನೆಲೆಗಳೂ ಇರುತ್ತವೆ. ಈ ಮಾತಿಗೆ ಕುವೆಂಪು ಅವರ ಕಾದಂಬರಿಗಳಿಗಿಂತ ಬೇರೆ ನಿದರ್ಶನ ಬೇಕಿಲ್ಲ. ಆದರೆ ಇಂದಿನ ಬರವಣಿಗೆಯಲ್ಲಿನಾವುಮತ್ತುಅನ್ಯರು’  ಎಂಬ ವಿಂಗಡಣೆ ಇರುತ್ತದೆ. ಇಂತಹ ಆತ್ಮಮರುಕ ಅಥವಾ ಅಹಂಕಾರಗಳು ಕಾದಂಬರಿಯ ಬರವಣಿಗೆಗೆ ಸೂಕ್ತವಲ್ಲ. ನಮ್ಮ ಸಮುದಾಯಗಳ ಚೌಕಟ್ಟನ್ನು ಮೀರಿ ಒಟ್ಟು ಸಮಾಜದ ತಲ್ಲಣಗಳನ್ನು ಒಳಗೊಳ್ಳುವ ಬರವಣಿಗೆಯು ಅಂದಿಗೂ ಇಂದಿಗೂ ಅಪರೂಪವೇ. ಕಾರಂತರೂ ಸೇರಿದಂತೆ ಹಲವು ಲೇಖಕರ ಅನೇಕ ಕಾದಂಬರಿಗಳು ಇಂದು ರೂಪಿತವಾಗುತ್ತಿರುವ ಓದುಗರಿಗೆ ಇಷ್ಟವಾಗದೆ ಹೋದರೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ. ‘ಚೋಮನ ದುಡಿ’, ‘ಕುಡಿಯರ ಕೂಸು’, ‘ಪ್ರಕೃತಿಯಂತಹ ಕಾದಂಬರಿಗಳೇ (ಶ್ರೀರಂಗ) ಹೀಗೆ ಹಿನ್ನೆಲೆಗೆ ಸರಿದಿರುವಾಗ ಉಳಿದವರ ಮಾತೇನು? ಇಂದು ಬರೆಯಲಾಗುತ್ತಿರುವ ಕಾದಂಬರಿಗಳ ಮಾತೂ ಹೀಗೆಯೇ. ‘ಬರೆದವರು ಯಾರು?’ ಎನ್ನುವುದು ಓದಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸುತ್ತಿದೆ. ಆದ್ದರಿಂದಲೇ ಒಡೆದ ಸಮಾಜದ ಒಡಲಿನಿಂದ ಒಡೆಯದ ಪ್ರಜ್ಞೆಯನ್ನು ಹೊಂದಿರುವ ಕಾದಂಬರಿಗಳನ್ನು ನಿರೀಕ್ಷಿಸುವುದು ಕಡುಕಷ್ಟ.              ಇನ್ನೊಂದು ಬಗೆಯ ಕಾದಂಬರಿಗಳು, ವ್ಯಕ್ತಿಯ ಸಂಕಟಗಳನ್ನು ನಡುವೆ ಇಟ್ಟುಕೊಂಡು ಅವುಗಳ ಸುತ್ತ ಆಲೋಚನೆಯ, ಕಲೆಯ ಗೂಡನ್ನು ಕಟ್ಟುತ್ತವೆ. ಇವುಗಳು ಏನಿದ್ದರೂ ಸಮಾಜವನ್ನು ವ್ಯಕ್ತಿಯ ಅಂತರಂಗದಲ್ಲಿ ಮೂಡಿದ ಪ್ರತಿಬಂಬವಾಗಿ ಮಾತ್ರ ನೋಡಬಲ್ಲವು. ಆದರೆ, ಇವುಗಳಲ್ಲಿ ಕೆಲವಾದರೂ ಎಲ್ಲ ಕಾಲಕ್ಕೂ ಸಲ್ಲುವ ಗುಣವನ್ನು ಪಡೆದಿರುತ್ತವೆ. ಇಂತಹ ಬರವಣಿಗೆಯನ್ನು ನವ್ಯದ ಪಳೆಯುಳಿಕೆಗಳೆಂದು ಹೆಸರಿಸಿ ಓದದಿರುವುದು ಸುಲಭ ಆದರೆ ಸರಿಯಲ್ಲ. ನಮ್ಮ ಕಾಲದ ಓದಿನ ಒಂದು ನೆಲೆಯಲ್ಲಿ ಈ ಬಿಕ್ಕಟ್ಟು ಇದೆ.                       ಕೊನೆಗೂ ಎಷ್ಟೇ ಮುಖ್ಯವಾದ ಕಾದಂಬರಿ ಬರಲಿ, ಅವುಗಳನ್ನು ಬರೆದವರನ್ನು ಇಷ್ಟಪಡುವ ಕೆಲವರು ಮಾತ್ರ ಹಾಡಿಹೊಗಳುತ್ತಾರೆ ಮತ್ತು ಉಳಿದವರು ನಿರ್ಲಕ್ಷಿಸುತ್ತಾರೆ ಎನ್ನುವುದು ಆರೋಗ್ಯಕರವೇ? ಉದಾಹರಣೆಗೆಕಾಲಜಿಂಕೆ’, ‘ಲೋಟಸ್ ಪಾಂಡ್’, ‘ಪಾಚಿ ಕಟ್ಟಿದ ಪಾಗಾರಮುಂತಾದ ಕಾದಂಬರಿಗಳುಮೇನ್ ಸ್ಟ್ರೀಮ್ನ ಆಚೆಗೇ ಉಳಿದುದೇಕೆ
2.      ಪ್ರಾದೇಶಿಕತೆಯ ಪ್ರಯೋಜನಗಳು ಮತ್ತು ಅದರಿಂದಲೇ ಹುಟ್ಟಿರುವ ಬಿಕ್ಕಟ್ಟುಗಳು: ಭಾಷೆಯಲ್ಲಿ ಮತ್ತು ವಿವರಗಳಲ್ಲಿ ಪ್ರಾದೇಶಿಕತೆಯನ್ನು ಬಳಸುವುದರ ಇತಿಮಿತಿಗಳು ಈ ಕಾಲದ ಕಾದಂಬರಿಕಾರರು ಎದುರಿಸಿರುವ ಮತ್ತೊಂದು ಮುಖ್ಯ ಸವಾಲು. ‘ಕುಸುಮಬಾಲೆಯಿಂದ ಮೊದಲಾಗಿಬದುಕು’, ‘ಅರಮನೆಗಳವರೆಗೆ ಹತ್ತು ಹಲವು ಒಳ್ಳೆಯ ಮತ್ತು ಕೆಟ್ಟ ಕಾದಂಬರಿಗಳು ಈ ಅನುಭವವನ್ನು ಪಡೆದಿವೆ. ಈ ಸಂಗತಿಯು ಈ ಕಾಲದ ಬರಹಗಾರರಲ್ಲಿ ಆತಂಕ ಮತ್ತು ತಲ್ಲಣಗಳನ್ನು ಹುಟ್ಟಿಸಿದೆ. ಇದು ಕೇವಲ ಓದುಗರಿಗೆ ಸಂವಹನವಾಗುವ ಅಥವಾ ಆಗದಿರುವ ಪ್ರಶ್ನೆಯಲ್ಲ. ಬದಲಾಗಿ ಪ್ರಾದೇಶಿಕತೆಯ ಚೌಕಟ್ಟಿನಲ್ಲಿ ಎಷ್ಟನ್ನು ಹೇಳಬಹುದು, ಹೇಗೆ ಹೇಳಬಹುದು ಎನ್ನುವ ಪ್ರಶ್ನೆ. ಇದು ಲೇಖಕನ ಪ್ರತಿಭೆಯನ್ನು ಮಾತ್ರವಲ್ಲ, ಅವನ ಉದ್ದೇಶಗಳನ್ನೂ ಅವಲಂಬಿಸಿರುತ್ತದೆ. ತನ್ನಷ್ಟಕ್ಕೆ ತಾನು ದೋಷವೂ ಅಲ್ಲದ, ಗುಣವೂ ಅಲ್ಲದ ಪ್ರಾದೇಶಿಕತೆಯು ಲೇಖಕನ ಹಿನ್ನೆಲೆಯನ್ನು ಅವಲಂಬಿಸಿದ ವಿಶಿಷ್ಟ ಲಕ್ಷಣವಷ್ಟೆ. ಕಾದಂಬರಿಯ ಮಹತ್ವ ಮತ್ತು ಕಲಾತ್ಮಕತೆಗಳು ಅವುಗಳ ಆಚೆಗಿನ ಸಂಗತಿಗಳಿಂದ ತೀರ್ಮಾನವಾಗುತ್ತವೆ. ನಮ್ಮ ಹಲವು ಲೇಖಕರು ಇದನ್ನು ಅರಿತಿಲ್ಲ. ಅಮರೇಶ ನುಗಡೋಣಿ ಮತ್ತು ಮೊಗಳ್ಳಿ ಗಣೇಶ ಅವರ ಕತೆಗಳ ಗೆಲುವಿನೊಂದಿಗೆ ಅದೇ ಪ್ರದೇಶದಿಂದ ಬಂದ ಬೇರೆ ಲೇಖಕರಅರೆಅಥವಾಅಲ್ಪಾಯುಷಿಯಶಸ್ಸನ್ನು ನೋಡಿದರೆ ನನ್ನ ಮಾತು ಸ್ಪಷ್ಟವಾಗುತ್ತದೆ. ಕಾದಂಬರಿಯಂತೂ ಇನ್ನಷ್ಟು ಬಿಕ್ಕಟ್ಟುಗಳನ್ನು ಒಡ್ಡಿದೆ.      
3.    ನಿರೂಪಣೆಯ ಬಗೆಗಳು: ಕನ್ನಡ ಕಾದಂಬರಿಯು ನವೋದಯ, ಪ್ರಗತಿಶೀಲ, ನವ್ಯ ಮುಂತಾದ ಚಳುವಳಿಗಳ ಚೌಕಟ್ಟಿಗೆ ಸಿಗುವುದಿಲ್ಲ. ವಾಸ್ತವವಾದೀ ನಿರೂಪಣೆ ಮತ್ತು ಸಾಂಕೇತಿಕತೆಗಳು ಅದರ ಮುಖ್ಯ ಬಗೆಗಳು. ನವ್ಯದ ನಂತರ ಬರೆಯತೊಡಗಿದ ಲೇಖಕರಿಗೆ ವಾಸ್ತವಮಾರ್ಗದಲ್ಲಿಯೇ ಹೇಳುವುದು ಹೇರಳವಾಗಿತ್ತು. ಆದರೆ, ಅವರು ಬರೆಯತೊಡಗಿದ ವಸ್ತು ಅವರಿಗೆ ಅತಿನಿಕಟವಾಗಿದ್ದು, ಅಲ್ಲಿನ ದುಃಖ ಮತ್ತು ಕೋಪಗಳು ಕಾದಂಬರಿಕಾರರದೂ ಆಗಿತ್ತು. ಕಥೆಗಳನ್ನು ಬರೆಯುವಾಗ, ಹೇಗೋ ನಿರ್ವಹಿಸಬಹುದಾದ ಈ ಬಿಕ್ಕಟ್ಟು ಕಾದಂಬರಿಗಳ ಸಂದರ್ಭದಲ್ಲಿ ಇನ್ನಷ್ಟು ಸಂಕೀರ್ಣವಾಗುತ್ತದೆ. ಸಾಮಾಜಿಕ ವಾಸ್ತವದ ಪ್ರಾಮಾಣಿಕವಾದ, ಸುದೀರ್ಘ ನಿರೂಪಣೆಯು ತನ್ನಷ್ಟಕ್ಕೆ ತಾನೇ ಕಾದಂಬರಿಯಾಗುವುದೇ? ನಮ್ಮ ಜೀವನದ ಹಾಡುಪಾಡುಗಳನ್ನು ನಮ್ಮವರೊಂದಿಗೆ-ಅನ್ಯರೊಂದಿಗೆ ಸರಳವಾಗಿ, ನೇರವಾಗಿ ಹಂಚಿಕೊಳ್ಳುವುದಷ್ಟೇ ಬರವಣಿಗೆಯ ಗುರಿಯೆಂಬ ನಿಲುವು ಏನು ಮಾಡುತ್ತದೆ? ನಮ್ಮ ಮನಸ್ಸುಗಳು ಮತ್ತು ಓದುವಿಕೆ ಕೂಡ ನೇರವಾಗಿ ಕತೆ ಹೇಳದ ಸುದೀರ್ಘ ಕಥಾನಕಗಳನ್ನು ಒಳಗೊಳ್ಳುವ ಶಕ್ತಿಯನ್ನು ಕಳೆದುಕೊಂಡಿವೆಯೇ?
4.   ಸಮುದಾಯಗಳ ಆತ್ಮಕಥನ:ಈಚೆಗೆ ಮುನ್ನೆಲೆಗೆ ಬಂದಿರುವ ಕೆಲವು ಕಾದಂಬರಿಗಳು ನಿರ್ದಿಷ್ಟ ಸಮುದಾಯಗಳ ಇತಿಹಾಸವನ್ನು ಕಟ್ಟಿಕೊಡುವ ಉಮೇದನ್ನು ತೋರಿಸಿವೆ. (‘ಸ್ವಪ್ನಸಾರಸ್ವತ’ ‘ಮಿತ್ತಬೈಲು ಯಮುನಕ್ಕ’, ‘ಉಲ್ಲಂಘನೆ’, ‘ತಲಗಳಿ’) ಇವು ಸಾಕಷ್ಟು ಸಂಶೋಧನೆಯ ಫಲವಾಗಿ ಮೂಡಿಬಂದಿರುತ್ತವೆ. ಮಾನವಿಕ-ಸಾಮಾಜಿಕ ಅಧ್ಯಯನಗಳಿಗಿಂತ ಭಿನ್ನವಾದ ಕಥಾನಕಗಳನ್ನು ರೂಪಿಸಿರುತ್ತವೆ. ಆದರೆ, ಅವುಸಮುದಾಯಗಳ ಆತ್ಮಕಥನದ ಆಚೆಗೆ ಹೊಂದಿರುವ ಉದ್ದೇಶಗಳು ಮತ್ತು ಪಡೆದಿರುವ ಸಿದ್ಧಿಗಳು ಯಾವ ಬಗೆಯವು ಎನ್ನುವುದು ಕೂಡ ಮುಖ್ಯ. ಇದು ಬರವಣಿಗೆಯ ಅಧಿಕೃತತೆಯ ಪ್ರಶ್ನೆಯಲ್ಲ. ಬದಲಾಗಿ ಬರೆಯುವವನ ಒಟ್ಟು ತಾತ್ವಿಕತೆ ಮತ್ತು ಜೀವನದರ್ಶನದ ಪ್ರಶ್ನೆ. ಕಿರಿಯ ಬರಹಗಾರರಿಗಂತೂ ಇದು ಹುಚ್ಚುಹುದುಲಾಗುತ್ತದೆ. ಹೀಗಾದಾಗ, ಕಥೆ, ಕಥನ ಮತ್ತು ಕಾದಂಬರಿಗಳ ನಡುವಿನ ಅಂತರವೇ ಮಸುಳಿಸುತ್ತದೆ.   
5.    ಕಾದಂಬರಿ ಮತ್ತು ಜೀವನದರ್ಶನ: ಯಾವುದೇ ಶ್ರೇಷ್ಠ ಕಾದಂಬರಿಯ ಒಳಗೆಕಾದಂಬರಿಯೆಂದರೇನು ಎನ್ನುವುದರ ಹುಡುಕಾಟವೂ ಇರುತ್ತದೆ. ಇದು ಅಕಡೆಮಿಕ್ ಪಾಂಡಿತ್ಯದಿಂದ ಬರುವುದಲ್ಲ. ಅಂತೆಯೇ ಪ್ರಪಂಚದ ಹಲವು ಕಾದಂಬರಿಗಳ ಓದು ಕೊಂಚ ನೆರವು ನೀಡಬಹುದಾದರೂ ಅಷ್ಟೇ ಸಾಲದು. ಎಲ್ಲಕ್ಕಿಂತ ಮುಖ್ಯವಾಗಿ ಇದು ಅನುಭವ, ಬುದ್ಧಿ, ಭಾವನೆ ಮತ್ತು ಭಾಷಿಕ ಪರಿಕರಗಳ ಸೂಕ್ತವಾದ ಸಂಯೋಜನೆಯ ಪ್ರಶ್ನೆ. ನಮ್ಮ ಯುವಲೇಖಕರಿಗೆ ಇಂತಹ ಶಕ್ತಿಯು ಇಲ್ಲವೆಂದಲ್ಲ. ನಿಜವಾಗಿ ಬೇಕಿರುವುದು ಸಾಮಾಜಿಕವಾದ ಒತ್ತಡಗಳನ್ನು ಮೀರುತ್ತಲೇ ಅವುಗಳಿಗೆ ಧ್ವನಿಕೊಡುವ ಶಕ್ತಿ. ತಾತ್ವಿಕತೆಯು ಒಟ್ಟು ಜೀವನದ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮತ್ತು ಉತ್ತರಗಳಿಗಾಗಿ ಕೃತಿಯ ಬೆಳವಣಿಗೆಯಲ್ಲಿಯೇ ಹುಡುಕುವ ಕೆಲಸ. ಹೊಸ ತಿಳಿವಳಿಕೆಯು ಬರವಣಿಗೆಯ ಹೊಸ ಬಗೆಗಳನ್ನು ಬಯಸುತ್ತದೆ. ಹಾಗೆ ಮೂಡುವ ಹೊಸ ಬಗೆಗಳು ಓದುಗರಿಗೆ ಹಿಡಿಸದೆ ಇರಬಹುದು. ‘ಕಾನೂರು ಹೆಗ್ಗಡಿತಿಮತ್ತುಮಲೆಗಳಲ್ಲಿ ಮದುಮಗಳುಕಾದಂಬರಿಗಳ ನಡುವೆ ಇರುವ ವ್ಯತ್ಯಾಸಗಳ ಅಧ್ಯಯನವು ಕುವೆಂಪು ಅವರ ಲೋಕದರ್ಶನವು ಬೆಳೆದ ಬಗೆಗೆ ಕನ್ನಡಿಯಾಗಿದೆ. ಅವೆರಡರ ನಡುವೆಶ್ರೀ ರಾಮಾಯಣ ದರ್ಶನಂಇರುವುದು ಆಕಸ್ಮಿಕವಲ್ಲ. ನಮ್ಮ ಲೇಖಕರಿಗೆ ಅಂತಹ ವಾತಾವರಣವಾಗಲೀ ಓದಾಗಲೀ ಸಾಧ್ಯವಾಗುತ್ತಿಲ್ಲವೇ?
6.    ಕಟ್ಟುವಿಕೆ ಮತ್ತು ಕಲ್ಪಕತೆ: ಕಾದಂಬರಿಯು ಹೇಳುವಿಕೆಯ ಹಾಗೆಯೇ ಕಟ್ಟುವಿಕೆಯನ್ನೂ ಬಯಸುತ್ತದೆ. ನೇರವಾದ, ಉತ್ತಮಪುರುಷ ನಿರೂಪಣೆಯಿರುವ, ಕಾಲಾನುಕ್ರಮವಾದ ಕಥನಕ್ರಮವು ಇಂತಹ ಕಟ್ಟುವಿಕೆಗೆ ಶತ್ರು. ಕಥೆಯಲ್ಲಿ ಸಹಜವಾಗಿಯೇ ಬರುವ ವಿವರಗಳ ಜೊತೆಗೆ, ಅಗತ್ಯವಾದ ಸೂಕ್ಷ್ಮತೆಯನ್ನು ಕೊಡುವಂತಹ ವಿವರಗಳನ್ನು ಕಲ್ಪಿಸಿಕೊಂಡು, ಹುಡುಕಿಕೊಂಡು ಅವು ಕಥೆಯ ಓಟಕ್ಕೆ ಭಂಗ ತರದಂತೆ ಜೋಡಿಸುವುದು ಕಲೆ. ಅಂತಹ ಕಲ್ಪಕತೆಯ(Imagination)  ಕಾದಂಬರಿಗೆ ಬೇಕೇಬೇಕು. ಅಲ್ಲಿ ಅ-ವಾಸ್ತವವೂ ವಾಸ್ತವವನ್ನು ಕಾಣಿಸುವ ಬೆಳಕಿಂಡಿ. ಕಳೆದ ಎರಡು ಮೂರು ದಶಕಗಳು ಜೀವನದಲ್ಲಿ ತಂದಿರುವ ಬದಲಾವಣೆಯನ್ನು ಅದರ ಎಲ್ಲ ಆಯಾಮಗಳನ್ನು ನಿರ್ಮಮವಾಗಿ ಗ್ರಹಿಸಿ, ಅರ್ಥೈಸಿಕೊಂಡು ರಚಿತವಾಗುವ ಕಾದಂಬರಿಯು ಇನ್ನೂ ಬರಬೇಕಾಗಿದೆ. ಅದು ನಿಜವಾಗಿಯೂ ಟಾಲ್ ಸ್ಟಾಯ್ ಮಾಡಿದ ಕೆಲಸ. ಅಂತಹ ಸಮಗ್ರ ಅನುಭವ ಇರುವವರು ಬರವಣಿಗೆಯಲ್ಲಿ ತೊಡಗುವ ಅವಕಾಶ ನಮ್ಮ ಅಕಡೆಮಿಕ್ ಸನ್ನಿವೇಶವು ರೂಪಿಸಿಲ್ಲ. ಹಾಗಾಗಿ ನಮ್ಮ ಲೇಖಕರದು ಇಲ್ಲವೇ ಸೀಮಿತ ಅನುಭವ ಅಥವಾ ಬಡ ಕಲ್ಪನೆಯ ಫಲವಾದಹುಸಿಅನುಭವ.ಅದರ ಜೊತೆಗೆ ಕಳೆದ ಪೀಳಿಗೆಗಳ ಲೇಖಕರು ಈ ಕಾಲದ ಬಗ್ಗೆಯೂ ಬರೆಯಬೇಕಾಗಿರುದು ನಮ್ಮ ದುರಂತ. ‘ಶಿಕಾರಿ, ‘ಪುರುಷೋತ್ತಮ’, ‘ಮಾಯಾಲೋಕ’, ‘ಹಳ್ಳ ಬಂತು ಹಳ್ಳ’, ‘ಪ್ರೀತಿ, ಮೃತ್ಯು, ಭೀತಿ’, ‘ಹಳ್ಳ ಬಂತು ಹಳ್ಳಮುಂತಾದ ಕೃತಿಗಳನ್ನು ಬರೆದವರು ಎಪ್ಪತ್ತರ ವಯಸ್ಸನ್ನು ಮೀರಿದ್ದಾರೆ. ಅನಂತರದ ಪೀಳಿಗೆಯಗಾಂಧಿ ಬಂದ’, ‘ಕಾಲಜಿಂಕೆ’, ‘ಒಂದು ಬದಿ ಕಡಲು’, ‘ಅಜ್ಞಾತನೊಬ್ಬನ ಆತ್ಮಚರಿತ್ರೆಮುಂತಾದವನ್ನು ಬರೆದವರೂ ತರುಣರಲ್ಲ. ಕನ್ನಡದ ಬಹುಪಾಲು ಶ್ರೇಷ್ಠ ಕಾದಂಬರಿಗಳು ಲೇಖಕರಿಗೆ ಮೂವತ್ತೈದು ವರ್ಷಗಳಾಗುವ ಮೊದಲೇ ಬಂದಿವೆ. ನಮ್ಮ ತರುಣ ಪ್ರತಿಭೆಗೆ ಏನಾಗಿದೆ?
7.    ಕಾದಂಬರಿಗಳನ್ನು ಓದುವುದು ಹೇಗೆ ಎಂದು ತರಬೇತಿ ಕೊಡಲು ಸಾಧ್ಯವಿಲ್ಲ. ಆದರೆ ಶಿಕ್ಷಣ, ವಿಮರ್ಶೆ, ಮಾಧ್ಯಮಗಳು ಮುಂತಾದವು ಈ ದಿಕ್ಕಿನಲ್ಲಿ ಕೊಂಚವಾದರೂ ಕೆಲಸ ಮಾಡಬೇಕು. ಸ್ವತಃ ಕಾದಂಬರಿಕಾರರ ಓದು ಕೂಡ ಮೇಲುಮೇಲಿನದೇ ಆಗಿರಬಹುದೇ? ಕನ್ನಡದಾಚೆಗೆ ಬಂದಿರುವ ಬರವಣಿಗೆಯು ನಮಗೆ ಅಪರಿಚಿತವಾಗಿಯೇ ಉಳಿಯುವುದು ಎಷ್ಟು ಸರಿ. ಕುವೆಂಪು ಟಾಲ್ ಸ್ಟಾಯ್ ಮತ್ತು ಹಾರ್ಡಿ ತನ್ನ ಮೇಲೆ ಬೀರಿದ ಬಗ್ಗೆ ಬರೆಯುತ್ತಾರೆ. ನನ್ನ ಗೆಳೆಯ ಓ.ಎಲ್.ಎನ್. ಅವರು ಅದ್ಭುತವಾಗಿ ಕನ್ನಡಕ್ಕೇ ತಂದಿರುವ ‘War and Peace’ ಅನುವಾದಕ್ಕೆ ಉಗುರು ಬೆಚ್ಚಗಿನ ಪ್ರತಿಕ್ರಿಯೆಯೂ ದೊರಕಿಲ್ಲ. ಪ್ರಶಸ್ತಿ ಕೊಟ್ಟರೆ ಸಾಲದು, ಓದಬೇಕು. ಓದುವ ಬಗೆಗಳನ್ನು ಕಂಡುಕೊಳ್ಳಬೇಕು.                                             
ನನ್ನ ಇದುವರೆಗಿನ ಮಾತುಗಳಲ್ಲಿ ನಿರಾಶೆಮತ್ತು ಆತಂಕಗಳು ಎದ್ದು ಕಾಣಿಸಬಹುದು. ಆದರೆ ಅದು ದಿಟವಲ್ಲ. ನಾನು ಕೆ. ಸತ್ಯನಾರಾಯಣ, ಹನೂರು ಕೃಷ್ಣಮೂರ್ತಿ, ಕುಂವೀ, ಎಚ್. ನಾಗವೇಣಿ, ಶ್ರೀನಿವಾಸ ವೈದ್ಯ, ವಿವೇಕ ಶಾನುಭಾಗ್, ಎಚ್.ಎಸ್. ಚಂಪಾವತಿ, ಮೊಗಳ್ಳಿ ಗಣೇಶ್, ಅಬ್ದುಲ್ ರಶೀದ್ ಮುಂತಾದ ಅನೇಕ ಲೇಖಕರ ಕಾದಂಬರಿಗಳನ್ನು ಓದಿ ಸಂತೋಷಪಟ್ಟಿದ್ದೇನೆ. ಅವುಗಳ ಒಳಗೊಳ್ಳುವ ಗುಣಗಳನ್ನು ಇಷ್ಪಟ್ಟಿದ್ದೇನೆ. ನನಗೆ ನಾಳೆಗಳಲ್ಲಿ ಮತ್ತು ಕನ್ನಡದ ಸೃಜನಶೀಲತೆಯಲ್ಲಿ ನಂಬಿಕೆಯಿದೆ. ಇಂದಿನ ಬಿಕ್ಕಟ್ಟುಗಳನ್ನು ಹುಡುಕುವ ಈ ಪ್ರಯತ್ನ ಕೂಡ ಅಂಥ ನಂಬಿಕೆಯ ಫಲವೇ ಹೊರತು ಸಿನಿಕತೆಯಲ್ಲ.
                                                                    ಎಚ್.ಎಸ್. ರಾಘವೇಂದ್ರ ರಾವ್                                                                         16-07-2013