Wednesday, August 8, 2012

ಜೀವನಾನಂದದಾಸ್ ಅವರ ಕವಿತೆಗಳು


ಬಂಗಾಳೀ ಭಾಷೆಯ ಹಿರಿಯ ಕವಿ ಜೀವನಾನಂದದಾಸ್(1899-1954) ಅವರ ಮೂರು ಕವಿತೆಗಳ ಅನುವಾದಗಳನ್ನು ಇಲ್ಲಿ ಕೊಟ್ಟಿದ್ದೇನೆ. ಇವರು ಸರಿಸುಮಾರು ನಮ್ಮ ಬೇಂದ್ರೆ ಮತ್ತು ಕುವೆಂಪು ಅವರ ಸಮಕಾಲೀನರು. ಬಹು ಮುಖ್ಯವಾದ ಕವಿತೆಗಳನ್ನು ಬರೆದವರು. ನಾನು ಈ ಅನುವಾದಗಳನ್ನು ಮಾಡಿ ದಶಕಗಳೇ ಕಳೆದವು. ಮೊದಲಸಲ ಇಲ್ಲಿ ಕೊಡುತ್ತಿದ್ದೇನೆ.

ನೀಲಿಮ ಗಗನ ವಿತಾನ
       
        ಹೊಳೆಬೆಳಕನು ತುಳುತುಳುಕುವ ಉದಯದ ಮುಗಿಲೇ,
        ನಡು ಇರುಳಿನ ಕಡುನೀಲಿಯೆ, ಕೊನೆಯಿಲ್ಲದ ಚೆಲುವೆ
        ಮರಮರಳಿಯು ನೀ ಕಾಣುವೆ ಈ ನಗರದ ಮೇಲೆ
        ಗತಿಯಿಲ್ಲದ ಈ ನಗರದ ಸೆರೆಗೋಡೆಯ ಮೇಲೆ

        ಇಲ್ಲಿ ಹರಿಯುವುದು ಹೊಗೆಹಾವಿನ ನುಲಿನುಲಿಯುವ ನೀಲಿ
        ಅನ್ನವು ಬೇಯುವ, ಒಡಲಬೇಗೆಗಳ ಸುಡುಬೆಂಕಿಯ ಬೇಲಿ
        ಮರುಭೂಮಿಯ ಬಿಸಿಯುಸಿರಲಿ ಮಿಂದಿಹ ಕೆಂಗಲ್ಲು
        ಅದಕಿರುವುದು ಬಿಸಿಲ್ಗುದುರೆಯ ಇಲ್ಲದ ನೀರ್‌ಚೆಲ್ಲು
       
        ಹುಡುಕುವ ತಡಕುವ ಬಿಡುಗಡೆ ಕಾಣದ ಯಾತ್ರಿಕ ಹೃದಯ
        ಕಾಲನು ಕಟ್ಟಿಹ ಸಂಪ್ರದಾಯಗಳ ಬೇಡಿಗೆ ಇಲ್ಲ ದಯ
        ಎವೆ ಮಿಟುಕದ ನೀಲಾಗಸವೇ, ಮಾಂತ್ರಿಕ ನೀನು
        ಮಾಂತ್ರಿಕದಂಡದಿ ಒಡೆದು ತೆಗೆದಿರುವೆ ಈ ಜೈಲಿನ ಬಾಗಿಲನು

        ಈ ಜನಗಳ ಈ ಗಲಭೆಯ ನಡುವೆಯೆ ನಾ ಮೌನಿ
        ನೀ ಹೆಣೆದಿಹ ಮಾಂತ್ರಿಕಬಲೆ ಗುಟ್ಟುಗಳದೆ ಧ್ಯಾನಿ
        ಯಾವುದೊ ದೂರದ ನಿಗೂಢ ತಾಣದಿ ಬಲೆ ಹೆಣೆಯುವೆ ಜಾಣ
        ವಾಸ್ತವಲೋಕದ ರಕ್ತಿಮ ದಡಕ್ಕೆ ನಿನ್ನಯ ಆಗಮನ.

        ಹರಳು ಬೆಳಕುಗಳ ಹರಹಿನ ಮೇಲಕೆ ನಿನ್ನ ನೀಲಿ  ಹೊದಿಕೆ
        ಮಾತನೆ ಮರೆತಿಹ ಕನಸಿನ ನವಿಲಿನ ರೆಕ್ಕೆಯು ಸಮ ಅದಕೆ
        ಕಿರಾತಖಂಡಿತ ಧರೆರಕ್ತದ ಕಲೆ ಮರೆತಿವೆ ಕಣ್ಣು
        ಕಡೆಯಿಲ್ಲದ ಬಾನಿನ ಕಡೆ ನೆಗೆದಿದೆ ದೀಪದ ಹೂಕಣ್ಣು

        ಗಳಿತ ವಸ್ತ್ರಗಳ ಪಲಿತ ಮುಂಡಗಳ ಭಿಕ್ಷುಗಳದೆ ಸರಣಿ
        ಹಾದಿಯೊ ನಿಷ್ಕರುಣಿ.
       
        ಸಾಯಲು ನಡೆದಿಹ ಲಕ್ಷ ಲಕ್ಷಜನ ತುಂಬಿದ ಈ ಜೈಲು
        ಕತ್ತಲ ಸುತ್ತಲು ಹೊಗೆಯ ಮುಸುಕಿಹುದು ಈ ಧೂಳು
        ಎಲ್ಲ ಮುಳುಗುವುವು ನೀಲ ನಭದಲ್ಲಿ ಹಲವು ಹತ್ತು ಬಾಳು
        ಸ್ವಪ್ನ ವಿಸ್ತರಿತ, ಭಯ ವಿಹ್ವಲಿತ ಕಣ್ಣಿನ ಮನೆಪಾಲು

        ಚಿಕ್ಕೆಬೆಳಕಿರುವ ಹೊಳೆಯುವ ಬಾನಿನ ಕಡುಬಿಳಿ ಮೋಡಗಳ  ಮಡಿಲೊಳಗೆ
       
        ನಿದ್ದೆಯನರಿಯದ ನವಿರಿನ ಲೋಕವೆ ನಿನ್ನ ಅಂಜುಸ್ಪರ್ಶ
        ಇದೊ ಒಡೆದಿದೆ ಕ್ರಿಮಿಸಮ ಭೂಮಿಯ ಒಣಗಿದ ಕೋಶ.


                                             ಬೇಟೆ

        ಮುಂಜಾನೆ:
        ಆಕಾಶ, ಸೂರ್‍ಯನಕುದುರೆಯ ಕೆಳಹೊಟ್ಟೆಯ ಮೃದುನೀಲಿ,
        ಸುತ್ತಲೂ ಸೀಬೆಯ, ಸೀತಾಫಲದ ಮರಗಳು, ಗಿಳಿಗರಿ ಹಸಿರು
        ಉಳಿದಿರುವ ಒಂಟಿ ತಾರೆ
        ಯಾವುದೋ ಹಳ್ಳಿಯ, ಮದುವೆಮಂಚದ ರತಿಚಕಿತ ಹುಡುಗಿಯ ಹಾಗೆ
        ಅಥವಾ,
        ಸಾವಿರ ಸಂವತ್ಸರದಾಚೆ ಆ ಈಜಿಪ್ಷಿಯನ್ ಹುಡುಗಿ
        ನನ್ನ ನೈಲ್-ನೀಲಿ ದ್ರಾಕ್ಷಾರಸದ ಬಟ್ಟಲಿನಲ್ಲಿ
        ಅದ್ದಿದ ಎದೆ ನಡುವಿನ ಹವಳದ ಹಾಗೆ
        ಹಾಗೆ ಮಿರುಗಿದೆ ಈ ಗಗನದಲ್ಲಿ ಒಂಟಿ ನಕ್ಷತ್ರ.

        ಬಯಲುಸೀಮೆಯಿಂದ ಬಂದ ಕೂಲಿಕಾರರು
        ಶೀತಲ ರಾತ್ರಿಯಲ್ಲಿ ಉರಿಸುತ್ತಿರುವ ಗುಲ್‌ಮೊಹರ್ ಬೆಂಕಿ
        ಇನ್ನೂ ಉರಿಯುತ್ತಿದೆ,
        ಒಣಗಿದ ಅರಳಿಯ ಎಲೆಗಳಿಗೆ ಹೊಸಹೊಸ ಆಕಾರ.
        
        ಸೂರ್ಯನ ಬೆಳಕಿನಲ್ಲಿ ಈಗ, ಅದು ಕುಂಕುಮಕೆಂಪಲ್ಲ.
        ರೋಗಗ್ರಸ್ತ ಪಕ್ಷಿಯ ಹೃದಯದ, ಕರಗುವ ಬಯಕೆಯ ನಸುಹಸಿರು
        ಹಗಲಿನ ಬೆಳಕಿನಲ್ಲಿ ಆಕಾಶ ಮತ್ತು ಮಂಜು ತುಂಬಿದ ಕಾಡುಗಳು
        ಹೊಳೆಯುತ್ತಿವೆ,
        ನವಿಲುರೆಕ್ಕೆಯ ಹಾಗೆ.
         ಮುಂಜಾನೆ:
        ರಾತ್ರಿಯೆಲ್ಲಾ ಒಂದು
        ಚಪಲ ಚಂಚಲ ಕಂದು ಪುರುಷ ಹರಿಣ
        ಓಡಿದೆ, ನೆಗೆದಿದೆ,
        ಸುಂದರಿಯಿಂದ ಅರ್ಜುನ ಅರಣ್ಯದ
        ಚಿಕ್ಕೆಯಿಲ್ಲದ ಕಡುಗಪ್ಪು ರಾತ್ರಿಯಲ್ಲಿ
        ಸಿಕ್ಕಕೂಡದು ಚಿರತೆ ತೆಕ್ಕೆಯಲ್ಲಿ.

        ಅವನ ನಿರೀಕ್ಷೆಯೂ ಈ ಹಗಲಿಗಾಗಿ
        ಅದರ ಬೆಳಕಿನ ಒಡಲು ಅವನ ಹಾದಿ
        ಇಗೊ ಬಂದ
        ಹಸಿ ಹಸಿರು ಹುಲ್ಲುಗರಿ ಹಲ್ಲುಗಳ ನಡುವೆ
        ಹಸಿರು ದ್ರಾಕ್ಷಿಯ ಹಣ್ಣು ಹಸಿರು ಹೀಗೆ
        ಇಗೊ ಅವನು ಬಂದ
        ನದಿನೀರಿನ ಸುಡು ಶೀತಲ ಆಲೆಗಳ ಕಡೆಗೆ
        ಎವೆ ಮುಚ್ಚದೆ ಬಳಬಳಲಿದ ನಸು ಬೆಚ್ಚಿದ,
        ಬೆವರೊಡೆದ ದೇಹವನ್ನು
        ಹರಿಯುವ ಹೊಳೆಯಲಿ ಮುಳುಗಿಸಿ ಮೈಮರೆಯುವ ಕಡೆಗೆ
        ರಾತ್ರಿಯ ರಸರಹಿತ ಶೀತಲ ಗರ್ಭದಿಂದ
        ಹಗಲು ಜಿಗಿಯುವ ರೋಮಾಂಚನಕ್ಕೆ ವಶವಾಗುವ ಬಯಕೆ
        ಈ ನೀಲಿಯ ಕೆಳಗೆ, ಬಂಗಾರದ ಸೂರ್‍ಯಶಲಾಕೆಯಂತೆ ಚಿಮ್ಮಿದರೆ
        ಆ ಶಕ್ತಿಗೆ ಆ ಚೆಲುವಿಗೆ ಆ ಬಯಕೆಗೆ ಮೈಮರುಳು
        ಹರಿಣಿ ಹರಿಣಿ ಹರಿಣಿ.

        ಅಪರಿಚಿತ ಸದ್ದು.
        ನದಿಯ ನೀರು ಹಾಲವಾಣದ ಹೂಕೆಂಪು
        ಮತ್ತೊಮ್ಮೆ ಬೆಂಕಿಕಿಡಿ ಸಿಡಿತ
        ಬಿಸಿಬಿಸಿ ಬಡಿಸಿದ ಜಿಂಕೆಯ ಮೈಮಾಂಸ
       
        ನಕ್ಷತ್ರಗಳ ಕೆಳಗೆ, ಹುಲ್ಲುಹಾಸಿನ ಮೇಲೆ
        ಹಳೆಯ ಬೇಟೆಗಳ ಮಂಜುಮರೆ ಕಥೆಗಳು,
        ಸಿಗರೇಟಿನ ಹೊಗೆ,
        ಅನೇಕ ಮನುಷ್ಯರು, ನೀಟಾಗಿ ತೆಗೆದ ಬೈತಲೆ.
        ಅಲ್ಲಿ ಇಲ್ಲಿ ಬಂದೂಕುಗಳು.
        ಶಾಂತ, ಶೀತಲ, ಅಳುಕಿಲ್ಲದ ನಿದ್ದೆ.
                                                ಮೂಲ ಬಂಗಾಳಿ: ಜೀವನಾನಂದ ದಾಸ್(೧೮೯೯-೧೯೫೪)
                                                ಇಂಗ್ಲಿಷ್ ಅನುವಾದ: ಕ್ಲಿಂಟನ್ ಬಿ. ಸೀಲಿ
                                                         



ಶಿಬಿರದಲ್ಲಿ.....

                                                                                                                                                                               
        ಇಲ್ಲಿ, ಈ ಕಾಡಿನಂಚಿನಲ್ಲಿ ನನ್ನ ಟೆಂಟ್ ಮತ್ತು ನಾನು.
        ರಾತ್ರಿಯೆಲ್ಲಾ ಬಿಡದೆ, ತೆಂಕಣಗಾಳಿಯ ತಂಪು ತೆಕ್ಕೆಯಲ್ಲಿ
        ಬೆಳುದಿಂಗಳ ಒಡಲಿನಲ್ಲಿ
        ಎಡೆಬಿಡದೆ ಕೇಳಿಸಿದೆ ಬೆದೆ ಬಂದ ಜಿಂಕೆಯ ಕೂಗು
        ಅವಳು ಕರೆಯುವುದು ಯಾರಿಗಾಗಿ?

        ಈ ರಾತ್ರಿ ಎಲ್ಲೋ ಜಿಂಕೆಗಳ ಬೇಟೆ ನಡೆಯುತ್ತದೆ.
        ಈ ದಿನ ಬೇಟೆಗಾರರು ಕಾಡಿನೊಳಹೊಕ್ಕರು.
        .....ಅವುಗಳ ವಾಸನೆ ಹಿಡಿಯಲೆಂದು.
        ಇಲ್ಲಿ ನಾನು ಹೀಗೆ ಮಲಗಿದ್ದೇನೆ ಹಾಸಿಗೆಯ ಮೇಲೆ
        ನಿದ್ದೆಯ ಸುಳಿವೂ ಇಲ್ಲ
         ಈ ರಾತ್ರಿ, ವಸಂತದಲ್ಲಿ
       
        ಎಲ್ಲೆಲ್ಲೂ ಕಾಡಿನ ಬೆರಗು       
        ಬೆಳುದಿಂಗಳ ರುಚಿ ತುಂಬಿದ
        ವೈಶಾಖದ ಗಾಳಿ
        ಬೆದೆಹದದ ಜಿಂಕೆದನಿ ಇರುಳ ತುಂಬಾ.
        ನಡುಕಾಡಿನೊಡಲೊಳಗೆ
        -ಬೆಳುದಿಂಗಳ ನಿಲುಕಿನಾಚೆ-
        ಹರಿಣಗಳ ಕಿವಿ ನಿಗುರು ರೋಮ ನಿಮಿರು.
        ಅವಳ ಇರವನು ತಿಳಿದು,
        ಚಲಿಸಿದವು ಹರಿಣ.
       
        ಈಗ, ಈ ಬೆರಗು ತುಂಬಿದ ಇರುಳಿನಲ್ಲಿ
        ಬಂದಿದೆ ಅವುಗಳ ರತಿಸಮಯ
        ಕರೆಯುತ್ತಿದೆ ಗೆಳತಿಯ ಹೃದಯ.
        ಕಾಡಿನ ಮುಸುಕಿನ ಬೆಳುದಿಂಗಳ ನಸುಕಿನ ಅಭಯ.
        ದಾಹ ತೀರಿಸಿಕೊ, ಮೂಸು, ಮೈಕವಿ, ಸವಿ
        ವ್ಯಾಘ್ರಭಯರಹಿತ ಎನುವಂತೆ ಈ ರಾತ್ರಿ ನಮ್ಮದಿದು ಅಡವಿ.
       
        ಹರಿಣಗಳ ಹೃದಯ, ಈ ರಾತ್ರಿ ನಿರ್ಭಯ
        ಆತಂಕ ತಳ್ಳಂಕ ಇಲ್ಲ ಈ ತನಕ.
        ಇರುವುದೊಂದೇ ಒಂದು, ದಾಹ
        ಏನೆಂಥ ಮೈಪುಲಕ ಆಹ!
       
        ಚಿರತೆಗಳ ಎದೆಯಲ್ಲು ಇರಬಹುದು ರೋಮಾಂಚನ
        ಹರಿಣಿಚೆಲುವಿನ ಬೆರಗು ತುಂಬಿರುವ ನಯನ.
        ಕಾಮ ಕೆರಳುತ್ತದೆ, ಬಯಕೆ ಅರಳುತ್ತದೆ, ಕನಸು ಚಿಮ್ಮುತ್ತವೆ ಈ ರಾತ್ರಿ
        ಸುಗ್ಗಿ ತುಂಬಿದ ವನದ ಧಾತ್ರಿ.
       
        ಒಂದು, ಇನ್ನೊಂದು, ಅಗೊ ಅಗೊ ಮತ್ತೊಂದು, ಕಾಡು ಸೀಳುತ ಬಂತು ಜಿಂಕೆ ಸರಣಿ
        ನೀರ ಸಪ್ಪಳ ಹಿಂದೆ, ಬೇಕೀಗ ತರುಣಿ, ಬೆದೆ ಮರುಳು ಹರಿಣಿ.
        ಹಲ್ಲು ಮರೆತು, ಉಗುರು ಮರೆತು ಎಲ್ಲ ಮರೆತು ಅವಳ ಹೊರತು
        ಜೊನ್ನದಲ್ಲಿ ಮಿಂದು ಬಂದ ಸುಂದರಿ ನದಿ ಕುರಿತು.
        ಗಂಡು ಚಲಿಸುವಂತೆ ತನ್ನ ಉಪ್ಪುಹುಡುಗಿ ಕಡೆಗೆ,              
        ಬಂದವು ಈ ಜಿಂಕೆ.

        ಇಗೊ ನನಗೆ ವೇದ್ಯ:
        ಅವುಗಳ ಗೊರಸುಗಳ ನೂರು ದನಿ,
        ಹೆಣ್ಣು ಜಿಂಕೆಯ ಬೆದೆನರಳು ದನಿ,
        ನಾನಿನ್ನು ನಿದ್ರಿಸಲಾರೆ.
        ಇಲ್ಲಿ ಮಲಗಿರುವಂತೆ, ಅಲ್ಲಿ ಗುಂಡಿನ ಸದ್ದು
        ಮತ್ತೆ ಅದೊ ಕೇಳುತಿವೆ, ಭಯಚಕಿತ ಸದ್ದು.
        ಬೆಳುದಿಂಗಳ ನಡುವೆ, ಆ ಹರಿಣಿ ಇನ್ನೊಮ್ಮೆ ಕರೆದಿದೆ
        ನಾನಿಲ್ಲಿ ಬಿದ್ದಿರುವೆ ಒಂಟಿಯಾಗಿ.

        ಬಂದೂಕುಗಳ ಗುಡುಗು ಕೇಳಿದಾಗ
        ಹೆಣ್ಣು ಜಿಂಕೆಯ ಕೊರಳು ಕೂಗಿದಾಗ
        ನನ್ನ ಹೃದಯವನ್ನು ದಣಿವು ತುಂಬುತ್ತದೆ.

        ನಾಳೆ ಅವಳು ಮರಳುತ್ತಾಳೆ
        ಇರುಳಿಲ್ಲದ ಹಗಲಿನಲ್ಲಿ ಕಾಣುತ್ತಾಳೆ
        ಅವಳ ಸುತ್ತಲು ಸತ್ತ ಪ್ರಿಯತಮರ ಹೆಣರಾಶಿ.
        ಮನುಷ್ಯರು ಅವಳಿಗೆ ಇದನ್ನೆಲ್ಲ ಕಲಿಸಿದ್ದಾರೆ.

Monday, July 30, 2012

ಅನುಭವ ಮತ್ತು ತಲ್ಲೀನತೆ


ಕಣ್ತಪ್ಪಿನಿಂದ ಡಿಲೀಟ್ ಆಗಿದ್ದ ಈ ಬರವಣಿಗೆಯನ್ನು ಮತ್ತೆ ಇಲ್ಲಿ ಪ್ರಕಟಿಸಿದ್ದೇನೆ -ಎಚ್.ಎಸ್.ಆರ್.
ಅನುಭವ ಮತ್ತು ತಲ್ಲೀನತೆ
ಇದು ಕೂಡ, ನಮ್ಮೆಲ್ಲರನ್ನೂ ಕಾಡಿರಬಹುದಾದ ಉತ್ತರವಿಲ್ಲದ ಪ್ರಶ್ನೆ. ಯಾವುದೇ ಸಂಗತಿಯನ್ನು ತೀವ್ರವಾಗಿ ಅನುಭವಿಸುವುದಕ್ಕೂ ಅದನ್ನು ಕುರಿತು ಆಲೋಚಿಸುವುದಕ್ಕೂ ಇರುವ ಸಂಬಂಧದ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಅವು ಕಣ್ಣು, ಕಿವಿ, ಮೂಗು, ಚರ್ಮ ಮುಂತಾದ ಇಂದ್ರಿಯಗಳಿಂದ ಪಡೆಯುವ ಹಲವು ಬಗೆಯ ಅನುಭವಗಳಿರಬಹುದು ಅಥವಾ ಇವುಗಳಾಚೆಗೆ ಇದೆ ಎನ್ನಲಾದ ಮಾನಸಿಕವಾದ, ಭಾವನಾತ್ಮಕವಾದ ಕೆಲವೊಮ್ಮೆ ಅತೀಂದ್ರಿಯವೆಂದೂ ಕರೆಯಲಾಗುವ ಅನುಭವಗಳೇ ಇರಬಹುದು.  ಸಂಗೀತದ ಹಾಗೆ ಒಂದೇ ಒಂದು ಇಂದ್ರಿಯಕ್ಕೆ ಗೊತ್ತಾಗುವ ನೇರ ಅನುಭವ ಇರಬಹುದು ಅಥವಾ ಹಲವು ಇಂದ್ರಿಯಗಳ ಅನುಭವಗಳು ಸಂಕೀರ್ಣವಾಗಿ ಕಲೆತಿರುವ ಕೂಡುಅನುಭವ ಆಗಿರಬಹುದು. ಉದಾಹರಣೆಗೆ, ಗಂಡು-ಹೆಣ್ಣು ಕೂಡಿ ಪಡೆಯುವ ಅನುಭವವು ಎಲ್ಲ ಇಂದ್ರಿಯಗಳ ಕಟು-ಮಧುರ ಅನುಭವಗಳ ಸಂಕೀರ್ಣ ಹೆಣಿಗೆಯಲ್ಲವೇ? ನಾವು ನಮ್ಮ ವ್ಯಕ್ತಿತ್ವದ ಗಡಿಗೆರೆಗಳನ್ನು ದಾಟಿ, ಬೇರೊಂದರಲ್ಲಿ, ಕಳೆದುಹೋಗುವ ಆ ಪರಿ ಈ ಲೋಕದ ಎಷ್ಟು ಜನರಿಗೆ ಎಷ್ಟು ಬಾರಿ ಆದೀತು? ಬಹಳ ಬಹಳ ಅಪರೂಪ.
ನಮ್ಮ ಬಾಲ್ಯಾನುಭವಗಳ ಲೋಕದ ಮರುಕಳಿಕೆಯೂ ಹಾಗೆಯೇ. ಅವು ಮೂಡುವುದು ಇಂದ್ರಿಯಗಳ ಅನುಭವದ ಮರುಸೃಷ್ಟಿಯಾಗಿಯೋ ಅಥವಾ ಅವುಗಳನ್ನು ಮಾತುಗಳಲ್ಲಿ ಕಟ್ಟಿರುವ ನೆನಪು ಆಗಿಯೋ ನೀವೇ ಹೇಳಿ. ಆ ನೆನಪುಗಳನ್ನು ಬೇರೆಯವರಿಗೆ ಹೇಳಿದಾಗ ಅಲ್ಲ, ಸ್ವತಃ ನಾವೇ ಒಳಗಿನಿಂದ ಹೊರಗೆ ತಂದುಕೊಂಡಾಗ ನಿಜಕ್ಕೂ ಏನಾಗುತ್ತದೆ. ನಿಮಗೂ ಗೊತ್ತು. ಈಗ ಮೂಸುವ ಯಾವುದೋ ಗಂಧ, ಕೇಳುವ ಯಾವುದೋ ನಾದ, ಕಳೆದ ಅನುಭವಗಳ ಲೋಕಕ್ಕೆ ಲಗ್ಗೆಹಾಕಿ, ಮರೆತು ಮಲಗಿದ್ದ ಯಾವುದೋ ಲೋಕವನ್ನು ಮತ್ತೆ ಹುಟ್ಟಿಸುತ್ತದೆ. ಇಂಥ ಅನುಭವಗಳು ಎಲ್ಲಿ ಸ್ಟೋರ್ ಆಗಿರುತ್ತವೆ? ನಮ್ಮ ಮೆದುಳಿನಲ್ಲಿ ಬೇರೆ ಬೇರೆ ಇಂದ್ರಿಯಗಳ ಅನುಭವದ ದಾಖಲಾತಿ ಮತ್ತು ಸಂಗ್ರಹಕ್ಕೆಂದು ಮೀಸಲಾಗಿರುವ, ಜಾಗಗಳಲ್ಲಿಯೋ ಅಥವಾ ಭಾಷಿಕ ನೆನಪುಗಳ ಭಂಡಾರವೊಂದು ಇದೆಯೋ. ನಾವು ಯಾವಾಗಲೂ ಅನುಭವಗಳನ್ನು ಭಾಷೆಗೆ ಅನುವಾದ ಮಾಡಿಕೊಳ್ಳುತ್ತಿರುತ್ತೇವೆಯೇ?   
ಅದಿರಲಿ, ಈ ರೀತಿಯ ಅನುಭವಗಳನ್ನು ಪಡೆಯುವಾಗ ನಮ್ಮ  ಮೈ, ಮನಸ್ಸು ಮತ್ತು ಪ್ರಜ್ಞೆಗಳ ನಡುವಿನ ಸಂಬಂಧ ಹೇಗಿರುತ್ತದೆ ಎಂಬುದು ನಾನು ಇಲ್ಲಿ ಹುಡುಕುತ್ತಿರುವ ವಿಷಯ. ಅನುಭವದ ತೀವ್ರತೆಯನ್ನು ಹೇಳುವಾಗ, ತಲ್ಲೀನವಾಗುವುದು, ಮೈಮರೆಯುವುದು ಎಂಬ ಪದಗಳನ್ನು ನಾವು ಬಳಸುತ್ತೇವೆ. ನಿಜಕ್ಕೂ ಮರೆಯಬೇಕಾದ್ದು ಮನವನ್ನೋ ಮೈಯನ್ನೋ? ಕುವೆಂಪು ಅವರು ತಮ್ಮ ಹಸುರು ಎಂಬ ಕವಿತೆಯಲ್ಲಿ ಹೀಗೆ ಹೇಳುತ್ತಾರೆ:
ಹಸುರಿತ್ತಲ್ ಹಸುರತ್ತಲ್
ಹಸುರೆತ್ತಲ್ ಕಾಡಿನಲಿ
ಹಸುರಾದುದೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ            
ಎಂದು ಬರೆಯುತ್ತಾರೆ. ಅಂತೆಯೇ ಗಗನವನ್ನು ಮೈನೀಲಿಗಟ್ಟುವವರೆಗೆ ನೋಡಬೇಕೆಂದು ಹೇಳುತ್ತಾರೆ. ಇಂಗ್ಲಿಷ್ ಕವಿಯಾದ ಎಜ್ರಾ ಪೌಂಡ್ ಕೂಡ,
        ‘I stood still and was a tree amid the wood'
ಎನ್ನುತ್ತಾನೆ. ಹೀಗೆ ಅನುಭವದಲ್ಲಿ ಮೈಮರೆತಿರುವಾಗ ನಮ್ಮ ಮನಸ್ಸು ಏನು ಮಾಡುತ್ತಿರುತ್ತದೆ ಎನ್ನುವುದು ಮುಖ್ಯವಾದ ಪ್ರಶ್ನೆ. ಅದು ಆಲೋಚನೆಯಲ್ಲಿ ತೊಡಗಿರುವುದೇ? ತೊಡಗಿರಬೇಕೇ, ಆ ಅನುಭವನ್ನೇ ಕುರಿತು, ಆಗಲೇ ಯೋಚಿಸತೊಡಗಿದರೆ, ಅನುಭವದ ತೀವ್ರತೆಗೆ ಭಂಗ ಬರುತ್ತದೆಯೇ? ಆ ಅನುಭವವನ್ನು ಕುರಿತ ಹಾಗೆ ನಮ್ಮ ಮನಸ್ಸಿನಲ್ಲಿ ಅದುವರೆಗೆ ಮನೆಮಾಡಿದ್ದ ವಿಚಾರಗಳು, ಪೂರ್ವಾಗ್ರಹಗಳು, ಭಯಗಳು ಮತ್ತು ಆತಂಕಗಳು ಅನುಭವದ ಸ್ವರೂಪವನ್ನು ಬದಲಿಸುವುದಿಲ್ಲವೇ. ಸ್ವ-ಪ್ರಜ್ಞೆ ಎನ್ನುವುದೇ ತಲ್ಲೀನತೆಯ ಶತ್ರುವಾಗಿಬಿಡುವುದೆ? ಅಂತಹ ಪ್ರಜ್ಞೆಯಿಲ್ಲದ ಪ್ರಾಣಿಗಳ ಅನುಭವವು ಮನುಷ್ಯರದಕ್ಕಿಂತ ತೀವ್ರವೇ. ಭೂತಕಾಲ ಮತ್ತು ಭವಿಷ್ಯತ್ ಕಾಲಗಳ ಬಗ್ಗೆ ನಮಗಿರುವ ತಿಳಿವಳಿಕೆಯೇ ಅನುಭವದ ಸವಿಯನ್ನು ಹಾಳುಮಾಡುತ್ತದೆಯೇ? ಅನುಭವ ಆಗಿಹೋದ ನಂತರ, ಅದರ ಬಗ್ಗೆ ಆಲೋಚನೆ ಮಾಡುವುದು ಬೇರೆ. ಅನುಭವವನ್ನು ಪಡೆಯುತ್ತಿರುವಾಗಲೇ ಅದರ ಬಗ್ಗೆ ಆಲೋಚನೆ ಮಾಡುವುದು, ಮಾತನಾಡುವುದು ಬೇರೆ. ಕೆಲವರಂತೂ ಆಹಾ, ಎಷ್ಟು ಚೆನ್ನಾಗಿದೆ! ಎಂದು ಅನುಭವಕ್ಕೆ ಮಾತಿನ ಸರ್ಟಿಫಿಕೇಟ್ ಕೊಡುತ್ತಿರುತ್ತೇವೆ. ಬೇರೆ ಕೆಲವರು ಕಂಡುದನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯುವ ಹಪಹಪಿಯಲ್ಲಿ ಮುಳುಗಿಹೋಗಿ ಅನುಭವದ ಕ್ಷಣಗಳನ್ನೇ ಕಳೆದುಕೊಳ್ಳುತ್ತಾರೆ. ಇದೆಲ್ಲವೂ ಅನುಭವಗಳಿಂದ ಮಾಡುವ ಪಲಾಯನವೇ ಅಲ್ಲವೇ?      
ನಾವು ಮನಮರೆತು ಮೈನೆಲೆಯಲ್ಲಿ ಮಾತ್ರ ಅನುಭವ ಪಡೆಯುವುದು ಸಾಧ್ಯವಾದರೆ ಏನಾಗುತ್ತದೆ? ಈ ಸ್ಥಿತಿಯನ್ನು ಕುಮಾರವ್ಯಾಸನು ಅದ್ಭುತವಾಗಿ ಹೇಳಿದ್ದಾನೆ. ಶಾಪಗ್ರಸ್ತನಾಗಿ ಕಾಡಿನಲ್ಲಿದ್ದ ಪಾಂಡುರಾಜನು ಮಾದ್ರಿಯ ರೂಪಕ್ಕೆ ಮರುಳಾಗಿ ಶಾಪದ ಸಂಗತಿಯನ್ನೇ ಮರೆತು ಅವಳನ್ನು ಕೂಡುತ್ತಾನೆ. ಆಗಿನ ಅವನ ಸ್ಥಿತಿಯನ್ನು ಕವಿಯು ಪ್ರಜ್ಞೆ ಜಾನ್ವಂಘ್ರಿಕಟಿ ಪರಿಮಿತವಾಯ್ತು ಎಂದು ವರ್ಣಿಸುತ್ತಾನೆ. (ಪ್ರಜ್ಞೆಯು ಮೊಣಕಾಲು, ಕಾಲು ಮತ್ತು ಸೊಂಟಗಳಿಗೆ ಸೀಮಿತವಾಯಿತು.) ಶಾಪದ ಭಯವಿಲ್ಲದಾಗಲೂ ಸಂಭೋಗದ ಸುಖವು ಈ ರೀತಿಯ ತಲ್ಲೀನತೆಯನ್ನು ಅವಲಂಬಿಸುತ್ತದೆಯೇ? ಆಗ ವ್ಯಕ್ತಿಗೆ ತನ್ನ ಜೊತೆಗಾತಿ/ಜೊತೆಗಾರ ಜೀವಗಳ ಬೇಕುಬೇಡಗಳ ಬಗೆಗಿನ ಆಲೋಚನೆ ಇರುವುದೇ, ಇರಬೇಕೇ, ಇರಬಾರದೇ. ಅಥವಾ ಅದು ನಾನು-ನೀನು ಎಂಬ ಪರಸ್ಪರ ವ್ಯತ್ಯಾಸವೇ ಅಳಿದುಹೋದ ಒಂದುತನದ ಸ್ಥಿತಿಯೋ? ಆಗ ಬೇಂದ್ರೆಯವರು ಹೇಳಿದ ಹಾಗೆ ಇಬ್ಬರಿಗೂ ನಾಲ್ಕು ಕೈಗಳಿರುತ್ತವೆಯೇ? ಇಂತಹ ಸ್ಥಿತಿಯು, ನಿಜದಲ್ಲಿ ಪಡೆದುಕೊಳ್ಳಬಹುದಾದ ವಾಸ್ತವವೋ ಅಥವಾ ಮಿಂಚಿ ಮಾಯವಾಗುವ ಆದರ್ಶವೋ? ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚು.
ಇದೇ ಮಾತನ್ನು ಬೇರೆ ಅನುಭವಗಳಿಗೂ ಅನ್ವಯಿಸಬಹುದು. ಎಲ್ಲ ಕಡೆಯೂ ಅರಿಯುವಿಕೆ ಮತ್ತು ಇರುವಿಕೆಗಳ ನಡುವಿನ ದ್ವಂದ್ವವು ನಮ್ಮನ್ನು ಕಾಡುತ್ತದೆ. ಯಾವುದೇ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು, ತಿಳಿಯಬೇಕು ಎನ್ನುವ ಒತ್ತಡವೇ, ಅಪೇಕ್ಷೆಯೇ ಇರುವಿಕೆಯ ಸುಖಕ್ಕೆ ಅಡ್ಡಿಯಾಗುತ್ತದೆಯೇ? ಮತ್ತೆ ಕುವೆಂಪು ನೆನಪಾಗುತ್ತಾರೆ. ಅವರು ಪ್ರಾಣಿಗಳಿಗೂ ಮನುಷ್ಯರಿಗೂ ಹೋಲಿಕೆ ಮಾಡುತ್ತಾರೆ. ದನಕರುಗಳು ಸುಮ್ಮನೆ ಮೇಯುತ್ತಿರುತ್ತವೆ. ಅವಕ್ಕೆ ಅರಿಯುವ ಗೋಜು ಇಲ್ಲ. ಮನುಷ್ಯನಿಗೆ ಮಾತ್ರ ಈ ಗೋಜು.
        ನಾ ಮನುಜನು ಎನ್ನೆದೆಯಲ್ಲಿ ಅರಿವೆನ್ನುವ ಬಾವು
          ನೋವಾಗಿರೆ, ಕೀವಾಗಿರೆ ಬಾಳ್ಬೆಲ್ಲವೆ ಬೇವು..
          ಅರಿವಾಸೆಯ ಬಿಡು ಇರುವಾಸೆಯ ತೊಡು
          ಅರಿವಾಸೆಯೆ ಮಾಯಾಬಂಧ, ಇರುವುದೆ ಮುಕ್ತಿಯ ಆನಂದ.
ಆದರೆ, ಹೀಗೆ ಅರಿಯದೆ ಸುಮ್ಮನೆ ಇರುವ ಸ್ಥಿತಿಯು ಸ್ವತಃ ಕುವೆಂಪು ಅವರಿಗಾದರೂ ಸಾಧ್ಯವಾಯಿತೇ? ಹೇಳುವುದು ಕಷ್ಟ.
        ಹಾಗೆ ನೋಡಿದರೆ, ಪಶ್ಚಿಮದ ಕೆಲವು ವಿದ್ವಾಂಸರು ಈ ಬಗ್ಗೆ ಭಿನ್ನವಾಗಿ ಆಲೋಚಿಸಿದ್ದಾರೆ. ಉದಾಹರಣೆಗೆ ಫ್ರಾನ್ಸ್ ದೇಶದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾದ ಡೆಕಾರ್ಟೆಸ್, ಬಹಳ ಪ್ರಸಿದ್ಧವಾದ ‘I think, therefore I am’ ಎಂಬ ಮಾತನ್ನು ಹೇಳಿದ್ದಾನೆ. ನಾನು ಆಲೋಚನೆ ಮಾಡುತ್ತೇನೆ ಎನ್ನುವುದೇ ನಾನು ಬದುಕಿರುವುದಕ್ಕೆ ಸಾಕ್ಷಿ ಎಂದು ಈ ಮಾತಿನ ಅರ್ಥ. ಆಲೋಚನೆ ಮಾಡದವನು ಮನುಷ್ಯನೇ ಅಲ್ಲ ಎಂದು ಅವನ ಅಭಿಪ್ರಾಯ. ನಮಗೂ ಹಾಗೆಯೇ ಅನ್ನಿಸಬಹುದೇ? ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ವ್ಯತ್ಯಾಸವು, ಆಲೋಚನಾಶಕ್ತಿ ಹಾಗೂ ಬುದ್ಧಿಶಕ್ತಿಗಳೇ ಎಂದು ನಾವು ಹೇಳುತ್ತೇವೆ. ಆದರೆ ಬುದ್ಧಿವಂತರೆನಿಸಿಕೊಂಡವರು ತಮ್ಮ ಬದುಕುಗಳನ್ನು ನಿರ್ವಹಿಸುತ್ತಿರುವ ಬಗೆಯು ಶೋಚನೀಯವಾಗಿದೆಯಲ್ಲಾ! ಅದು ಹೋಗಲಿ ಎಂದರೆ, ಈ ಬುದ್ಧಿವಂತರು ಸಮಾಜಗಳ, ದೇಶಗಳ ಬದುಕನ್ನೇ ಅವನತಿಯ ಕಡೆಗೆ ಕರೆದೊಯ್ಯುತ್ತಿರುವರಲ್ಲಾ! ಇಂತಹ ಆಧುನಿಕ ಭಸ್ಮಾಸುರರನ್ನು ಮ್ಯಾನೇಜ್ ಮಾಡುವುದು ಹೇಗೆ? ಯಾರು?
        ಆದ್ದರಿಂದಲೇ ಮನುಷ್ಯನ ನಾಗರಿಕತೆಯ ಬೆಳವಣಿಗೆಯ ದಿಕ್ಕಿಗೂ, ಮನುಷ್ಯನ ಅಂತರಂಗದ ವಿಷಾದಕ್ಕೂ ಹತ್ತಿರದ ಸಂಬಂಧವಿದೆಯೇ ಎಂಬ ಅನಿಸಿಕೆ ಮೂಡುತ್ತದೆ. ನಾವು ಮುಂದಿನ ಹೆಜ್ಜೆಯೆಂದು ಇಟ್ಟಿದ್ದು, ಹಿಂದಿನ ಹೆಜ್ಜೆಯಾಗಿಬಿಟ್ಟಿದೆಯೇ? ನಾವು ಮತ್ತು ನಮ್ಮ ನಾಗರಿಕತೆಯು ವಾಪಸ್ ಹೋಗಲು ಸಾಧ್ಯವಿಲ್ಲದ ಸ್ಥಿತಿಯನ್ನು ತಲುಪಿ ದಶಕಗಳೇ ಕಳೆದಿವೆಯೇ?
        ಮಾತು ಎಲ್ಲಿಂದ ಎಲ್ಲಿಗೋ ಹೋಯಿತು. ಆದರೆ, ಮೂಲ ಪ್ರಶ್ನೆ ಅದೇ? ಬುದ್ಧಿ ಮತ್ತು ಭಾವನೆ ಎರಡೂ ಕೂಡ ಇಂದ್ರಿಯಗಳಿಂದ ಪಡೆಯಬಹುದಾದ ಅನುಭವಗಳ ತೀವ್ರತೆಗೆ ಅಡ್ಡಿಯಾಗುವ ಸಂಗತಿಗಳೇ? ಮನುಷ್ಯ ಮತ್ತು ವಸ್ತುಗಳ ನಡುವಿನ ಸಂಬಂಧಕ್ಕೂ ಮತ್ತು ಮನುಷ್ಯ ಹಾಗೂ ಮನುಷ್ಯರ ಸಂಬಂಧಕ್ಕೂ ಅಂತರ ಇದೆಯೇ. ಉದಾಹರಣೆಗೆ ಮಲ್ಲಿಗೆಯನ್ನು ಮೂಸುವ ಹಾಗೆ, ಜಿಲೇಬಿಯನ್ನು ತಿನ್ನುವ ಹಾಗೆ, ಮನುಷ್ಯರ ಜೊತೆಯಲ್ಲಿಯೂ ವರ್ತಿಸಲು ಸಾಧ್ಯವೇ, ಸಾಧುವೇ? ಕೆಲವರು ಹಾಗೆಯೇ ಇರುತ್ತಾರೆಯೇ. ಭಾವದ ಜೊತೆ ಮತ್ತು ಬುದ್ಧಿಯ ಹಿನ್ನೆಲೆ ಎರಡೂ ಇಲ್ಲದೆ, ಮನುಷ್ಯನಿಗೆ ಏನೂ ದಕ್ಕುವುದಿಲ್ಲ ಎನ್ನುವುದೇ ನಿಜವಾದರೆ, ತಲ್ಲೀನವಾದ, ಸಮಗ್ರವಾದ ಅನುಭವ ಎನ್ನುವುದು ಕೊನೆಗೂ ಬಿಸಿಲುಗುದುರೆಯೇ? ಮನುಷ್ಯನ ವಿಷಾದದ ಮೂಲವು ಇಲ್ಲಿದೆಯೇ? ನಮ್ಮ ಲೋಕದಲ್ಲಿ ಅಲ್ಲ, ಮನುಷ್ಯರಾಗಿ ನಾವು ಲೋಕವನ್ನು ಪಡೆಯುವ ಬಗೆಯಲ್ಲಿಯೇ ಅಸಮಾಧಾನದ, ಅಪೂರ್ಣತೆಯ, ಪ್ಯಾಶನೇಟ್ ಅಗದೆ ಬದುಕುವುದರ ಮೂಲಕಾರಣವೂ ಇದೆಯೇ.
        ಉತ್ತರ ನನಗಂತೂ ಗೊತ್ತಿಲ್ಲ. ಗೊತ್ತಿದ್ದರೆ ನಾನೂ ಮನುಷ್ಯನಾಗದೆ ದೇವರೇ ಆಗಿಬಿಡುತ್ತಿದ್ದೆ.(ಅಂದಹಾಗೆ ಆ ದೇವರುಗಳು ಹೇಗೆ ಇರುತ್ತಾರೆ?) ನಿರ್ಲಿಪ್ತರಾಗಿಯೋ ಅಥವಾ ಭಾವುಕರಾಗಿಯೋ? ಪು.ತಿ.ನ. ಅವರ ಅಹಲ್ಯೆ ನಾಟಕದಲ್ಲಿ ಬರುವ ದೇವತೆಗಳಂತೂ ಯಾವ ಲಜ್ಜೆಯೂ ಇಲ್ಲದೆ,
        ನಿರ್ಜರರಾವೆಮಗೇತರ ಭೀತಿ, ಸತತ ಬಿನದವೇ ನಮ್ಮಯ ರೀತಿ ಎನ್ನುತ್ತಾರೆ. ಮೊದಲಿಳೆಯ ಮಡದಿಯರು ಸಲುವರಮರರಿಗೆ ಎಂದು ಡಿಮ್ಯಾಂಡ್ ಮಾಡುತ್ತಾರೆ. ಮುಪ್ಪಿಲ್ಲದ ರೋಗವಿಲ್ಲದ ಆ ಸ್ಥಿತಿಗೆ ಅಹಂಕಾರ ಮತ್ತು ಆತ್ಮವಿಶ್ವಾಸಗಳೇ ಮೂಲವಾದವು. ಬೇಂದ್ರೆಯವರು ಇದನ್ನು ಅಮೃತದ ತೇಗಿನ ಮದ ಎಂದು ಕರೆದರು. ಮುಪ್ಪು, ರೋಗ, ದೈಹಿಕ ಅಸಮಾನತೆ ಮಾನಸಿಕ ಕುಗ್ಗುವಿಕೆಗಳಿಂದ ತುಂಬಿದ ನಮಗೆ ಸತತ ಬಿನದ (ಕೊನೆಮೊದಲಿಲ್ಲದ ಸಂತೋಷ) ಎನ್ನುವುದು ಸಾಧ್ಯವಿಲ್ಲದ ನಿರೀಕ್ಷೆ. ಹಾಗೆ ನೋಡಿದರೆ, ದೇವತೆ ಎನ್ನುವ ಕಲ್ಪನೆಯೇ ಮನುಷ್ಯರ ಕನಸು ಇರಬೇಕು.
        ನಮಗೆ ಮನುಷ್ಯರಿಗೆ, ಅನುಭವದ ತಣಿಯುವಿಕೆಯು, ಬಾಯಾರಿಕೆಯನ್ನು ಹಿಂಗಿಸುವುದಿಲ್ಲ. ಅದು ಮರಳಿನಲ್ಲಿ ಸುರಿದ ನೀರಿನಂತೆ ಇಂಗಿಹೋಗುತ್ತದೆ. ನಾವು ಮತ್ತೆ ಹೊಸ ಬಾಯಾರಿಕೆಯೊಂದಿಗೆ ಹೊಸ ನೀರಿಗಾಗಿ ಹಾತೊರೆಯುತ್ತೇವೆ. ಸಂಸ್ಕೃತದಲ್ಲಿ ಹೀಗೆ ಹೇಳುತ್ತಾರೆ: ಭೋಗದ ಬಯಕೆಯು ಉಪಭೋಗದಿಂದ ತಣಿಯುವುದಿಲ್ಲ. ನಮ್ಮ ಈ ಕಾಲದಲ್ಲಿ, ಕೊಂಡುಕೊಳ್ಳುವ ದಾಹದೊಂದಿಗೆ, ಒಂದು ಸೂಪರ್ ಬಜಾರಿನಿಂದ ಇನ್ನೊಂದಕ್ಕೆ ತಿರುಗುತ್ತಿರುವ ನಮಗೆ ಈ ಮಾತು ಒಂದು ಪಾಠ.                                     --------------------------

Wednesday, July 25, 2012

ತೋಮಾಸ್ ಟ್ರಾನ್ಸ್ ಟ್ರೋಮರ್ ಅವರ ಕವಿತೆಗಳು



 
ಅಕ್ಟೋಬರ್ ಚಿತ್ರ

ಇಗೊ, ತುಕ್ಕುಕಲೆ ಹರಡಿರುವ ದಿಕ್ಕೆಟ್ಟ ಹಡಗು
ಕಡಲೀಚೆಯ ಒಳನೆಲದಲಿ, ಇದರದೇನು ಕಾರ್ಯ?
ಭೂತಾಕಾರದ ಆರಿದ ದೀಪ, ಶೀತಲನೆಲದಲಿ ನಿಶ್ಚಲರೂಪ.
ಆದರೆ, ಮರಗಳ ತುಂಬ ಬಗೆಬಗೆ ಬಣ್ಣ:
ಆಚೆ ದಂಡೆಯ ನೆರವುಬೇಡುವ, ಅಳಿದುಳಿದ ಪಯಣಿಗರ
ಬಣ್ಣದಬಟ್ಟೆಯ ಬಾವುಟದ ಹಾಗೆ.

ಮನೆಯ ಹಾದಿಯಲ್ಲಿ ನಾನು.
ಹುಲ್ಲುಹಾಸಿಗೆ ನಡುವೆ ಬಿಳಿಬಿಳಿ ಅಣಬೆಗಳು.
ಯಾರದೋ ನೆರವಿಗೆ, ಹಂಬಲಿಸುವ ಬೆರಳುಗಳು.
ಆ ಅವನು, ನೆಲದಡಿಯ ಕಪ್ಪುಏಕಾಂತದಲ್ಲಿ,
ಬಿಕ್ಕಳಿಸಿ ಮಲಗಿ ಯುಗಗಳೇ ಕಳೆದಿವೆ.
ಓಡಾಡುವ ಈ ನಾವು,
ಭೂಮಿಯ ಬೆರಳುಗಳು. 
  
                                         ಒಂದು ಸಾವಿನ ಬಳಿಕ
ಹಿಂದೊಮ್ಮೆ ಒಂದು ಆಘಾತವಾಯ್ತು.
ಹೊಳೆಹೊಳೆಯುವ, ನಿಡುಬಾಲದ ಧೂಮಕೇತು ಉಳಿಯಿತು.
ಅದರಿಂದ ನಾವು, ಮನೆಯೊಳಗೆಯೆ ಬಂಧಿತರು.
ಅದರಿಂದ ನಮ್ಮ, ಟೆಲಿವಿಷನ್ ಬಿಂಬಗಳು ಮಂಜುಮಂಜು.
ಅದು, ಟೆಲಿಫೋನ್ ತಂತಿಗಳ ಮೇಲೆ ತಣ್ಣನೆಯ ಹನಿಗಳಾಗಿ ನೆಲೆಸುತ್ತಿದೆ.

ಈಗಲೂ ಮಾಗಿಯ ಸೂರ್ಯನ ಕೆಳಗೆ ನಿಧಾ..ನವಾಗಿ ಚಲಿಸಬಹುದು.
ಹಾದಿಬದಿ ಪೊದೆಯಲ್ಲಿ,  ಕೊನೆಕೊನೆ ಎಲೆ, ಉಸಿರೆಳೆಯುತ್ತಿವೆ ಹೀ..ಗೆ
ಹಳೆಯ ಟೆಲಿಫೋನ್ ಡೈರೆಕ್ಟರಿಯಿಂದ ಹರಿದ ಪುಟಗಳ ಹಾ..ಗೆ.
ಹೆಸರುಗಳನ್ನು ನುಂಗಿದೆ ಮಂಜುಬಿಳಿಥಂಡಿ.

ಈಗಲೂ ಹೃದಯದ ಬಡಿತಗಳಿಗೆ ಸ್ಪಂದಿಸುವುದು ಎಷ್ಟೊಂದು ಸುಂದರ.
ಆದರೆ, ದೇಹಕ್ಕಿಂತ ನೆರಳುಗಳೇ ನಿಜವೆನಿಸುತ್ತದೆ ಮತ್ತೆಮತ್ತೆ.
ಕವಚ, ಕುಂಡಲ, ಶಿರಸ್ತ್ರಾಣಗಳ ಅಬ್ಬರದಲ್ಲಿ,
ಸಮುರಾಯ್ ಯೋಧ ಕಾಣುತ್ತಾನೆ ಕ್ಷುಲ್ಲಕನಂತೆ, ಪೆದ್ದನಂತೆ.


 



ಹರಿದು ಹಂಚಿಹೋದ ಭಕ್ತವೃಂದ
1
ನಾವು ಸಜ್ಜಾದೆವು, ನಮ್ಮ ಮನೆ ತೋರಿಸಿದೆವು.
ಅತಿಥಿ ಯೋಚಿಸಿದ: ನೀವೇನೋ ಸುಖವಾಗಿ ಬದುಕಿದ್ದೀರಿ.
ಕೊಳೆಗೇರಿ ಇರಬೇಕು, ನಿಮ್ಮೊಳಗಿನೊಳಗೆ
2
ಚರ್ಚಿನೊಳಗೆ ಕಂಬಗಳು, ಗೋಪುರಗಳು, ಸೀಲಿಂಗುಗಳು
ಕಡು ಬಿಳಿ ಬಣ್ಣ. ನಂಬಿಕೆಯೆಂಬ ಮುರಿದ ತೋಳನ್ನು
ಕಟ್ಟಿಹಿಡಿದಿರುವ ಪ್ಲಾಸ್ಟರ್ ಕ್ಯಾಸ್ಟಿನ ಹಾಗೆ.

3
ಚರ್ಚಿನೊಳಗೊಂದು ಭಿಕ್ಷಾಪಾತ್ರೆಯಿದೆ.
ನಿಧಾನವಾಗಿ ನೆಲಮಟ್ಟದಿಂದ ಮೇಲೇರುತ್ತದೆ,
ಭಕ್ತರ ಸಾಲುಗಳ ನಡುವೆ ತೇಲುತ್ತ ಚಲಿಸುತ್ತದೆ.
4
ಆದರೆ, ಚರ್ಚಿನ ಗಂಟೆಗಳು ನೆಲದ ಕೆಳಗೆ ಮರೆಯಾಗಿವೆ.
ಅವು ಒಳಚರಂಡಿಯ ಪೈಪುಗಳಲ್ಲಿ ನೇತಾಡುತ್ತಿವೆ,
ನಾವು ಹೆಜ್ಜೆಯಿಟ್ಟಾಗೆಲ್ಲ, ಗಣಗಣಗಣ ಗಂಟೆ ಬಾರಿಸುತ್ತವೆ.
5
ನಿದ್ದೆಯಲ್ಲಿ ನಡೆವ ನಿಕೋಡೆಮಸ್, ಆ ವಿಳಾಸಕ್ಕೆ
ಪಯಣ ಹೊರಟಿದ್ದಾನೆ. ಆ ವಿಳಾಸ ಯಾರ ಬಳಿ ಇದೆ?
ಗೊತ್ತಿಲ್ಲ. ಆದರೆ, ನಾವೆಲ್ಲ ಹೋಗುತ್ತಿರುವುದು ಅಲ್ಲಿಗೆ.


ಮಂಜುಗಡ್ಡೆಗಿಂತ ಕೆಳಗೆ
ನಮ್ಮನ್ನು ಪ್ರೀತಿಸದ ಪಾರ್ಟಿಯಲ್ಲಿ, ನಾವು ಅತಿಥಿಗಳು. ಕೊನೆಗೊಮ್ಮೆ , ಪಾರ್ಟಿ ತನ್ನ ಮುಖವಾಡವನ್ನು ಬದಿಗೆಸೆಯುತ್ತದೆ, ನಿಜರೂಪ ತೋರಿಸುತ್ತದೆ: ಅದು ಗೂಡ್ಸ್ ಗಾಡಿಗಳು ಹಳಿಬದಲಿಸುವ ಷಂಟಿಂಗ್ ನಿಲ್ದಾಣ. ಕವಿದ ಮಂಜಿನಲ್ಲಿ, ಕೊರೆವ ಹಳಿಗಳ ಮೇಲೆ ಶೀತಲ ರಾಕ್ಷಸರು ನಿಂತಿದ್ದಾರೆ. ಗಾಡಿಗಳ ಬಾಗಿಲುಗಳ ಮೇಲೆ ಬಿಳಿಸುಣ್ಣದ ಅಕ್ಷರಗಳು.
ಈ ಮಾತನ್ನು ಗಟ್ಟಿಯಾಗಿ ಹೇಳಲಾಗದು. ಇಲ್ಲಿ ಅಪರಿಮಿತವಾದ, ಅದುಮಿಟ್ಟ ಹಿಂಸೆಯಿದೆ. ಅದಕ್ಕೇ ಇರಬೇಕು, ಈ ಫರ್ನೀಚರ್ ಮತ್ತು ಈ ಪರದೆಗಳು ಅಷ್ಟೊಂದು ಭಾರ. ಇಲ್ಲಿಯೇ ಇರುವ ಇನ್ನೊಂದು ಸಂಗತಿಯನ್ನು ನೋಡುವುದು ಏಕಿಷ್ಟು ಕಷ್ಟ: ಮನೆಯ ಗೋಡೆಗಳ ಮೇಲೆ ಚಲಿಸುವ, ಮಿಂಚುವಮಂಕುವ ಮುಖಗಳ  ಅಬೋಧ ಅರಣ್ಯದ ಮೇಲೆ, ನುಸುಳುವ ಒಂದು ಹಿಡಿ ಸೂರ್ಯ ಮತ್ತು ಎಲ್ಲೂ ಯಾರೂ ದಾಖಲೆಮಾಡದ ಬೈಬಲ್ಲಿನಲ್ಲಿದೇ ಒಂದು ಮಾತು: ಎಲ್ಲರೂ ನನ್ನೆಡೆಗೆ ಬನ್ನಿ. ಏಕೆಂದರೆ, ನಾನೂ ನಿಮ್ಮಂತೆಯೇ. ಗೊಂದಲಗಳಿಂದ, ಪರಸ್ಪರ ವಿರೋಧಗಳಿಂದ ತುಂಬಿತುಳುಕುವವನು.
ಮರುದಿನ ಮುಂಜಾನೆ, ನಾನು ಬೇರೊಂದು ಊರಿನಲ್ಲಿ ಕೆಲಸ ಮಾಡಬೇಕು. ಸೂರ್ಯನು ಮೂಡುತ್ತಿರುವ ನೀಲಿನಭದ ನಡುವೆ, ನನ್ನ ಶರವೇಗದ ಪಯಣ. ಆಕಾಶ, ಕಡುನೀಲಿಯ ಸಿಲಿಂಡರಿನಂತೆ,  ನನ್ನನ್ನು ಸುತ್ತುವರಿದಿದೆ. ದೂರದಲ್ಲಿ, ಮಂಜಿನಪರದೆಯ ಮೇಲೆ ಓರಿಯನ್ ನಕ್ಷತ್ರಪುಂಜ ನೇತಾಡುತ್ತಿದೆ. ಸ್ಕೂಲ್ ಬಸ್ಸಿಗಾಗಿ ಕಾಯುತ್ತ, ಮಕ್ಕಳ ಗುಂಪು ನಿಂತಿದೆ, ಸದ್ದಿಲ್ಲದೆ, ಗದ್ದಲವಿಲ್ಲದೆ. ಈ ಮಕ್ಕಳ ಒಳಿತಿಗಾಗಿ ಯಾರೂ ಪ್ರಾರ್ಥನೆ ಮಾಡುತ್ತಿಲ್ಲ. ಕೂದಲು ಬೆಳೆಯುವಷ್ಟೇ ನಿಧಾನವಾಗಿ, ಬೆಳೆಯುತ್ತಿದೆ ಬೆಳಕು.

                                                                              ತೋಮಾಸ್ ಟ್ರಾನ್ಸ್ ಟ್ರೋಮರ್
                                                                ಅನುವಾದ: 
                                                                ಎಚ್.ಎಸ್. ರಾಘವೇಂದ್ರ ರಾವ್
------------------------------------------------------------------------------------

ನನ್ನ ಕವಿತೆಗಳು ಕೂಡುತಾಣಗಳು. ಸಾಂಪ್ರಾದಾಯಿಕವಾದ ಭಾಷೆ ಮತ್ತು ದೃಷ್ಟಿಕೋನಗಳು ಸಾಮಾನ್ಯವಾಗಿ ದೂರದೂರವೇ ಇಡುವ ವಾಸ್ತವದ ಹಲವು ನೆಲೆಗಳ ನಡುವೆ ಹಠಾತ್ತಾದ ಸಂಬಂಧವನ್ನು ಕಟ್ಟಿಕೊಡುವುದು ನನ್ನ ಉದ್ದೇಶ. ಮೊದಲ ನೋಟಕ್ಕೆ ವಿರೋಧಿಗಳೆಂದು ತೋರುವ ಸಂಗತಿಗಳೂ ದಿಟದಲ್ಲಿ ನೋಡಿದಾಗ, ಸಂಬಂಧಗಳೇ ಆಗಿರುತ್ತವೆ.
        ತೋಮಾಸ್ ಟ್ರಾನ್ಸ್ ಟ್ರೋಮರ್ ಅವರು ಈ ಬಾರಿ ನೊಬೆಲ್ ಬಹುಮಾನ ಪಡೆದಿರುವ ಸ್ವೀಡಿಶ್ ಕವಿ.
    

Saturday, June 30, 2012

ವಿಸ್ಲಾವಾ ಸಿಂಬೋರ್ಸ್ಕಾ ಅವರ ಕವಿತೆಗಳು


 ವಿಸ್ಲಾವಾ ಶಿಂಬೋರ್ಸ್ಕಾ (1923-2012) ಪೋಲ್ಯಾಂಡ್ ದೇಶದ ಪ್ರಸಿದ್ಧ ಕವಿ, ಪ್ರಬಂಧಕಾರ್ತಿ, ಚಿತ್ರಗಾರ್ತಿ ಮತ್ತು ಅನುವಾದಕಿ. ಇವರು, ತಮ್ಮ ಬದುಕಿನ ಬಹುಭಾಗವನ್ನು ಕ್ರಾಕೋ ನಗರದಲ್ಲಿ ಕಳೆದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ, ರೈಲುರಸ್ತೆಗಳನ್ನು ಕಟ್ಟುವ ಸಂಸ್ಥೆಯಲ್ಲಿ ಕೆಲಸಮಾಡಿ, ಹಿಟ್ಲರನ ಕಾನ್ಸೆಂಟ್ರೇಷನ್ ಶಿಬಿರಕ್ಕೆ ಹೋಗುವ ಅಪಾಯದಿಂದ ಪಾರಾದರು. ವೃತ್ತಪತ್ರಿಕೆಗಳು ಮತ್ತು ಸಾಹಿತ್ಯಕ ಪತ್ರಿಕೆಗಳಲ್ಲಿ ಕೆಲಸಮಾಡಿದರು. ಮೊದಮೊದಲು ಕಮ್ಯೂನಿಸ್ಟ್ ವಿಚಾರಧಾರೆಯಿಂದ ಕ್ರಮೇಣ ಅದರಿಂದ ದೂರವಾಗಿ, ಸರ್ಕಾರದ ಕೋಪವನ್ನು ಎದುರಿಸಿದರು. ಅವರ ಮೊದಲ ಪುಸ್ತಕವನ್ನು ಪ್ರಕಟಿಸಲು ಸರ್ಕಾರವು, ಮೂರು ವರ್ಷಗಳು ಅನುಮತಿ ಕೊಡಲಿಲ್ಲ.
‘That’s why we are alive’, ‘Questioning yourself’, ‘Salt’, ‘People on a Bridge’, “View with a grain of sand’ ಮುಂತಾದವು ಅವರ ಪ್ರಸಿದ್ಧ ಕವನಸಂಕಲನಗಳು. ಅವರ ಇಪ್ಪತ್ತು ಪುಸ್ತಕಗಳಲ್ಲಿ ಕೆಲವು ಅನೇಕ ಭಾಷೆಗಳಿಗೆ ಅನುವಾದವಾಗಿವೆ. ಶಿಂಬೋರ್ಸ್ಕಾ ಅವರಿಗೆ ,1996 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪಾರಿತೋಷಕ ಬಂದಿದೆ.
ಸುಮಾರು 350 ಕವಿತಗೆಳನ್ನು ಮಾತ್ರ ಬರೆದಿರುವ ಶಿಂಬೋರ್ಸ್ಕಾ ಅವರನ್ನು, ಈ ಬಗ್ಗೆ ಪ್ರಶ್ನಿಸಿದಾಗ, ನಮ್ಮ ಮನೆಯಲ್ಲಿ ಕಸದ ಬುಟ್ಟಿಯಿದೆ ಎಂದು ಉತ್ತರಿಸಿದ್ದರಂತೆ. ಅವರ ಕಾವ್ಯದಲ್ಲಿ ಖಚಿತತೆ ಮತ್ತು ವ್ಯಂಗ್ಯಗಳಿವೆ, ಜೀವನದ ವಾಸ್ತವ ಸಂಗತಿಗಳ ಚೌಕಟ್ಟಿನಲ್ಲಿ, ಚಾರಿತ್ರಿ ಹಾಗೂ ಜೈವಿಕ ಸಂದರ್ಭಗಳನ್ನೂ ಅಳವಡಿಸಿಕೊಳ್ಳಲು ಈ ಗುಣಗಳು ಅವರಿಗೆ ನೆರವಾಗಿವೆಯೆಂದು ಹೇಳಲಾಗಿದೆ. ಅವರ ನಾಲ್ಕು ಕವಿತೆಗಳ ಕನ್ನಡ ಅನುವಾದ ಇಲ್ಲಿದೆ. 



ನಮ್ಮ ಕಾಲದ ಮಕ್ಕಳು

ನಮ್ಮ ಕಾಲದ ಮಕ್ಕಳು ನಾವು.
ನಮ್ಮದು, ರಾಜಕೀಯದ ಕಾಲ.

ಹಗಲು ಇರುಳು,
ನಾವು, ನೀವು, ಅವರು
ಎಲ್ಲರು ಮಾಡುವ ಎಲ್ಲ ಕೆಲಸಗಳು,
ರಾಜಕೀಯ ವಿದ್ಯಮಾನ!

ನೀವು ಇಷ್ಟಪಟ್ಟರೂ ಅಷ್ಟೆ, ಪಡದಿದ್ದರೂ ಅಷ್ಟೆ.
ನಿಮ್ಮ ವಂಶವಾಹಿಗಳಲ್ಲಿ ಇತಿಹಾಸದ ರಾಜಕೀಯವಿದೆ
ಚರ್ಮದ ಬಣ್ಣಕ್ಕೆ ರಾಜಕೀಯದ ಅಂಟಿದೆ
ಕಣ್ಣಿನ ನೋಟದಲ್ಲಿ ರಾಜಕೀಯದ ನಂಟಿದೆ.

ನೀವಾಡುವ ಮಾತುಗಳಿಗೆ ರಾಜಕೀಯದ ಗಂಧವಿದೆ,
ನಿಮ್ಮ ಮೌನದ ಒಳಗೆ ಮಾತಿನ ಮಸಲತ್ತಿದೆ.
ಬಡಬಡಿಸಿದರು ಸರಿಯೆ, ಸುಮ್ಮನಿದ್ದರು ಸರಿಯೆ
ಅದು ಕೂಡ ಇದು ಕೂಡ ರಾಜಕೀಯ.

ಊರೆಲ್ಲ ಬಿಟ್ಟು, ಬೆಟ್ಟಗಳ ಕಡೆಗೆ ಹೊರಟಿರಾ?
ಸರಿ ಮತ್ತೆ, ಹಾಗಾದರೆ ನೀವು
ರಾಜಕೀಯದ ನೆಲದ ಮೇಲೆ ರಾಜಕಾರಣಿಯಂತೆ
ನಡೆಯುತ್ತಿದ್ದೀರಿ.

ರಾಜಕೀಯದ ಸುಳಿವಿಲ್ಲದ ಕವಿತೆಗಳೂ ರಾಜಕೀಯವೆ.
ಮೇಲೆ ಹೊಳೆಯುತ್ತಿದೆ ಚಂದ್ರಬಿಂಬ
ಅವನು ಕೂಡ ಈಗ ಚಂದ್ರನಲ್ಲ.
‘To be or not to be. That is the question’
ಪ್ರಶ್ನೆಯೇ? ಅದು ಎಂಥ ಪ್ರಶ್ನೆ!
ಮುದ್ದು ಗೆಳೆಯನೆ ಕೇಳು, ಇಲ್ಲೊಂದು ಸಲಹೆಯಿದೆ,
ಅದು ರಾಜಕೀಯದ ಭಾರಹೊತ್ತ ಪ್ರಶ್ನೆ.


ರಾಜಕೀಯ ಮಹತ್ವ ಪಡೆಯುವುದಕ್ಕೆ
ಮನುಷ್ಯನಾಗಿರುವುದು ಕೂಡ ಅನಿವಾರ್ಯವಲ್ಲ.
ಕಚ್ಚಾ ಪೆಟ್ರೋಲ್ ಅದರೂ ಸಾಕು ಅಥವಾ ರಸಗೊಬ್ಬರ
ಅಥವಾ ಮಾರುವ ಕೊಳ್ಳುವ ಯಾವುದೇ ಸರಕು.

ಅಥವಾ ಶೃಂಗಸಭೆಯಲ್ಲಿ ಬಳಸುವ ಮೇಜು ಹೇಗಿರಬೇಕು?
ಇದನು ಕುರಿತೂ ಚರ್ಚೆ ಹಲವು ಕಾಲ.
ಸಾವುಬದುಕಿನ ಚರ್ಚೆ ಮಾಡಬೇಕಿದೆ ನಾವು,
ಮೇಜು ಗುಂಡಗೆ ಇರಲೊ ಚಚ್ಚೌಕವೋ!

ಇದೆಲ್ಲದರ ನಡುವೆ, ಜನ ಸಾಯುತ್ತಿದ್ದರು,
ಪಶುಪಕ್ಷಿ ನಶಿಸುತ್ತಿದ್ದವು,
ಮನೆಗಳು ಉರಿಯುತ್ತಿದ್ದವು,
ಹೊಲಗಳು ಒಣಗುತ್ತಿದ್ದವು,
ಇಷ್ಟೆಲ್ಲ ರಾಜಕೀಯ ಇಲ್ಲದಿದ್ದ,
ಈಗ ಮರವೆಗೆ ಸಂದ
ಆ ಕಾಲದಂತೆಯೇ....

ಹೀಗೆ ಬಂದು ಹಾಗೆ ಹೋಗುವ ಈ ದಿನವನ್ನು
ನಾವೇಕೆ ಇಷ್ಟೊಂದು ಭಯದಿಂದ, ವಿಷಾದದಿಂದ ಎದುರಿಸುತ್ತೇವೆ?
ಉಳಿಯದಿರುವುದೆ ಅದರ ಸಹಜಗುಣವಲ್ಲವೇ?

ನಿಜ, ನಾವು ಬೇರೆ ಬೇರೆ,
ಎರಡು ಹನಿ ನೀರಿನಂತೆ.
ಆದರೂ, ಉಳಿವ ತಾರೆಯ ಕೆಳಗೆ ಬಿಡದೆ ಹುಡುಕುತ್ತೇವೆ
ಪ್ರೀತಿ ಒಗ್ಗಟ್ಟುಗಳ ರೀತಿಯನ್ನು
ಮುಗುಳುನಗೆ ಹರಿಸುತ್ತ, ಮುದ್ದಿಸುತ್ತ.

ವಿಸ್ಲಾವಾ ಸಿಂಬೋರ್ಕಾ



ಒಂದೇ ಒಂದು ಬಾರಿ
ಇಲ್ಲಿ ಯಾವುದೂ ಎಂದಿಗೂ ಮರಳಿ ನಡೆಯುವುದಿಲ್ಲ,
ಆದ್ದರಿಂದಲೆ ನಮಗೆ, ತಿದ್ದಿಕೊಳ್ಳುವ ಅವಕಾಶ ಇಲ್ಲವೇ ಇಲ್ಲ.
ಮಾಡಿದ್ದಕ್ಕೆ ಮರುಗಿ ಕೊರಗಿ ಬದಲಾಗುತ್ತೇವೆ
ಕಳೆದ ಕಾಲ ಮರಳಿ ಬರದೆ, ಕಾಣೆಯಾಗುತ್ತೇವೆ.

ನೀನು ಈ ಜಗತ್ತಿನ ಕಡುದಡ್ಡನಿರಬಹುದು
ಹಗಲು ಇರುಳು ಕುಡುಮಿ ಕುಡುಮಿ ಓದಿರಬಹುದು
ಆದರೆ, ಇಲ್ಲಿ ಸೆಪ್ಟೆಂಬರ್ ಪರೀಕ್ಷೆ ಇಲ್ಲ.
ಉಳಿದರೂ ಉರುಳಿದರು ಒಂದೆ ಅವಕಾಶ.

ಯಾವ ದಿನವೂ ನೆನ್ನೆಯ ನಕಲುಪ್ರತಿಯಲ್ಲ.
ಹೀಗೆಯೇ ಮುತ್ತುಕೊಟ್ಟು, ಹೀಗೆಯೇ ಅಪ್ಪಿಕೊಂಡು
ಹೀಗೆಯೇ ಹಿಗ್ಗಬೇಕೆಂದು, ಯಾವ ಇರುಳೂ
ಕೂಡ ಪಾಠ ಕಲಿಸುವುದಿಲ್ಲ.

ಒಂದು ದಿನ, ಯಾವುದೋ ಸೋಮಾರಿ ನಾಲಿಗೆ
ನಿನ್ನ ಹೆಸರ ಹೇಳಿತು, ಹಾಗೇ ಸುಮ್ಮನೆ
ಕೋಣೆಯೊಳಗೆ ಎಸೆದಂತೆ ಗುಲಾಬಿ, ಮಲ್ಲಿಗೆ
ಏನೆಂಥ ಬಣ್ಣ ಎಷ್ಟೊಂದು ಗಮ್ಮನೆ.

ಮರುದಿನ ಮುಂಜಾನೆ. ಬಳಿಯಲ್ಲೇ ನೀನಿರುವೆ,
ನನ್ನ ಕಣ್ಣು ತಿರುಗುತ್ತಿದೆ ಗಡಿಯಾರದ ಕಡೆಗೆ.
ಗುಲಾಬಿ? ಗುಲಾಬಿ? ಹಾಗೆಂದರೆ ಏನು?
ಅದು ಹೂವೇ, ಅದು ಹೂವೇ ಅಥವಾ ಬರಿ ಬಂಡೆ?  



ವಿಸ್ಲಾವಾ ಸಿಂಬೋರ್ಕಾ




ಪವಾಡಗಳ ಜಾತ್ರೆ


ಅತಿ ಸಾಮಾನ್ಯ ಪವಾಡ:
ಇಷ್ಟೊಂದು ಅತಿ ಸಾಮಾನ್ಯ ಪವಾಡಗಳು ನಡೆಯುತ್ತವೆ ಎನ್ನುವುದು.

ಸಾಮಾನ್ಯ ಪವಾಡಗಳು:
ನಟ್ಟನಡು ರಾತ್ರಿಯಲ್ಲಿ
ಕಾಣದ ನಾಯಿಗಳು ಬೊಗಳುವ ದನಿ

ಎಷ್ಟೋ ಪವಾಡಗಳಲ್ಲಿ ಇದೂ ಒಂದು:
ಗಾಳಿತುಂಬಿದ ಪುಟ್ಟ ಮೋಡ.
ಆದರೂ ಅದು ವಿಶಾಲವಾದ, ಭಾರವಾದ ಚಂದ್ರನನ್ನು ಮರೆಮಾಡಬಲ್ಲುದು.

ಒಂದು ಸಂಗತಿಯಲ್ಲಿ ಹಲವು ಪವಾಡಗಳು :
ನೀರಿನಲ್ಲಿ ಒಡಮೂಡಿರುವ ಆಲ್ಡರ್ ಮರ,
ಎಡ ಬಲವಾಗಿದೆ, ಬಲ ಎಡವಾಗಿದೆ
ಬುಡ ಮೇಲಾಗಿದೆ, ಎಲೆ ಚಿಗುರು ಕೆಳಗಿದೆ
ಎಂಥ ಕಿರಿಯಾಳದ ನೀರಿನಲ್ಲೂ
ಅದು ತಳವನ್ನು ತಲುಪುವುದಿಲ್ಲ.

ಪ್ರತಿದಿನದ ಪವಾಡ:
ದುರ್ಬಲವಾದ, ಸಡಿಲಗಾಳಿ.
ತಲ್ಲಣದ ಸಮಯದಲ್ಲಿ ಬುಡಮೇಲು ಬಿರುಗಾಳಿ.

ಸರಿಸಮನಾದ ಪವಾಡಗಳಲ್ಲಿ ಮೊದಲನೆಯದು:
ಹಸು, ಹಸು ಆಗಿರುವುದು.

ಯಾವುದಕ್ಕೂ ಎರಡನೆಯದಲ್ಲದ ಪವಾಡ:
ಇಂಥ ಹಣ್ಣಿನ ತೋಟ,
ಅಂಥ ಬೀಜದಿಂದ.

ಕೊಂಬು ಕಿರೀಟಗಳಿಲ್ಲದ ಪವಾಡ:
ಹತ್ತು ಕಡೆಗೆ ಹಾರುವ ಬಿಳಿ ಪಾರಿವಾಳಗಳು.

ಪವಾಡ. ಇದನ್ನು ಬೇರೆ ಯಾವ ಹೆಸರಿನಿಂದ ಕರೆಯೋಣ:
ಈ ದಿನ ಸೂರ್ಯ ಹುಟ್ಟಿದ್ದು ಮೂರು ಗಂಟೆ ಹದಿನಾಲ್ಕು ನಿಮಿಷಕ್ಕೆ
ಮತ್ತು ಮುಳುಗುತ್ತಾನೆ ಎಂಟು ಗಂಟೆ ಒಂದು ನಿಮಿಷಕ್ಕೆ.

ಮತ್ತೊಂದು ಪವಾಡ. ಇದು ಇನ್ನಷ್ಟು ಬೆರಗು ಮೂಡಿಸಬೇಕಿತ್ತು:
ನಮ್ಮ ಕೈಯಲ್ಲಿ ಆರಕ್ಕಿಂತ ಕಡಿಮೆ ಬೆರಳುಗಳಿವೆ,
ನಿಜ, ಆದರೆ ಅದು ಕೊನೆಗೂ ನಾಲ್ಕಕ್ಕಿಂತ ಜಾಸ್ತಿ.

ಪವಾಡ. ಸುಮ್ಮನೆ ಸುತ್ತಲೂ ನೋಡಿ.
ಲೋಕ ಎಲ್ಲೆಲ್ಲಿಯೂ ಇದೆ.

ಒಂದು ವಿಶೇಷ ಪವಾಡ. ಹಾಗೆ ನೋಡಿದರೆ ಪ್ರತಿಯೊಂದು ಸಂಗತಿಯೂ ಕೊಡುಗೆಯೇ:
ಆಲೋಚನೆಯನ್ನು ಮೀರಿದುದರ ಬಗ್ಗೆ
ಆಲೋಚಿಸಬಹುದು.

ವಿಸ್ಲಾವಾ ಸಿಂಬೋರ್ಸ್ಕಾ




ಕೆಲವು ಜನರು

ಯಾವಾಗಲೂ ಅಷ್ಟೆ.
ಯಾವುದೋ ದೇಶದಲ್ಲಿ,
ಸುಡುವ ಸೂರ್ಯನ ಕೆಳಗೆ, ಮೋಡಗಳ ಕೆಳಗೆ
ಕೆಲವು ಜನ ಓಡಿಹೋಗುತ್ತಿರುತ್ತಾರೆ,
ಕೆಲವರಿಗೆ ಹೆದರಿ.

ಬಿಟ್ಟುಹೋಗುತ್ತಾರೆ, ಒಂದಿಷ್ಟು ಬದುಕು,
ಬೀಜಬಿತ್ತಿದ ಹೊಲಗಳು, ಕೋಳಿಗಳು, ನಾಯಿಗಳು, ಕನ್ನಡಿಗಳು,
ಕನ್ನಡಿಯಲ್ಲಿ ನೋಡಿಕೊಳ್ಳುತ್ತಿರುವ ಬೆಂಕಿನಾಲಿಗೆಗಳು.

ಕುಸಿವ ಹೆಗಲಿನ ಮೇಲೆ ಪಾತ್ರೆಪಗಡಗಳು, ಗಂಟುಮೂಟೆಗಳು,
ದಿನದಿಂದ ದಿನಕ್ಕೆ, ಖಾಲಿಯಾದಂತೆಲ್ಲ ಭಾರವಾಗುವ
ಬಡಹೊಟ್ಟೆಪಾಡುಗಳು.

ಕಳ್ಳನಂತೆ ಪಯಣವನ್ನು ನಿಲ್ಲಿಸಿ, ಎಲ್ಲಿಯೋ ನೆಲಸುವವನೊಬ್ಬ
ಸದ್ದುಗದ್ದಲದಲ್ಲಿ, ಯಾರದೋ ರೊಟ್ಟಿಯನ್ನು ಯಾವನೋ ಕದ್ದ.
ಮತ್ತೊಬ್ಬ, ಸತ್ತ ಮಗುವಿನ ನಾಡಿಬಡಿತ ನೋಡುತ್ತಿದ್ದ.

ಮುಂದೆ ಚಾಚಿವೆ ಹಲವು ಹಾದಿಗಳು. ಬಿಡುಗಡೆಗೋ ಕೊನೆಕಡೆಗೋ?
ಅದೇಕೋ ಗುಲಾಬಿಬಣ್ಣ ತಳೆದ ನದಿಯಮೇಲೆ, ಇರಬಾರದ ಸೇತುವೆ.
ಅವರ ಸುತ್ತ, ಒಂದಿಷ್ಟು ಮದ್ದುಗಂಡು, ಒಮ್ಮೆ ಹತ್ತಿರದಲ್ಲಿ, ಒಮ್ಮೆ ದೂರದಲ್ಲಿ
ಅಗೊ, ಮೇಲೆ ಸುತ್ತುತ್ತಿದೆ ಹದ್ದುವಿಮಾನ.

ಅದೃಶ್ಯವಾಗಲು ಸಾಧ್ಯವಿದ್ದರೆ, ಎಷ್ಟೊಂದು ಚೆನ್ನ
ಅಥವಾ ಕಣ್ಣಿಗೆ ಕಾಣದ ಬಂಡೆಯ ಬಣ್ಣ?
ಕಾಣೆಯಾಗುವುದಂತು ಇನ್ನಷ್ಟು ಚೆನ್ನ.
ಸ್ವಲ್ಪ ಕಾಲ ಅಥವಾ ಅನಂತಕಾಲ.

ಇನ್ನೂ ಏನೋ ಆಗಬೇಕಿದೆ. ಏನು? ಯಾವಾಗ?
ಅವರ ಕಡೆಗೆ ಯಾರೋ ಬರುತ್ತಾರೆ. ಯಾರು? ಯಾವಾಗ?
ಯಾವ ಯಾವ ಆಕಾರದಲ್ಲಿ? ಯಾವ ಯಾವ ಯಾವ ಉದ್ದೇಶದಿಂದ?
ಆಯ್ಕೆಯ ಅವಕಾಶ ಕೊಟ್ಟರೆ,
ಅವರು ಕೂಡ, ಶತ್ರುವಾಗುವ ಹಿಂಸೆ ಒಲ್ಲೆನೆನಬಹುದು,
ಇವರಿಗೂ ಬಾಳಿತ್ತು ತೆರಳಬಹುದು.


ವಿಸ್ಲಾವಾ ಸಿಂಬೋರ್ಕಾ
ಪೋಲೆಂಡ್


Thursday, May 31, 2012

ನೇಪಾಳದಲ್ಲಿ ನೋವು-ನಲಿವು


ಸಂಜೆದನಿ-2
ಕಳೆದ ವಾರ, ನಾನು ಮತ್ತು ಹಲವು ಆತ್ಮೀಯ ಗೆಳೆಯರು ನೇಪಾಳಕ್ಕೆ ಹೋಗಿ ಬಂದೆವು. ಹಿಮಾಲಯದ ಬಗ್ಗೆ, ಮಾತುಗಳಲ್ಲಿ ಏನು ಬರೆದರೂ ಅದು ಅನ್ಯಾಯ, ಅಹಂಕಾರ. ಆದರೆ, ಆ ಪರ್ವತದ ಶೀತಲ ಶಿಖರಗಳಿಗಿಂತ ತಣ್ಣಗೆ ಕೊರೆಯುವ ಒಂದು ಘಟನೆ ಮತ್ತು ಮನಸ್ಸಿಗೆ ಮುದನೀಡಿದ ಇನ್ನೊಂದು ಪ್ರಸಂಗಗಳನ್ನು ಹಂಚಿಕೊಂಡು, ಆ ಮೂಲಕ ನಿಮ್ಮೊಂದಿಗೆ ಮಾತನಾಡುವ ಹಂಬಲ ನನಗೆ.
ಶಾಶ್ವತಕುಮಾರಿಯ ಹಾಡು-ಪಾಡು
ನೇಪಾಳದ ರಾಜಧಾನಿಯಾದ ಕಠ್ಮಂಡು ನಗರದಲ್ಲಿ. ಕಠ್ಮಂಡು, ಕಾಷ್ಠಮಂಟಪ ಎಂಬ ಸಂಸ್ಕೃತಪದದ ನೇಪಾಳೀ ರೂಪವಂತೆ. ಅಲ್ಲಿನ ದೇವಾಲಯಗಳಲ್ಲಿ ಮರದ ಬಳಕೆ ಬಹಳ ಜಾಸ್ತಿ. ದರ್ಬಾರಾ ಸ್ಕ್ವೈರ್ ಆ ಊರಿನ ಆಕರ್ಷಕ ಟೂರಿಸ್ಟ್ ಸ್ಪಾಟ್. ಅಲ್ಲಿನ ಜಂಗುಳಿಯಲ್ಲಿ ಸುಮ್ಮನೆ ಹೆಜ್ಜೆ ಹಾಕುವಾಗ, ಒಂದು ಕಡೆ ಜನರ ಗುಂಪು ಕಾಣಿಸಿತು. ಏನೆಂದು ಕೇಳಿದರೆ, ಅದು ಕುಮಾರೀ ಮಾತಾ ಅವರ ಮಂದಿರ’, ಎಂದರು. ಸರಿ, ನಾವೆಲ್ಲರೂ ಅಲ್ಲಿ ಜಮಾಯಿಸಿದೆವು.
ಕುಮಾರಿ ಆ ಮನೆಯಲ್ಲಿ ವಾಸಿಸುವ ಪುಟ್ಟ ಹುಡುಗಿ. ಅವಳನ್ನು ದುರ್ಗಾ ದೇವತೆಯ ಅವತಾರವೆಂದು ತಿಳಿಯಲಾಗುತ್ತದೆ. ಈ ಸಂಪ್ರದಾಯವು ಬೌದ್ಧರು ಮತ್ತು ಹಿಂದೂಗಳು ಇಬ್ಬರಲ್ಲಿಯೂ ಬೇರುಬಿಟ್ಟಿದೆ. ಕುಮಾರಿಯನ್ನು, ಮೂರರಿಂದ ಐದು ವರ್ಷಗಳ ವಯೋಮಿತಿಯಲ್ಲಿರುವ  ನೂರಾರು ಹೆಣ್ಣುಮಕ್ಕಳ ಪೈಕಿ ಆರಿಸುತ್ತಾರೆ. ಅವಳು ಬೌದ್ಧ ಶಾಕ್ಯ ಸಮುದಾಯಕ್ಕೆ ಸೇರಿದವಳಾಗಿರಬೇಕು. ಅವಳಿಗೆ ಮೂವತ್ತೈದು ಶುಭಲಕ್ಷಣಗಳಿರಬೆಕು. ಆ ಲಕ್ಷಣಗಳು ಬಹುಮಟ್ಟಿಗೆ ಪರಿಪೂರ್ಣ ಸೌಂದರ್ಯಕ್ಕೆ ಸಂಬಂಧಿಸಿದವು. ಅದೂ ಅಲ್ಲದೆ ಅವು ದೇವಿಯ ಯಾವುದೋ ಒಂದು ಗುಣದ ಸಂಕೇತವೂ ಆಗಿರುತ್ತವೆ.
ಹೀಗೆ ಮೊದಲ ಹಂತದಲ್ಲಿ ಆಯ್ಕೆಯಾದ ಹುಡುಗಿಯರ ಜಾತಕಕ್ಕೂ ಮತ್ತು  ಆಗ ನೇಪಾಳವನ್ನು  ಆಳುತ್ತಿರುವ ರಾಜನ ಜಾತಕಕ್ಕೂ ಹೊಂದಾಣಿಕೆಯಾಗಬೇಕು. ಅದಾದ ಮೇಲೆ, ಆಯ್ಕೆಯಾದ ಹುಡುಗಿಯರ ಧೈರ್ಯಪರೀಕ್ಷೆ ! ಅವರನ್ನು ಕತ್ತಲುತುಂಬಿದ ಕೋಣೆಯಲ್ಲಿ ಕೂಡಿಹಾಕುತ್ತಾರೆ. ಅವರ ಸಂಗಡ, ಆಗತಾನೇ ಕತ್ತರಿಸಿ, ರಕ್ತ ಸುರಿಸುತ್ತಿರುವ ಕೋಣಗಳ ರುಂಡಗಳು. ಅವುಗಳ ಜೊತೆಗೆ, ಭಯಂಕರವಾದ ಭೂತಗಳ ಮುಖವಾಡಗಳನ್ನು ಹಾಕಿಕೊಂಡು ಕುಣಿಯುತ್ತಿರುವ ನರ್ತಕರು. ಸಾಮಾನ್ಯ ಹುಡುಗಿಯರು ಇಂಥದನ್ನು ನೋಡಿ ಹೆದರಿ ನಡುಗುತ್ತಾರೆ. ಆದರೆ ದೇವಿಯ ಅವತಾರವೇ ಆದ ಮಗು, ಇದಕ್ಕೆಲ್ಲ ಬೆದರದೆ, ಬೆಚ್ಚದೆ ಉಳಿಯತ್ತಾಳೆ. ಅವಳು ಮುಂದಿನ ಕುಮಾರಿ ಮಾತೆಯಾಗಿ ಆಯ್ಕೆಯಾಗುತ್ತಾಳೆ.
        ಅನಂತರ, ಈ ಮನೆಯಲ್ಲಿ-ಮಂದಿರದಲ್ಲಿ ಅವಳ ದಿವ್ಯಜೀವನ ಮೊದಲಾಗುತ್ತದೆ. ಅವಳು ಆ ಮಂದಿರದ ಶಾಶ್ವತನಿವಾಸಿ..ಹೆಚ್ಚೆಂದರೆ ವರ್ಷದಲ್ಲಿ ಎರಡು ಮೂರು ಬಾರಿ, ಹಬ್ಬ ಹರಿದಿನಗಳಂದು, ಅವಳು ರಥದಲ್ಲಿ ಮೆರವಣಿಗೆ ಹೋಗಬಹುದು. ಮಂದಿರದ ಆವರಣದಲ್ಲಿ ಮಾತ್ರ. ಆಗಲೂ ಅವಳ ಕಾಲುಗಳು ನೆಲಕ್ಕೆ ಸೋಕುವಂತಿಲ್ಲ. ಅಧ್ಯಯನ-ಆರಾಧನೆ-ಪೂಜೆ ಮಾಡುವುದು-ಪೂಜಿತಳಾಗುವುದು ಇಷ್ಟೇ ಅವಳ ಕೆಲಸ. ಇಲ್ಲ, ಇನ್ನೂ ಒಂದು ಕೆಲಸ ಇದೆ. ಆ ಮಂದಿರದ ಮೊದಲ ಮಹಡಿಯಲ್ಲಿ ಒಂದು ದೊಡ್ಡ ಕಿಟಕಿಯಿದೆ. ಕುಮಾರಿಯು, ದಿನದಲ್ಲಿ ಎರಡು ಬಾರಿ, ಸರ್ವಾಲಂಕಾರಭೂಷಿತೆಯಾಗಿ ಆ ಕಿಟಕಿಯಲ್ಲಿ ಕಾಣಿಸಿಕೊಳ್ಳಬೇಕು; ಭಕ್ತಾದಿಗಳಿಗೆ ಆಶೀರ್ವಾದ ಮಾಡಬೇಕು. ಆ ದಿನ ಅಲ್ಲಿ ಸೇರಿದ್ದ ಭಕ್ತರ ಜಂಗುಳಿಯಲ್ಲಿ ಬೆಂಗಳೂರಿನಿಂದ ಬಂದ ನಾವು ಹದಿನೈದು ಜನರೂ ಇದ್ದೆವು. ಆ ಮಗು ಒಂದೆರಡು ನಿಮಿಷ ಅಲ್ಲಿ ನಿಂತುಕೊಂಡು, ಕೈ ಎತ್ತಿ ಭಕ್ತರಿಗೆ ಆಶೀರ್ವಾದಮಾಡಿ ಮತ್ತೆ ಒಳಗೆ ಹೋಯಿತು.
        ಆ ಮಂದಿರವಾಸದ ಅವಧಿಯಲ್ಲಿ, ಅವಳ ಮತ್ತು ಅವಳ ಮೇಲ್ವಿಚಾರಕರ ಖರ್ಚು-ವೆಚ್ಚಗಳನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಈ ಮಂದಿರವಾಸವು, ಕುಮಾರಿಯು ಮೈನೆರೆದ ದಿನ ಮುಗಿಯುತ್ತದೆ. ಅಷ್ಟೇ ಅಲ್ಲ, ಬೇರೆ ಯಾವುದೇ ಕಾರಣದಿಂದ ಗಾಯವಾಗಿ, ಒಂದೆರಡು ಹನಿ ರಕ್ತ ಚೆಲ್ಲಿದರೂ ಅವಳ ಕುಮಾರಿಪಟ್ಟ ಮುಗಿದಂತೆಯೇ. ಆಮೇಲೆ, ಅವಳು ತನ್ನ ಮನೆಗೆ ಹಿಂದಿರುಗಬೇಕು. ಆ ಮಗುವಿಗೆ ಪುಟ್ಟ ಮೊತ್ತದ ಪಿಂಚಣಿ ಕೂಡ ಸಿಗುತ್ತದೆ. ಆದರೆ, ಅವಳು ಜೀವಮಾನಪರ್ಯಂತ ಮದುವೆಯಾಗುವಂತಿಲ್ಲ. ಆ ಅರ್ಥದಲ್ಲಿ ಅವಳು ಕೊನೆಯ ಉಸಿರು ಇರುವವರೆಗೆ ಕುಮಾರಿಯೇ. ಅವಳ ಮನಸ್ಸಿನಲ್ಲಿ ಯಾವ ಭಾವನೆ, ಯಾವ ವಿಚಾರಗಳು ಮಿಂಚಿ ಮಾಯವಾಗುತ್ತಿರಬಹುದು ಎನ್ನುವುದರ ಬಗ್ಗೆ, ಸಮುದಾಯಗಳು ತೋರಿಸುವ ದಿವ್ಯನಿರ್ಲಕ್ಷ್ಯ, ಅಚ್ಚರಿ ಹುಟ್ಟಿಸುವಂತಹುದು
        ನಾವು ಕೂಡ ಆ ಹುಡುಗಿಯನ್ನು ನೋಡಿದೆವು. ಆ ಮುಗ್ಧಮುಖದ ಹಾವಭಾವಗಳಿಗೆ ಸಾಕ್ಷಿಯಾದೆವು. ಒಂದಷ್ಟು ಹೊತ್ತು, ಮೂರು ಕಾಸು ಬೆಲೆಯಿಲ್ಲದ ನಿಟ್ಟುಸಿರು ಬಿಟ್ಟೆವು. ಸುತ್ತಮುತ್ತಲ ಶಿಲ್ಪ, ಚಿತ್ರಗಳ ಫೋಟೋ ಹಿಡಿದುಕೊಂಡು ಮನೆಗೆ ಬಂದೆವು. ಕರ್ನಾಟಕ ಕೂಡ ನೇಪಾಳಕ್ಕಿಂತ ಕಡಿಮೆಯಲ್ಲ ಎನ್ನುವುದು ನಮಗೂ ಗೊತ್ತು. ಧರ್ಮ, ಭಕ್ತಿ, ನಂಬಿಕೆ ಮುಂತಾದವುಗಳ ಹೆಸರಿನಲ್ಲಿ ನಮ್ಮ ನಡುವೆಯೇ ತುಂಬಿರುವ ಕಡುಕ್ರೌರ್ಯದ ಸಾಕ್ಷಿಯಾಗಿ ಆ ಮಗು ನನ್ನ ಮನಸ್ಸಿನಲ್ಲಿ ಈಗಲೂ ಮನೆಮಾಡಿದೆ.  


  

***************************
ಮಡಿವಾಳ ಮಾಚಮ್ಮನ ಕಥಾಪ್ರಸಂಗ
ನಾನು ಹೇಳುತ್ತಿರುವ ಎರಡನೆಯ ಘಟನೆ, ಕಠ್ಮಂಡುವಿನಿಂದ ಇನ್ನೂರು ಕಿಲೋಮೀಟರ್ ದೂರವಿರುವ ಪೊಖಾರದಲ್ಲಿ ನಡೆದಿದ್ದು. ಮಂಜುಮುಸುಕಿದ ಸಂಜೆ. ಸಾಕಷ್ಟು ಜೋರಾಗಿ ಸುರಿಯುತ್ತಿರುವ ಮಳೆ. ಕಣ್ಣೆದುರಿಗೆ ಹರಿಯುತ್ತಿರುವ ನದಿಯಲ್ಲಿ ಬೋಟಿಂಗ್ ಹೋಗಬೇಕೆಂಬ ನಮ್ಮ ಆಸೆ ಕ್ಷಣಕ್ಷಣಕ್ಕೂ ಕರಗುತ್ತಿದೆ. ಆಗ, ನದಿಯ ಬದಿಯ ಷೆಲ್ಟರಿನಲ್ಲಿ ನಡುಗುತ್ತ ನಿಂತಿದ್ದ ನಮ್ಮಲ್ಲಿ ಕೆಲವರಿಗೆ ಕಾಣಿಸಿದ್ದು ಈ ನೋಟ. ನದಿಯ ದಂಡೆಯಲ್ಲಿಯೇ ಇನ್ನಷ್ಟು ಕೆಳಗೆ, ಮೊದಲು ಕಂಡಿದ್ದು ಎರಡು ಕೈಗಳು. ಆ ಕೈಗಳಲ್ಲಿ ಕಡುನೀಲಿ ಬಣ್ಣದ ಜೀನ್ಸ್ ಪ್ಯಾಂಟು. ಒಂದೆರಡು ಕ್ಷಣಗಳಲ್ಲಿ, ಆ ನೀರಿನಲ್ಲಿ ಆ ಪ್ಯಾಂಟನ್ನು ಒಗೆಯುತ್ತಿರುವ ಹದಿಹರೆಯದ ನೇಪಾಳೀ ಸುಂದರಿ. ಆ ಮಳೆಯಲ್ಲಿ ಹಾಗೆ ಬಟ್ಟೆಒಗೆಯುತ್ತಿರುವ ಕರ್ಮಯೋಗಿನಿಯನ್ನು ಕಂಡು ಅಚ್ಚರಿಯೆನಿಸಿತು. ನೇಪಾಳದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯೂನಿಸ್ಟ್ ಪಕ್ಷಕ್ಕೆ ಹೊಂದಿಕೊಳ್ಳುವಂತೆ, ಅವಳು ಕೆಂಪುಬಣ್ಣದ ಮೇಲುಡುಪು ಧರಿಸಿದ್ದಳು. ಉಳಿದಂತೆ ಯಥಾಪ್ರಕಾರ ಜೀನ್ಸು. ಅವಳ ಕಥೆ ಅಲ್ಲಿಗೆ ಮುಗಿಯಲಿಲ್ಲ. ಕೆಲವು ನಿಮಿಷಗಳ ನಂತರ ಆ ನೀರಿನ ನಡುವೆ ಒಬ್ಬ ತರುಣ ಅವತರಿಸಿದ. ಸಾಕಷ್ಟು ಎತ್ತರದ ಕಡುಬಿಳಿಯ ಚೆಲುವ. ಅವನಿಗಂತೂ ಬನಿಯನ್ ಕೂಡ ಇಲ್ಲ. ಅವನು ಜೀನ್ಸ್ ಧರಿಸಿರುವ ಅರೆ ಬಾಹುಬಲಿ. ಆ ಮೇಲೆ ಶುರುವಾಯಿತು ಅವರ ಸ್ನಾನವೈಭವ. ಆ ಮಳೆಯಲ್ಲಿಯೇ ಒಂದು ಪ್ಲಾಸ್ಟಿಕ್ ಬಕೆಟ್ ತಂದಳು, ಅದರಲ್ಲಿ ನದಿಯ ನೀರನ್ನು ಮೊಗೆಮೊಗೆದು ಸುರಿದು ಅವನನ್ನು ಮೀಯಿಸಿದಳು. ಅವನ ಮೈಕೈಗಳನ್ನು ತಿಕ್ಕಿತಿಕ್ಕಿ ತೊಳೆದಳು. ನಾನು ಏನು ಕಡಿಮೆ ಎನ್ನುವಂತೆ ಅವನು ಕೂಡ ಆಗಾಗ ಅವಳಿಗೆ ಅಭಿಷೇಕ ಮಾಡುತ್ತಿದ್ದ. ಇದರ ನಡುವೆ ಪರಸ್ಪರ ನೀರೆರಚಿಕೊಳ್ಳುವ ಆಟ ಬೇರೆ. ಅಲ್ಲಿ ಸರಸ ಸಂಭಾಷಣೆ, ನಗು, ಹರ್ಷ, ಉಲ್ಲಾಸಗಳು ಕೋಡಿಒಡೆದು ಹರಿಯುತ್ತಿದ್ದವು. ಆದರೆ, ಪ್ರಮಾಣಮಾಡಿ ಹೇಳುತ್ತೇನೆ. ಇದೆಲ್ಲದರಲ್ಲಿ ಅಶ್ಲೀಲದ, ಲಂಪಟತೆಯ ಲವಲೇಶವೂ ಇರಲಿಲ್ಲ. ಇದ್ದದ್ದು ಕೇವಲ, ಕೇವಲ ಆನಂದ; ಅತ್ಯಂತ ಸಹಜವಾದ ಲೀಲೆ. ಗೆಳೆತನದ ಸಲಿಗೆಯಲ್ಲಿ ತೊಡಗಿದ್ದ ಆ ಎಳೆಯರಲ್ಲಿಯೂ ಅಷ್ಟೆ, ಪ್ರೀತಿಯಿಂದ ನೋಡುತ್ತಿದ್ದ ನಮ್ಮ ಕಣ್ಣುಗಳಲ್ಲಿಯೂ ಅಷ್ಟೆ. ನಾವು, ನಮ್ಮಂತಹವರು ನೋಡುತ್ತಿದ್ದೇವೆ ಎನ್ನುವುದು ಅವರ ಸಹಜತೆಗೆ ಒಂದಿನಿತೂ ಭಂಗ ತರಲಿಲ್ಲ. ಅದು ನಿರ್ಲಜ್ಜೆ ಅಲ್ಲ, ಮುಗ್ಧಪ್ರೀತಿ. ದೇಶ-ಕಾಲಗಳ ಎಲ್ಲೆ ಮೀರಿ ನಮ್ಮೆದುರಿಗೆ ಅವತರಿಸಿದ ದೇವದಂಪತಿಗಳಂತೆ ಅವರು ನಮ್ಮೆದುರು ಮೆರೆದರು. ಕತೆ-ಕಾದಂಬರಿ ಓದಿರುವ ನನಗೆ, ಕುವೆಂಪು ಅವರು ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಐತ-ಪೀಂಚಲು ಜೋಡಿಯನ್ನು ಶಿವ-ಪಾರ್ವತಿಯರಿಗೆ ಹೋಲಿಸಿದ ನೆನಪು.
ಸ್ವಲ್ಪ ಹೊತ್ತಿನ ನಂತರ ಇನ್ನೊಬ್ಬ ಗೆಳೆಯ ಅವರನ್ನು ಸೇರಿಕೊಂಡ. ಅವನು ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ ಎನ್ನುವಂತೆ ಅವರು ನಡೆದುಕೊಂಡರು. ಯಾರಲ್ಲಿಯೂ ಕೆಟ್ಟ ಗಿಲ್ಟ್ ಇಲ್ಲ, ಕುತೂಹಲವಿಲ್ಲ. ಕಾಡುವ ಕಣ್ಣುಗಳ ಇಣುಕುತೂಹಲ ಇಲ್ಲ.
ಮಳೆ ನಿಂತಿತು. ನಾವು ಹೋಟೆಲ್ ಕಡೆ ಹೊರಟೆವು. ನಮ್ಮ ಪಕ್ಕದಲ್ಲೇ, ಆ ಮೂವರು, ಒಗೆದ ಬಟ್ಟೆಗಳೊಂದಿಗೆ, ಸೈಕಲ್ ತಳ್ಳಿಕೊಂಡು ಮುಂದೆಹೋದರು. ಅವರ ಮುಖಗಳ ಸೌಂದರ್ಯ, ಆಹ್ಲಾದ ಮತ್ತು ಮುಗ್ಧತೆಗಳು ನಮ್ಮೊಳಗಿನ ಕೊಳೆ ತೊಳೆದವು, ಒಳಗೆ ನೆಲೆಸಿದವು.
ಆದರೆ, ಇದೆಲ್ಲದರ ನಡುವೆ, ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ, ಕಲ್ಕತ್ತಾದ ಸೂಳೆಗೇರಿಗಳಲ್ಲಿ ಬಾಳುಸವೆಸುವ ಸಾವಿರ ಸಾವಿರ ನೇಪಾಳಿ ಹುಡುಗಿಯರ ನೆನಪೂ ಕಾಡುತ್ತಿತ್ತು. ನಮ್ಮ ನಾಗರಿಕತೆಯ ಬಗ್ಗೆ ನಾಚಿಕೆ ಎನ್ನಿಸುತ್ತಿತ್ತು.     
                         ************************
ಕುಮಾರಿ ಮಾತಾ ಮತ್ತು ಮಡಿವಾಳ ಮಾಚಮ್ಮರನ್ನು ಅಕ್ಕಪಕ್ಕ ಇಟ್ಟು ನೋಡಿದಾಗ ನನ್ನಲ್ಲಿ ಮೂಡಿದ ಆಲೋಚನೆಗಳು ನಿಮ್ಮಲ್ಲಿಯೂ ಮೂಡಿರಬಹುದು. ಧರ್ಮ, ನೀತಿ ಮತ್ತು ನಡತೆಯನ್ನು ಕುರಿತ ನಮ್ಮ ಕಲ್ಪನೆಗಳು ಎಲ್ಲಿ ಹುಟ್ಟುತ್ತವೆ? ಪ್ರೀತಿ, ಸಮಾನತೆ ಮತ್ತು ಅನುಕಂಪಗಳ ನೆಲೆಯಲ್ಲಿಯೋ ಅಥವಾ ಭಯ, ನಿಯಂತ್ರಣ ಹಾಗೂ ಶೋಷಣೆಗಳ ಆಳದಿಂದಲೋ? ನಮ್ಮ ಧರ್ಮಗ್ರಂಥಗಳಲ್ಲಿ ಇಡಿಕಿರಿದಿರುವ ದೊಡ್ಡ ದೊಡ್ಡ ಮಾತುಗಳ ಬಗ್ಗೆ ನಾನು ಹೇಳುತ್ತಿಲ್ಲ. ನಮ್ಮಿಂದಲೇ ಹುಟ್ಟಿ, ನಮ್ಮನ್ನೇ ಆಳುತ್ತಿರುವ ನಂಬಿಕೆಗಳು, ಆಚರಣೆಗಳು ಮತ್ತು ವರ್ತನೆಗಳ ಬಗ್ಗೆ ಮಾತಾಡುತ್ತಿದ್ದೇನೆ. ಇವುಗಳಲ್ಲಿ ಅಡಗಿರುವ ಕ್ರೌರ್ಯ ಮತ್ತು ಅಮಾನವೀಯತೆಗಳ ಬಗ್ಗೆ ನಾವು ಕುರುಡಾಗಿದ್ದೇವೆ. ಕಳೆದ ಎರಡು ದಶಕಗಳಲ್ಲಿ ಇನ್ನಷ್ಟು ಮತ್ತಷ್ಟು ಕುರುಡಾಗಿದ್ದೇವೆ. ನಾವು ಉಳಿದವರ ಮೇಲೆ ಹೇರುವ ನೈತಿಕತೆಯ ಮಾನದಂಡಗಳು ವಿಶ್ವವ್ಯಾಪಿಯಾದ ಸತ್ಯವೇನೋ, ಉಳಿದುದೆಲ್ಲವೂ ಹೊಲಸೇನೋ ಎನ್ನುವಂತೆ ವರ್ತಿಸುತ್ತೇವೆ. ಮಗ್ದಲದ ಮರಿಯೆಯರ (Mary of Magdalene) ಮೇಲೆ ಕಲ್ಲೆಸೆಯಲು ಸದಾ ಸಿದ್ಧರಾಗಿರುತ್ತೇವೆ. ಈಚಿನ ವರ್ಷಗಳಲ್ಲಿ ನಮ್ಮ ದೃಶ್ಯಮಾಧ್ಯಮಗಳು ಇಂತಹ ಸಂಗತಿಗಳನ್ನು ವೈಭವೀಕರಿಸುತ್ತಿರುವ ಬಗೆಯು ಅಸಹ್ಯ-ಅಚ್ಚರಿಗಳನ್ನು ಮೂಡಿಸುತ್ತದೆ. ನಿಜವಾದ ಸಂತೋಷವನ್ನು ಅನುಭವಿಸಲು ಬೇಕಾದ ಮುಗ್ಧತೆ, ಮುಕ್ತತೆಗಳನ್ನು ಕಳೆದುಕೊಂಡಿರುವ, ನಾವು ಮತ್ತು ನಮ್ಮ ಸಮಾಜ ಎಲ್ಲರನ್ನೂ ಉಸಿರುಕಟ್ಟಿಸುತ್ತಿವೆಯೇ? ಸ್ವಾತಂತ್ರ್ಯ ಮತ್ತು ಸಮಾನತೆಗಳ ಮಾತುಗಳನ್ನು ಆಡುತ್ತಲೇ, ನಮ್ಮ ಸುತ್ತಲೂ ಇರುವ ಪ್ರತಿಯೊಬ್ಬರ ಬಗ್ಗೆಯೂ ನಮ್ಮ ನಿಲುವುಗಳನ್ನು ಘೋಷಿಸುತ್ತಾ, ಟೀಕೆ-ಟಿಪ್ಪಣಿಗಳನ್ನು ಹೇರುತ್ತಾ ಹೋಗುವುದು ಎಷ್ಟರ ಮಟ್ಟಿಗೆ ಸರಿ?

                                                                ಎಚ್.ಎಸ್. ರಾಘವೇಂದ್ರ ರಾವ್
                                                                14-04-2012
ಕುಮಾರಿ ಮಾತಾ ಅವರ ಮೆರವಣಿಗೆ ಮತ್ತು ಬದುಕನ್ನು ತೋರಿಸುವ ಎರಡು ವೀಡಿಯೋ ಲಿಂಕುಗಳನ್ನು ಇಲ್ಲಿ ಕೊಟ್ಟಿದ್ದೇನೆ: