ಬಂಗಾಳೀ ಭಾಷೆಯ ಹಿರಿಯ ಕವಿ ಜೀವನಾನಂದದಾಸ್(1899-1954) ಅವರ ಮೂರು ಕವಿತೆಗಳ ಅನುವಾದಗಳನ್ನು ಇಲ್ಲಿ ಕೊಟ್ಟಿದ್ದೇನೆ. ಇವರು ಸರಿಸುಮಾರು ನಮ್ಮ ಬೇಂದ್ರೆ ಮತ್ತು ಕುವೆಂಪು ಅವರ ಸಮಕಾಲೀನರು. ಬಹು ಮುಖ್ಯವಾದ ಕವಿತೆಗಳನ್ನು ಬರೆದವರು. ನಾನು ಈ ಅನುವಾದಗಳನ್ನು ಮಾಡಿ ದಶಕಗಳೇ ಕಳೆದವು. ಮೊದಲಸಲ ಇಲ್ಲಿ ಕೊಡುತ್ತಿದ್ದೇನೆ.
ನೀಲಿಮ
ಗಗನ ವಿತಾನ
ಹೊಳೆಬೆಳಕನು ತುಳುತುಳುಕುವ ಉದಯದ ಮುಗಿಲೇ,
ನಡು
ಇರುಳಿನ ಕಡುನೀಲಿಯೆ, ಕೊನೆಯಿಲ್ಲದ ಚೆಲುವೆ
ಮರಮರಳಿಯು ನೀ ಕಾಣುವೆ ಈ ನಗರದ ಮೇಲೆ
ಗತಿಯಿಲ್ಲದ ಈ ನಗರದ ಸೆರೆಗೋಡೆಯ ಮೇಲೆ
ಇಲ್ಲಿ ಹರಿಯುವುದು ಹೊಗೆಹಾವಿನ ನುಲಿನುಲಿಯುವ ನೀಲಿ
ಅನ್ನವು ಬೇಯುವ, ಒಡಲಬೇಗೆಗಳ
ಸುಡುಬೆಂಕಿಯ ಬೇಲಿ
ಮರುಭೂಮಿಯ ಬಿಸಿಯುಸಿರಲಿ ಮಿಂದಿಹ ಕೆಂಗಲ್ಲು
ಅದಕಿರುವುದು ಬಿಸಿಲ್ಗುದುರೆಯ ಇಲ್ಲದ ನೀರ್‌ಚೆಲ್ಲು
ಹುಡುಕುವ ತಡಕುವ ಬಿಡುಗಡೆ ಕಾಣದ ಯಾತ್ರಿಕ ಹೃದಯ
ಕಾಲನು ಕಟ್ಟಿಹ ಸಂಪ್ರದಾಯಗಳ ಬೇಡಿಗೆ ಇಲ್ಲ ದಯ
ಎವೆ
ಮಿಟುಕದ ನೀಲಾಗಸವೇ, ಮಾಂತ್ರಿಕ ನೀನು
ಮಾಂತ್ರಿಕದಂಡದಿ ಒಡೆದು ತೆಗೆದಿರುವೆ ಈ ಜೈಲಿನ ಬಾಗಿಲನು
ಈ
ಜನಗಳ ಈ ಗಲಭೆಯ ನಡುವೆಯೆ ನಾ ಮೌನಿ
ನೀ
ಹೆಣೆದಿಹ ಮಾಂತ್ರಿಕಬಲೆ ಗುಟ್ಟುಗಳದೆ ಧ್ಯಾನಿ
ಯಾವುದೊ ದೂರದ ನಿಗೂಢ ತಾಣದಿ ಬಲೆ ಹೆಣೆಯುವೆ ಜಾಣ
ವಾಸ್ತವಲೋಕದ ರಕ್ತಿಮ ದಡಕ್ಕೆ ನಿನ್ನಯ ಆಗಮನ.
ಹರಳು
ಬೆಳಕುಗಳ ಹರಹಿನ ಮೇಲಕೆ ನಿನ್ನ ನೀಲಿ ಹೊದಿಕೆ
ಮಾತನೆ ಮರೆತಿಹ ಕನಸಿನ ನವಿಲಿನ ರೆಕ್ಕೆಯು ಸಮ ಅದಕೆ
ಕಿರಾತಖಂಡಿತ ಧರೆರಕ್ತದ ಕಲೆ ಮರೆತಿವೆ ಕಣ್ಣು
ಕಡೆಯಿಲ್ಲದ ಬಾನಿನ ಕಡೆ ನೆಗೆದಿದೆ ದೀಪದ ಹೂಕಣ್ಣು
ಗಳಿತ
ವಸ್ತ್ರಗಳ ಪಲಿತ ಮುಂಡಗಳ ಭಿಕ್ಷುಗಳದೆ ಸರಣಿ
ಹಾದಿಯೊ ನಿಷ್ಕರುಣಿ.
ಸಾಯಲು ನಡೆದಿಹ ಲಕ್ಷ ಲಕ್ಷಜನ ತುಂಬಿದ ಈ ಜೈಲು
ಕತ್ತಲ ಸುತ್ತಲು ಹೊಗೆಯ ಮುಸುಕಿಹುದು ಈ ಧೂಳು
ಎಲ್ಲ
ಮುಳುಗುವುವು ನೀಲ ನಭದಲ್ಲಿ ಹಲವು ಹತ್ತು ಬಾಳು
ಸ್ವಪ್ನ ವಿಸ್ತರಿತ, ಭಯ ವಿಹ್ವಲಿತ ಕಣ್ಣಿನ ಮನೆಪಾಲು
ಚಿಕ್ಕೆಬೆಳಕಿರುವ
ಹೊಳೆಯುವ ಬಾನಿನ ಕಡುಬಿಳಿ ಮೋಡಗಳ ಮಡಿಲೊಳಗೆ
ನಿದ್ದೆಯನರಿಯದ ನವಿರಿನ ಲೋಕವೆ ನಿನ್ನ ಅಂಜುಸ್ಪರ್ಶ
ಇದೊ
ಒಡೆದಿದೆ ಕ್ರಿಮಿಸಮ ಭೂಮಿಯ ಒಣಗಿದ ಕೋಶ.
ಬೇಟೆ
ಮುಂಜಾನೆ:
ಆಕಾಶ, ಸೂರ್‍ಯನಕುದುರೆಯ ಕೆಳಹೊಟ್ಟೆಯ ಮೃದುನೀಲಿ,
ಸುತ್ತಲೂ ಸೀಬೆಯ, ಸೀತಾಫಲದ ಮರಗಳು, ಗಿಳಿಗರಿ ಹಸಿರು
ಉಳಿದಿರುವ ಒಂಟಿ ತಾರೆ
ಯಾವುದೋ ಹಳ್ಳಿಯ, ಮದುವೆಮಂಚದ ರತಿಚಕಿತ ಹುಡುಗಿಯ ಹಾಗೆ
ಅಥವಾ,
ಸಾವಿರ ಸಂವತ್ಸರದಾಚೆ ಆ ಈಜಿಪ್ಷಿಯನ್ ಹುಡುಗಿ
ನನ್ನ
ನೈಲ್-ನೀಲಿ ದ್ರಾಕ್ಷಾರಸದ ಬಟ್ಟಲಿನಲ್ಲಿ
ಅದ್ದಿದ ಎದೆ ನಡುವಿನ ಹವಳದ ಹಾಗೆ
ಹಾಗೆ
ಮಿರುಗಿದೆ ಈ ಗಗನದಲ್ಲಿ ಒಂಟಿ ನಕ್ಷತ್ರ.
ಬಯಲುಸೀಮೆಯಿಂದ ಬಂದ ಕೂಲಿಕಾರರು
ಶೀತಲ
ರಾತ್ರಿಯಲ್ಲಿ ಉರಿಸುತ್ತಿರುವ ಗುಲ್‌ಮೊಹರ್ ಬೆಂಕಿ
ಇನ್ನೂ ಉರಿಯುತ್ತಿದೆ,
ಒಣಗಿದ ಅರಳಿಯ ಎಲೆಗಳಿಗೆ ಹೊಸಹೊಸ ಆಕಾರ.
ಸೂರ್ಯನ ಬೆಳಕಿನಲ್ಲಿ
ಈಗ, ಅದು ಕುಂಕುಮಕೆಂಪಲ್ಲ.
ರೋಗಗ್ರಸ್ತ ಪಕ್ಷಿಯ ಹೃದಯದ, ಕರಗುವ ಬಯಕೆಯ ನಸುಹಸಿರು
ಹಗಲಿನ ಬೆಳಕಿನಲ್ಲಿ ಆಕಾಶ ಮತ್ತು ಮಂಜು ತುಂಬಿದ ಕಾಡುಗಳು
ಹೊಳೆಯುತ್ತಿವೆ,
ನವಿಲುರೆಕ್ಕೆಯ ಹಾಗೆ.
ಮುಂಜಾನೆ:
ರಾತ್ರಿಯೆಲ್ಲಾ ಒಂದು
ಚಪಲ ಚಂಚಲ ಕಂದು ಪುರುಷ ಹರಿಣ
ಓಡಿದೆ, ನೆಗೆದಿದೆ,
ಸುಂದರಿಯಿಂದ ಅರ್ಜುನ ಅರಣ್ಯದ
ಚಿಕ್ಕೆಯಿಲ್ಲದ ಕಡುಗಪ್ಪು ರಾತ್ರಿಯಲ್ಲಿ
ಸಿಕ್ಕಕೂಡದು ಚಿರತೆ ತೆಕ್ಕೆಯಲ್ಲಿ.
ಅವನ
ನಿರೀಕ್ಷೆಯೂ ಈ ಹಗಲಿಗಾಗಿ
ಅದರ
ಬೆಳಕಿನ ಒಡಲು ಅವನ ಹಾದಿ
ಇಗೊ
ಬಂದ
ಹಸಿ ಹಸಿರು ಹುಲ್ಲುಗರಿ ಹಲ್ಲುಗಳ ನಡುವೆ
ಹಸಿರು ದ್ರಾಕ್ಷಿಯ ಹಣ್ಣು ಹಸಿರು ಹೀಗೆ
ಇಗೊ
ಅವನು ಬಂದ
ನದಿನೀರಿನ ಸುಡು ಶೀತಲ ಆಲೆಗಳ ಕಡೆಗೆ
ಎವೆ
ಮುಚ್ಚದೆ ಬಳಬಳಲಿದ ನಸು ಬೆಚ್ಚಿದ,
ಬೆವರೊಡೆದ ದೇಹವನ್ನು
ಹರಿಯುವ ಹೊಳೆಯಲಿ ಮುಳುಗಿಸಿ ಮೈಮರೆಯುವ ಕಡೆಗೆ
ರಾತ್ರಿಯ ರಸರಹಿತ ಶೀತಲ ಗರ್ಭದಿಂದ
ಹಗಲು
ಜಿಗಿಯುವ ರೋಮಾಂಚನಕ್ಕೆ ವಶವಾಗುವ ಬಯಕೆ
ಈ
ನೀಲಿಯ ಕೆಳಗೆ, ಬಂಗಾರದ ಸೂರ್‍ಯಶಲಾಕೆಯಂತೆ ಚಿಮ್ಮಿದರೆ
ಆ
ಶಕ್ತಿಗೆ ಆ ಚೆಲುವಿಗೆ ಆ ಬಯಕೆಗೆ ಮೈಮರುಳು
ಹರಿಣಿ ಹರಿಣಿ ಹರಿಣಿ.
ಅಪರಿಚಿತ ಸದ್ದು.
ನದಿಯ
ನೀರು ಹಾಲವಾಣದ ಹೂಕೆಂಪು
ಮತ್ತೊಮ್ಮೆ ಬೆಂಕಿಕಿಡಿ ಸಿಡಿತ
ಬಿಸಿಬಿಸಿ ಬಡಿಸಿದ ಜಿಂಕೆಯ ಮೈಮಾಂಸ
ನಕ್ಷತ್ರಗಳ ಕೆಳಗೆ, ಹುಲ್ಲುಹಾಸಿನ ಮೇಲೆ
ಹಳೆಯ
ಬೇಟೆಗಳ ಮಂಜುಮರೆ ಕಥೆಗಳು,
ಸಿಗರೇಟಿನ ಹೊಗೆ,
ಅನೇಕ
ಮನುಷ್ಯರು, ನೀಟಾಗಿ ತೆಗೆದ ಬೈತಲೆ.
ಅಲ್ಲಿ
ಇಲ್ಲಿ ಬಂದೂಕುಗಳು.
ಶಾಂತ, ಶೀತಲ, ಅಳುಕಿಲ್ಲದ ನಿದ್ದೆ.
ಮೂಲ ಬಂಗಾಳಿ: ಜೀವನಾನಂದ
ದಾಸ್(೧೮೯೯-೧೯೫೪)
ಇಂಗ್ಲಿಷ್ ಅನುವಾದ: ಕ್ಲಿಂಟನ್ ಬಿ. ಸೀಲಿ
ಶಿಬಿರದಲ್ಲಿ.....
ಇಲ್ಲಿ, ಈ ಕಾಡಿನಂಚಿನಲ್ಲಿ ನನ್ನ ಟೆಂಟ್ ಮತ್ತು ನಾನು.
ರಾತ್ರಿಯೆಲ್ಲಾ ಬಿಡದೆ, ತೆಂಕಣಗಾಳಿಯ ತಂಪು ತೆಕ್ಕೆಯಲ್ಲಿ
ಬೆಳುದಿಂಗಳ ಒಡಲಿನಲ್ಲಿ
ಎಡೆಬಿಡದೆ ಕೇಳಿಸಿದೆ ಬೆದೆ ಬಂದ ಜಿಂಕೆಯ ಕೂಗು
ಅವಳು
ಕರೆಯುವುದು ಯಾರಿಗಾಗಿ?
ಈ
ರಾತ್ರಿ ಎಲ್ಲೋ ಜಿಂಕೆಗಳ ಬೇಟೆ ನಡೆಯುತ್ತದೆ.
ಈ
ದಿನ ಬೇಟೆಗಾರರು ಕಾಡಿನೊಳಹೊಕ್ಕರು.
.....ಅವುಗಳ ವಾಸನೆ ಹಿಡಿಯಲೆಂದು.
ಇಲ್ಲಿ ನಾನು ಹೀಗೆ ಮಲಗಿದ್ದೇನೆ ಹಾಸಿಗೆಯ ಮೇಲೆ
ನಿದ್ದೆಯ ಸುಳಿವೂ ಇಲ್ಲ
ಈ
ರಾತ್ರಿ, ವಸಂತದಲ್ಲಿ
ಎಲ್ಲೆಲ್ಲೂ ಕಾಡಿನ ಬೆರಗು
ಬೆಳುದಿಂಗಳ ರುಚಿ ತುಂಬಿದ
ವೈಶಾಖದ ಗಾಳಿ
ಬೆದೆಹದದ ಜಿಂಕೆದನಿ ಇರುಳ ತುಂಬಾ.
ನಡುಕಾಡಿನೊಡಲೊಳಗೆ
-ಬೆಳುದಿಂಗಳ ನಿಲುಕಿನಾಚೆ-
ಹರಿಣಗಳ ಕಿವಿ ನಿಗುರು ರೋಮ ನಿಮಿರು.
ಅವಳ
ಇರವನು ತಿಳಿದು,
ಚಲಿಸಿದವು ಹರಿಣ.
ಈಗ, ಈ ಬೆರಗು ತುಂಬಿದ ಇರುಳಿನಲ್ಲಿ
ಬಂದಿದೆ ಅವುಗಳ ರತಿಸಮಯ
ಕರೆಯುತ್ತಿದೆ ಗೆಳತಿಯ ಹೃದಯ.
ಕಾಡಿನ ಮುಸುಕಿನ ಬೆಳುದಿಂಗಳ ನಸುಕಿನ ಅಭಯ.
ದಾಹ ತೀರಿಸಿಕೊ, ಮೂಸು, ಮೈಕವಿ,
ಸವಿ
ವ್ಯಾಘ್ರಭಯರಹಿತ ಎನುವಂತೆ ಈ ರಾತ್ರಿ ನಮ್ಮದಿದು ಅಡವಿ.
ಹರಿಣಗಳ ಹೃದಯ, ಈ ರಾತ್ರಿ ನಿರ್ಭಯ
ಆತಂಕ ತಳ್ಳಂಕ ಇಲ್ಲ ಈ ತನಕ.
ಇರುವುದೊಂದೇ ಒಂದು, ದಾಹ
ಏನೆಂಥ ಮೈಪುಲಕ ಆಹ!
ಚಿರತೆಗಳ ಎದೆಯಲ್ಲು ಇರಬಹುದು ರೋಮಾಂಚನ
ಹರಿಣಿಚೆಲುವಿನ ಬೆರಗು ತುಂಬಿರುವ ನಯನ.
ಕಾಮ ಕೆರಳುತ್ತದೆ, ಬಯಕೆ ಅರಳುತ್ತದೆ, ಕನಸು ಚಿಮ್ಮುತ್ತವೆ ಈ ರಾತ್ರಿ
ಸುಗ್ಗಿ ತುಂಬಿದ ವನದ ಧಾತ್ರಿ.
ಒಂದು, ಇನ್ನೊಂದು, ಅಗೊ ಅಗೊ
ಮತ್ತೊಂದು, ಕಾಡು ಸೀಳುತ ಬಂತು ಜಿಂಕೆ ಸರಣಿ
ನೀರ ಸಪ್ಪಳ ಹಿಂದೆ, ಬೇಕೀಗ ತರುಣಿ, ಬೆದೆ ಮರುಳು ಹರಿಣಿ.
ಹಲ್ಲು ಮರೆತು, ಉಗುರು ಮರೆತು ಎಲ್ಲ ಮರೆತು ಅವಳ ಹೊರತು
ಜೊನ್ನದಲ್ಲಿ ಮಿಂದು ಬಂದ ಸುಂದರಿ ನದಿ ಕುರಿತು.
ಗಂಡು ಚಲಿಸುವಂತೆ ತನ್ನ ಉಪ್ಪುಹುಡುಗಿ ಕಡೆಗೆ,
ಬಂದವು ಈ ಜಿಂಕೆ.
ಇಗೊ ನನಗೆ ವೇದ್ಯ:
ಅವುಗಳ ಗೊರಸುಗಳ ನೂರು ದನಿ,
ಹೆಣ್ಣು ಜಿಂಕೆಯ ಬೆದೆನರಳು ದನಿ,
ನಾನಿನ್ನು ನಿದ್ರಿಸಲಾರೆ.
ಇಲ್ಲಿ ಮಲಗಿರುವಂತೆ, ಅಲ್ಲಿ ಗುಂಡಿನ ಸದ್ದು
ಮತ್ತೆ ಅದೊ ಕೇಳುತಿವೆ, ಭಯಚಕಿತ ಸದ್ದು.
ಬೆಳುದಿಂಗಳ ನಡುವೆ, ಆ ಹರಿಣಿ ಇನ್ನೊಮ್ಮೆ ಕರೆದಿದೆ
ನಾನಿಲ್ಲಿ ಬಿದ್ದಿರುವೆ ಒಂಟಿಯಾಗಿ.
ಬಂದೂಕುಗಳ ಗುಡುಗು ಕೇಳಿದಾಗ
ಹೆಣ್ಣು ಜಿಂಕೆಯ ಕೊರಳು ಕೂಗಿದಾಗ
ನನ್ನ ಹೃದಯವನ್ನು ದಣಿವು ತುಂಬುತ್ತದೆ.
ನಾಳೆ ಅವಳು ಮರಳುತ್ತಾಳೆ
ಇರುಳಿಲ್ಲದ ಹಗಲಿನಲ್ಲಿ ಕಾಣುತ್ತಾಳೆ
ಅವಳ ಸುತ್ತಲು ಸತ್ತ ಪ್ರಿಯತಮರ ಹೆಣರಾಶಿ.
ಮನುಷ್ಯರು ಅವಳಿಗೆ ಇದನ್ನೆಲ್ಲ ಕಲಿಸಿದ್ದಾರೆ.